ಹಳಿಯಾಳ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಹಳಿಯಾಳದ ವಿವಿಧೆಡೆ ಪಾದಯಾತ್ರೆ ನಡೆಯಿತು.
ಹಳಿಯಾಳದ ತೇರಗಾಂವ ಗ್ರಾಮದಿಂದ ಪಾದಯಾತ್ರೆಗೆ ಚಾಲನೆ ದೊರಕಿದ್ದು, ಹವಗಿ ಗ್ರಾಮದ ಮೂಲಕ ಸಾಗಿ, ವನಶ್ರೀ ವೃತ್ತ ರಸ್ತೆಯಲ್ಲಿ ಸಂಚರಿಸಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಯಾತ್ರೆ ಸಮಾಪನಗೊಂಡಿತು.
ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಇತರ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ತನ್ನ ಕಚೇರಿಯ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಆರ್. ವಿ. ದೇಶಪಾಂಡೆ, ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ರಾಹುಲ್ ಗಾಂಧಿ ನಡೆಸಿದ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ತಂದಿದೆ.
4,470ಕಿ.ಮೀ. ಹೆಚ್ಚು ದೂರ ಪಾದಯಾತ್ರೆ ಮಾಡುವ ಮೂಲಕ ರಾಹುಲ್ ಗಾಂಧಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಅವರ ಪ್ರಯತ್ನದ ಫಲವಾಗಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಬದಲಾಗಿ, ಮತದಾರರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವಂತೆ ಮಾಡಿದೆ ಎಂದು ಹೇಳಿದರು.