ಗುಜರಾತ್ /ಅಹ್ಮದಾಬಾದ್ :- ಅರಬ್ಬಿ ಸಮುದ್ರ ಭಾಗದ ಗುಜರಾತ್‌ನ ಕರಾವಳಿಯಲ್ಲಿನ ಭಾರತದ ಸಮುದ್ರದಲ್ಲಿ ಸಂಚರಿಸುತ್ತಿದ್ದ ಪಾಕಿಸ್ತಾನ ದೋಣಿಯೊಂದನ್ನು ಭಾರತೀಯ ಕರಾವಳಿ ಕಾವಲುಪಡೆ ವಶಪಡಿಸಿಕೊಂಡಿದ್ದು, ಅದರಲ್ಲಿದ್ದ 10 ಜನರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಜನವರಿ 8 ರಂದು ರಾತ್ರಿ ಭಾರತೀಯ ಕರಾವಳಿ ಕಾವಲು ಪಡೆಯ ಹಡಗು ‘ಅಂಕಿತ್’ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಪಾಕಿಸ್ತಾನ ದೋಣಿ ‘ಯಾಸೀನ್’ ಅನ್ನು ವಶಪಡಿಸಿಕೊಂಡು ಅಲ್ಲಿದ್ದ 10 ಸಿಬ್ಬಂದಿಯನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ದೋಣಿಯನ್ನು ಪೋರ್‌ಬಂದರ್‌ಗೆ ತರಲಾಗಿದೆ ಎಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ 15ರಂದು ಸಹ ಇಂತಹದೇ ಕಾರ್ಯಾಚರಣೆ ನಡೆಸಿ 12 ಮಂದಿ ಪಾಕಿಸ್ತಾನಿ ಪ್ರಜೆಗಳಿದ್ದ ದೋಣಿಯನ್ನು ವಶಕ್ಕೆ ಪಡೆಯಲಾಗಿತ್ತು. ಡಿಸೆಂಬರ್ 20ರಂದು ₹ 400 ಕೋಟಿ ಮೌಲ್ಯದ 77 ಕೆ.ಜಿ ಹೆರಾಯಿನ್ ತುಂಬಿದ್ದ ಪಾಕಿಸ್ತಾನದ ದೋಣಿಯನ್ನು ವಶಕ್ಕೆ ಪಡೆದು, ಆರು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಪಾಕಿಸ್ತಾನದ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ.