BREAKING NEWS
Search

ನಿವೃತ್ತ ನೌಕರನ ಸ್ನೇಹ ಬೆಳಸಿದ ಕಾಗೆ-ಮನೆಯ ಸದಸ್ಯ!

821

ಕಾರವಾರ :- ಕಾಗೆ ಎಂದರೆ ಸಾಕು ಎಲ್ಲರೂ ಅದನ್ನು ಓಡಿಸುವುದರಲ್ಲೇ ನಿರತರಾಗುತ್ತಾರೆ.ಕಾಗೆ ಮನೆಯಲ್ಲಿ ಕೂಗಿದರೆ ಸಾವು ಸಂಭವಿಸುತ್ತೆ, ನೆಂಟರು ಬರುತ್ತಾರೆ ಎಂದೆಲ್ಲಾ ನಂಬಿಕೆ ಇಂದಿಗೂ ನಮ್ಮ ಗ್ರಾಮಗಳಲ್ಲಿವೆ. ಮಹಾಲಯ ಅಮವಾಸೆ ದಿನ ಪೂರ್ವಜರನ್ನು ಸ್ಮರಿಸಿ ಕಾಗೆಗೆ ಎಡೆ ನೀಡುವ ಸಂಪ್ರದಾಯ ಸಹ ಇದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಮಾಧವನಗರದ ನಿವೃತ್ತ ಸರ್ಕಾರಿ ನೌಕರ ವಿಠಲ್ ಶಟ್ಟಿ ಎಂಬುವವರು ಕಳೆದ ಹತ್ತು ವರ್ಷದಿಂದ ಕಾಗೆಯೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾರೆ. ಇದೀಗ ಈ ಕಾಗೆ ಮನೆಯ ಸದಸ್ಯನಂತಾಗಿದ್ದು ಪ್ರತಿ ದಿನ ಇವರ ಮನೆಯಲ್ಲಿ ಆಹಾರ ಸೇವಿಸಲು ಬರುವ ಜೊತೆ ಮನೆಯ ಸದಸ್ಯನಂತಾಗಿದೆ.

ಬಾಂಧವ್ಯ ಬೆಳೆದಿದ್ದು ಹೇಗೆ?

ಕಳೆದ ಹತ್ತು ವರ್ಷದ ಹಿಂದ ಒಂದು ಕಾಲು ತುಂಡಾದ ಕಾಗೆ ತನ್ನ ಮರಿಗಳೊಂದಿಗೆ ಇವರ ಮನೆಯ ಬಳಿ ಹಾರಾಡುತಿತ್ತು. ಈವೇಳೆ ಅದರೊಂದಿಗಿದ್ದ ಮರಿ ಕಾಗೆ ಅಸ್ವಸ್ಥವಾಗಿ ಇವರ ಮನೆಯ ಬಳಿ ಕುಳಿತಿದೆ. ಇದನ್ನು ಗಮನಿಸಿದ ಅವರು ಅದಕ್ಕೆ ಉಪಚರಿಸಿದ್ದಾರೆ. ಉಪಚಾರದಿಂದ ಚೇತರಿಸಿಕೊಂಡಿದ್ದ ಕಾಗೆ ಮರಿ ಪ್ರತಿ ದಿನ ಇವರ ಮನೆಗೆ ಬರುತಿತ್ತು.

ಹೀಗಾಗಿ ಮನೆಯಲ್ಲಿ ಇವರು ತಾವು ತಿನ್ನುವ ರೊಟ್ಟಿ ,ಅನ್ನವನ್ನು ನೀಡುತಿದ್ದರು. ಹೀಗೆ ಕಾಗೆಯೊಂದಿಗೆ ಸ್ನೇಹ ಬೆಳಸಿಕೊಂಡ ಅವರು ಪ್ರತಿ ದಿನ ಮನೆಯ ಜನರೊಂದಿಗೆ ಇದಕ್ಕೂ ಸಹ ಉಪಹಾರ ನೀಡುವುದನ್ನು ಬೆಳಸಿಕೊಂಡಿದ್ದು ,ಇದೀಗ ಗೆಳೆತನ ಆಪ್ತವಾಗಿದ್ದು ಸಲುಗೆಯಲ್ಲಿ ಇವರ ಕೈಮೇಲೆ ಕುಳಿತು ಆಹಾರ ಸೇವಿಸಿ ತೆರಳುತ್ತದೆ.

ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳು ಈ ಜೀವ ಸಂಕುಲಗಳ ಸರಪಳಿ ,ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ,ಪ್ರೀತಿ ಸಂಪಾದಿಸುವುದು ಸುಲಭ.ಈ ಕಾಗೆಯನ್ನು ಒಂದು ದಿನ ನೋಡದಿದ್ದರೂ ಮನಸ್ಸು ಪರಿತಪಿಸುತ್ತದೆ. ಇದರೊಂದಿಗೆ ಬೆರೆತ ಬಾಂಧವ್ಯ ಅಂತದ್ದು ಎಂದು ವಿಠಲ್ ಶಟ್ಟಿಯವರು ವಿವರಿಸುವಾಗ ಅವರ ಪ್ರೀತಿ ಎದ್ದು ಕಾಣುತ್ತದೆ.
ಬಾಂಧವ್ಯಗಳನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಇವರ ಈ ಪ್ರೀತಿ ಮಾದರಿಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!