ಗರ್ಭಿಣಿ ಸ್ತ್ರೀಯರಿಗೆ ಸೀಮಂತ ನೆರವೇರಿಸಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್-ಮುಳುಗಡೆ ಸಂತ್ರಸ್ಥ ಗ್ರಾಮಕ್ಕೆ ತೆರಳಿ ಹಲವು ಸಮಸ್ಯೆ ಪರಿಹಾರ

640

ಕಾರವಾರ :- ದಶಕಗಳಿಂದ ಸಮಸ್ಯೆಗಳನ್ನೇ ಜೀವನವಾಗಿ ಬದುಕು ಕಟ್ಟಿಕೊಂಡಿದ್ದ ಕಾಳಿ ಮುಳುಗಡೆ ಸಂತ್ರಸ್ಥರಿಗೆ ಜಿಲ್ಲಾಧಿಕಾರಿ, ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಕುದ್ದು ಭೇಟಿ ನೀಡಿ ಇದೀಗ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಜೊತೆ ಗ್ರಾಮದ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವ ಮೂಲಕ ಮಾದರಿಯಾದರು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ
ಅಂಬಿಕಾನಗರ ಪಂಚಾಯತ್ ವ್ಯಾಪ್ತಿಯ ಕೇಗದಾಳ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಗ್ರಾಮದ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆಲಿಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡುವ ಕಾರ್ಯ ಮಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೇಗದಾಳ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.

ಇಡೀ ದಿನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ಪಂಚಾಯತಿಯ ಸದಸ್ಯರ ಜೊತೆಗೆ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ರ್ಚಿಸಿದರು.

ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಅರ್ಹ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದು, ಪೂರಕ ಪೌಷ್ಟಿಕ ಆಹಾರದ ಬಗ್ಗೆ ಇಡಲಾದ ಆಹಾರ ಸಾಮಗ್ರಿಗಳ ಪ್ರದರ್ಶನ ವೀಕ್ಷಣೆ ಮಾಡಿದರು. ಪೋಷಣಾ ಅಭಿಯಾನ ಯೋಜನೆಯಡಿಯ 4 ಜನ ಹೆಣ್ಣು ಮಕ್ಕಳಿಗೆ ಸಿ ಡಿ ಪಿ ಓ ಹಾಗೂ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರೊಂದಿಗೆ ಸೀಮಂತ ಕಾರ್ಯವನ್ನು ನೆರವೇರಿಸಿಕೊಟ್ಟರು.

ಕರೋನಾ ಹಿನ್ನಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳನ್ನು ಮನೆ ಮನೆಗೆ ವಿತರಿಸುವತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ಅವರು ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಮೊಟ್ಟೆ ವಿತರಿಸಲು ಸೂಚಿಸಿದರು.

ಗ್ರಾಮ ಸಂಚಾರ ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರ ನೀಡಿದ ಅಹವಾಲುಗಳನ್ನು ಸ್ವೀಕರಿಸಿದರು. ಲಿಖಿತ ರೂಪದ ಅರ್ಜಿಗಳನ್ನು ಸಹ ಸ್ಥಳದಲ್ಲಿಯೇ ಪಡೆದುಕೊಂಡರು.

ಗ್ರಾಮ ಸಂಚಾರದ ನಂತರ ವೇದಿಕೆಯ ಮೇಲೆ ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಬಗೆಹರಿಸಬಹುದಾದಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದರು.

ಜಿಲ್ಲಾಧಿಕಾರಿಯವರಿಗೆ ನೇರವಾಗಿ ಒಟ್ಟು 27 ಅರ್ಜಿಗಳು ಬಂದಿದ್ದು, ಪ್ರತಿಯೊಂದು ಅರ್ಜಿಗಳ ಬಗ್ಗೆ ವೇದಿಕೆ ಮೇಲೆ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬಗೆಯರಿಸುವ ಕೆಲಸ ಮಾಡಲಾಯಿತು.

ಅಲ್ಲದೇ ಸ್ವೀಕೃತವಾದ ಅರ್ಜಿಗಳಲ್ಲಿ ವಸತಿ ರಹಿತರಿಗೆ ನಿವೇಶನ ಕಾಯ್ದಿರಿಸುವ , ಮಂಜೂರು ಮಾಡುವಲ್ಲಿ ವಿಳಂಬ, ಬೆಳೆಗಳಿಗೆ ಆನೆ ಹಾವಳಿ,ರಸ್ತೆ ಸಮಸ್ಯೆ , ಶೌಚಾಲಯ, ಸ್ಮಶಾನ ಜಾಗ, ವಿದ್ಯಾರ್ಥಿಗಳಿಗೆ ನಗರಕ್ಕೆ ಶಾಲೆಗೆ ತೆರಳಲು ಬಸ್ ವ್ಯವಸ್ಥೆ ಹಾಗೂ ನಿರುದ್ಯೋಗ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳು ಒಳಗೊಂಡಂತೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ನಡೆಸಲಾಯಿತು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಶೈಲ ಪರಮಾನಂದ, ಸಿಡಿಪಿಓ ಲಕ್ಷ್ಮಿದೇವಿ,ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿ ಸೇರಿದಂತ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!