ಕಾರವಾರ :- ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ 135 ವರ್ಷಗಳ ಪುರಾತನ ಪೋರ್ಚುಗೀಸ್ ಕಾಲದ ಕಟ್ಟಡವೊಂದನ್ನು ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕರ್ನಾಟಕ-ಗೋವಾ ಗಡಿ ಭಾಗದಲ್ಲಿನ ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡ ಈ ಕಟ್ಟಡವು ದಶಕಗಳ ಕಾಲ ಮುಚ್ಚಿಹೋಗಿತ್ತು.
ಎರಡು ಅಂತಸ್ತಿನ ಪುರಾತನ ಕಟ್ಟಡ ಇದಾಗಿದ್ದು , ದೇಶದ ಪ್ರಸಿದ್ಧ ದೂಧ್ ಸಾಗರ್ ಜಲಪಾತದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕ್ಯಾಸ್ಟೆಲ್ ರಾಕ್ ಬಳಿಯ ಬ್ರಗಾನ್ಜಾ ಘಾಟ್ ನಲ್ಲಿದೆ.
ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಪುರಾತನ ಕಟ್ಟಡ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಈ ಕಟ್ಟಡವನ್ನು ಸಂರಕ್ಷಿಸಿ, ಪಾರಂಪರಿಕ ಪ್ರಿಯರಿಗೆ ಪ್ರವಾಸದ ವೇಳೆ ತಂಗಲು ಅವಕಾಶ ಮಾಡಿಕೊಡುವ ಬಗ್ಗೆ ರೈಲ್ವೆ ಇಲಾಖೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ ಮಿಶ್ರಾ ನೀಡುವ ಮಾಹಿತಿಯ ಪ್ರಕಾರ, “1,200 ಚದರ ಅಡಿ ಇರುವ 2 ಅಂತಸ್ತಿನ ಈ ಕಟ್ಟಡ 1885 ರಲ್ಲಿ ಈ ಭಾಗದಲ್ಲಿ ಮೊದಲ ಬಾರಿಗೆ ಮೀಟರ್ ಗೇಜ್ ರೈಲು ಸಂಚಾರ ಪ್ರಾರಂಭವಾದಾಗ ರೈಲು ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿತ್ತು.
ಅಂತಸ್ತಿನ ಕೆಳಭಾಗದಲ್ಲಿ ಸ್ಟೇಷನ್ ಮಾಸ್ಟರ್ ಕೊಠಡಿ ಇದ್ದರೆ, ಅದೇ ಅಂತಸ್ತಿನಲ್ಲಿರುವ ಇತರೆ ಎರಡು ಕೊಠಡಿಗಳನ್ನು ಶೌಚಾಲಯ ಹಾಗೂ ಸಂಗ್ರಹಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ವಿವರಿಸಿದ ಅವರು, ಮೊದಲ ಅಂತಸ್ತಿನಲ್ಲಿ ಬೃಹತ್ ಡ್ರಾಯಿಂಗ್ ರೂಮ್, ಮಲಗುವ ಕೊಠಡಿ ಹಾಗೂ ಅಡುಗೆ ಮನೆಗಳೂ ಇವೆ, ಎರಡನೆ ಅಂತಸ್ತಿನಲ್ಲಿ ನಿಂತರೆ ವಿಹಂಗಮ ನೋಟ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
1885 ರಲ್ಲಿ ಈ ಎರಡು ಅಂತಸ್ತಿನ ಕಟ್ಟಡವನ್ನು ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ಗ್ಯಾರೆಂಟೀಡ್ ರೈಲ್ವೆ ಕಂಪನಿ ಇದನ್ನು ನಿರ್ಮಿಸಿತ್ತು.
ಗೋವಾದಲ್ಲಿ ಮರ್ಮಗೋವಾ ಬಂದರು ನಿರ್ಮಾಣದವೇಳೆ ಡಬ್ಲ್ಯುಐಪಿಜಿಆರ್ ನ ಐತಿಹಾಸಿಕ ಯೋಜನೆಯ ಭಾಗ ಇದಾಗಿತ್ತು ಎಂದು ಪಿ.ಕೆ ಮಿಶ್ರಾ ಹೇಳಿದ್ದಾರೆ.
ಮುಚ್ಚಿ ಹೋಗಿದ್ದು ಹೇಗೆ?
ಈ ಭಾಗದಲ್ಲಿ ಗೇಜ್ ಪರಿವರ್ತನೆ ವೇಳೆ ಪೋರ್ಚುಗೀಸರ ಕಾಲದ ಹಲವು ಕಟ್ಟಡಗಳು ನೆಲಸಮಗೊಂಡಿವೆ. ಈ ಸಂದರ್ಭದಲ್ಲಿ ಇದು ಸಹ ಪಾಳುಬಿದ್ದಿದೆ. ಈಗ ಪತ್ತೆಯಾಗಿರುವ ಕಟ್ಟಡ ಇತಿಹಾಸಕ್ಕೆ ಪುರಾವೆಯಾಗಿದೆ ಹಾಗೂ ಪೋರ್ಚುಗೀಸ್ ಅವಧಿಯ ಆಸಕ್ತಿದಾಯಕ ವಾಸ್ತುಶಿಲ್ಪದ ಲಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.