ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕು ನಿವಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ತಜ್ಞರ ಸಲಹೆ ಮೇರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತದೆ. ಜೂನ್ 7 ರಿಂದ ಜೂನ್ 14 ರವರೆಗೆ ಅಂದರೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು. ಈಗಿರುವ ನಿಯಮಗಳೇ ಮುಂದೆಯೂ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.
ಸೋಂಕು ಶೇ.5 ಕ್ಕಿಂತ ಕಮ್ಮಿಯಾದ್ರೆ ವಾರದ ಬಳಿಕ ವಿನಾಯ್ತಿ ಕೊಡಲು ಸಿದ್ಧವಾಗಿದ್ದು, ಇದಕ್ಕೆ ಜನ ಸಹಕಾರ ಕೊಡಬೇಕು. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಧಾನಿಯವರೇ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಡಿಸಿಗಳು ಅವರ ಚೌಕಟ್ಟಿನಲ್ಲೇ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಸಿ.ಎಂ , ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಿದರು. ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಘೋಷಣೆಯಲ್ಲಿ ಏನಿದೆ?
ಪವರ್ ಲೂಂ ಕಾರ್ಮಿಕರಿಗೆ ತಲಾ 3 ಸಾವಿರ, ಮೀನುಗಾರರಿಗೆ 3 ಸಾವಿರ ರೂ., ಮುಜರಾಯಿ ದೇಗುಲಗಳ “ಸಿ”ವರ್ಗದ ಅರ್ಚಕರು, ಅಡುಗೆ ಕೆಲಸದವರು, ಸಿಬ್ಬಂದಿಗೆ ತಲಾ 3 ಸಾವಿರ, ಮಸೀದಿಗಳ ಪೇಶ್ ಇಮಾಮ್ ಮತ್ತು ಮೌಸಿನ್ ಗಳಿಗೆ 3 ಸಾವಿರ, 42 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದು, ಅವರಿಗೆ 3 ಸಾವಿರ ರೂ., 59 ಸಾವಿರ ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ,
59 ಸಾವಿರ ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ, ಶಾಲಾ ಮಕ್ಕಳಿಗೆ ಅರ್ಧ ಕೇಜಿ ಹಾಲುಪುಡಿ ವಿತರಣೆ ಮಾಡಲಾಗುತ್ತದೆ. ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ 5 ಸಾವಿರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುದಾನ ರಹಿತ ಶಿಕ್ಷಕರಿಗೆ 5 ಸಾವಿರ ಘೋಷಣೆ ಮಾಡಲಾಗಿದೆ.
ಎಂ.ಎಸ್.ಎಂ.ಇ ಹೊರತುಪಡಿಸಿ ಉಳಿದ ಕೈಗಾರಿಕೆಗಳ ಮೇ, ಜೂನ್ ಗಳಲ್ಲಿ ಮಾಸಿಕ ವಿದ್ಯುತ್ ಬಿಲ್ ಕಟ್ಟುವುದನ್ನು ಸರ್ಕಾರ ಮುಂದೂಡಿದೆ. ಈ ಮೂಲಕ ಕೈಗಾರಿಕೆಗಳಿಗೆ ಸಹಕಾರ ನೀಡಿದೆ.