ಕಾರವಾರ:- ಕಾರವಾರ ನಗರದ ಹಬ್ಬುವಾಡ ಹಾಗೂ ಹರಿದೇವ ನಗರ ವ್ಯಾಪ್ತಿಯ ದಟ್ಟಾರಣ್ಯದಲ್ಲಿ ಕಳೆದ ಕೆಲವು ದಿನಗಳಿಂದ ಗುಡ್ಡದ ಮೇಲೆ ರಾತ್ರಿ ವೇಳೆ ಬೆಳಕು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.
ಕಳೆದ ಮೂರು ದಿನಗಳಿಂದ ಸೂರ್ಯ ಮುಳುಗುತಿದ್ದಂತರ ನಕ್ಷತ್ರದಂತೆ ಬೆಳಕು ಗೋಚರವಾಗುತಿತ್ತು. ಈ ಕುರಿತು ಸ್ಥಳೀಯ ಜನರು ಆತಂಕಗೊಂಡು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇನ್ನು ಅರಣ್ಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಈ ಬೆಳಕನ್ನ ಹಿಡಿದು ಕಾಡಿನಲ್ಲಿ ಸಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದಾಗ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅಧಿಕಾರಿಗಳು ಶಾಕ್ ಆಗಲು ಕಾರಣವೇನು ಗೊತ್ತಾ?
ಕಾರವಾರ ಡಿಸಿಎಫ್ ವಸಂತ ರೆಡ್ಡಿ ಅವರ ನಿರ್ದೇಶನದಂತೆ ಗುಡ್ಡವನ್ನು ಏರಿ ಪರಿಶೀಲನೆ ನಡೆಸಿದ ತಂಡಕ್ಕೆ ಬೃಹತ್ ಮರವೊಂದರ ಮೇಲೆ ಒಂದು ಧ್ವಜ, ಒಂದು ಬ್ಯಾನರ್ ಹಾಗೂ ಎರಡು ಚಿಕ್ಕ ಸೋಲಾರ್ ದೀಪಗಳನ್ನು ಅಳವಡಿಸಿರುವುದು ಕಂಡು ಬಂದಿದೆ.


ಯಾರೋ ಪ್ರವಾಸಿಗರು ಅಥವಾ ಸ್ಥಳೀಯರು ಅಲ್ಲಿಗೆ ಮೋಜಿಗೆ ತೆರಳಿದ ಬಳಿಕ ತಾವು ಅಲ್ಲಿಗೆ ಬಂದ ಗುರುತು ದೂರದಿಂದ ಕಾಣಿಸಬೇಕು ಎಂಬ ಉದ್ದೇಶಕ್ಕಾಗಿ ತಾವು ತಂದ ಧ್ವಜ ಹಾಗೂ ಸೋಲಾರ್ ದೀಪಗಳನ್ನು ಅಲ್ಲಿನ ಬೃಹತ್ ಮರವೊಂದಕ್ಕೆ ಅಳವಡಿಸಿ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಸುಮಾರು 20 ಮೀಟರ್ ಅಧಿಕ ಎತ್ತರದಲ್ಲಿರುವ ಈ ಮರಕ್ಕೆ ಯಾವುದೇ ಸಲಕರಣೆಗಳಿಲ್ಲದೇ ಹತ್ತುವುದು ಅಸಾಧ್ಯವಾಗಿರುವುದರಿಂದ ಆ ವಸ್ತುಗಳನ್ನು ತೆರವುಗೊಳಿಸಲು ಸಾಧ್ಯವಾಗದೇ ವಾಪಸ್ಸು ಮರಳಿದ್ದ ಅರಣ್ಯ ಅಧಿಕಾರಿಗಳು ಇಂದು ಅವುಗಳನ್ನು ತೆರವುಗೊಳಿಸಿ ಜನರ ಆತಂಕ ದೂರ ಮಾಡಿದ್ದಾರೆ.


ದೂರವಾದ ಆತಂಕ!
ರಾತ್ರಿ ಹೊತ್ತು ಉರಿಯುತ್ತಿದ್ದ ಈ ನಿಗೂಢ ದೀಪವನ್ನು ಗಮನಿಸಿದ ಸ್ಥಳೀಯರು ಒಂದೆಡೆ ಇದು ಅರಣ್ಯಗಳ್ಳರ ಕೃತ್ಯ ಅಥವಾ ಯಾವುದೋ ಶಕ್ತಿ ಎಂದು ಭಾವಿಸಿದ್ದರು.
ಇನ್ನು ಅರಣ್ಯ ಇಲಾಖೆಯವರು ಮರವನ್ನು ಕಡಿದು ಅದನ್ನು ಹಲಗೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ರಾತ್ರಿಯ ವೇಳೆ ಮಾಡುತ್ತಿರಬಹುದೇ? ಅದಕ್ಕಾಗಿ ಚಾರ್ಜಿಂಗ್ ಅಥವಾ ಇನ್ನಿತರ ಯಾವುದೇ ಲೈಟ್‍ಗಳನ್ನು ಬಳಸುತ್ತಿರಬಹುದೇ ಎಂಬ ಶಂಕೆಯನ್ನು ವ್ಯಕ್ತ ಪಡಿಸಿದ್ದರು.
ಇನ್ನು ಕೆಲವರು ಇದು ಯಾವುದೋ ದೆವ್ವದ ಕೆಲಸ ಎಂದು ಭಯಗೊಂಡಿದ್ದರೆ ಇನ್ನೂ ಕೆಲವರು ಇದು ದೇವರ ಪವಾಡವಿರಬಹುದೇ ಎಂದು ದಿನವೂ ಮನೆಯಿಂದ ಹೊರಬಂದು ಆ ಬೆಳಕಿಗೆ ಕೈ ಮುಗಿದು ನಮಿಸುತ್ತಿದ್ದರು. ಕೊನೆಗೂ ಈ ರಹಸ್ಯ ಬಯಲಾಗಿದ್ದು ಹಿರಿಯರು ಹೇಳುವಂತೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.