BREAKING NEWS
Search

ಬೀದರ್:1.18 ಕೋಟಿ ಸಾಲ ಹಣ ದುರ್ಬಳಕೆ.

588

ಬೀದರ್: ವಿವಿಧ ಯೋಜನೆಯಡಿ ಮಂಜೂರಾದ 1.18 ಕೋಟಿ ರೂ. ಸಾಲದ ಹಣವನ್ನು ಬ್ಯಾಂಕ್ ವ್ಯವಸ್ಥಾಪಕ ಹಾಗೂ ಮಧ್ಯವರ್ತಿಗಳು ಸೇರಿ ದುರ್ಬಳಕೆ ಮಾಡಿಕೊಂಡ ಪ್ರಕರಣ ತಾಲೂಕಿನ ಜನವಾಡಾ ಗ್ರಾಮದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಪಿಕೆಜಿಬಿ) ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

2017ರ ಮೇ ತಿಂಗಳಿನಿಂದ 2019ರ ಜನವರಿವರೆಗೆ ಬ್ಯಾಂಕ್ ಶಾಖಾ ವ್ಯಾವಸ್ಥಾಪಕರಾಗಿದ್ದ ದತ್ತಾತ್ರಿ ಮೇತ್ರೆ ಅವರ ಅವಧಿಯಲ್ಲಿ ಈ ಪ್ರಕರಣ ಜರುಗಿದೆ. ದೊಡ್ಡ ಮೊತ್ತದ ಹಣ ದುರ್ಬಳಕೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬ್ಯಾಂಕಿನ ಬೀದರ್ ಕಚೇರಿಯ ಪ್ರಾದೇಶಿಕ ಪ್ರಬಂಧಕ ಮಂಜುನಾಥ ಭಾಗವತ್ ಅವರು ನೀಡಿದ ದೂರಿನ ಮೇರೆಗೆ ಇಲ್ಲಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಮೋಸ, ವಂಚನೆ ಇತರೆ ಕಲಂ ಗಳಡಿ ಗುರುವಾರ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕ ದತ್ತಾತ್ರಿ ಮೇತ್ರೆ ಜತೆಗೆ ಮಧ್ಯವರ್ತಿ ಗಳಾದ ಧನರಾಜ ಬಸವರಾಜ ಪಾಟೀಲ್ ಜನವಾಡಾ, ಅನೀಲಕುಮಾರ ಸಾಂಗವಿ, ಉತ್ತಮಕುಮಾರ ಸಿದ್ದಾಪುರ, ತುಕಾರಾಮ ಹೊಸಮನಿ ಜನವಾಡಾ, ಸಂಗಮೇಶ ಯರನಳ್ಳಿ, ಮಲ್ಲಪ್ಪ ವಿಲಾಸಪುರ, ರಾಹುಲ್ ಕಲ್ಲೂರೆ ಭಾಲ್ಕಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರ ಮೂಲಕ ಬ್ಯಾಂಕಿನ ವಿವಿಧ ಯೋಜನೆಗಳಡಿಯಲ್ಲಿ ಸಾಲ ಮಂಜೂರಿ ಮಾಡಿ, ಘಟಕಗಳ ಅನುಷ್ಠಾನ ದೃಢೀಕರಿಸಿಕೊಳ್ಳದೇ ಸಾಲ ವಿತರಣೆ ಮಾಡಲಾಗಿದೆ. ಸಾಲದ ಭಾಗದ (ಕಂತಿನ) ಹಣ ಮಧ್ಯವರ್ತಿಗಳ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಬ್ಯಾಂಕ್ ಸಾಲದ ಹಣ 1.18 ಕೋಟಿ ರೂ.ಗಳನ್ನು ಮಧ್ಯವರ್ತಿಗಳ ಜತೆಗೂಡಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಭಾಗವತ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಕ್ರೈಮ್ ವಿಭಾಗದ ಇನ್ಸ್ ಪೆಕ್ಟರ್ ಬಸವರಾಜ ಫುಲಾರಿ ಅವರು ತನಿಖೆ ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!