BREAKING NEWS
Search

ಹೊನ್ನಾವರ ವಾಣಿಜ್ಯ ಬಂದರು ಕಾಮಗಾರಿ:ಒಕ್ಕಲೆಬ್ಬಿಸುವ ಆತಂಕದಿಂದ ಸ್ಥಳೀಯರ ಪ್ರತಿಭಟನೆ!

721

ಕಾರವಾರ: ವಾಣಿಜ್ಯ ಬಂದರಿಗೆ ಏಕಾಏಕಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಯಿಂದ ಆತಂಕಕ್ಕೊಳಗಾದ ಜನರು ಕಂಪನಿ ವಿರುದ್ಧ ಬೃಹತ್  ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿರುವ ಘಟನೆ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ಮಲುಕುರ್ವಾದಲ್ಲಿ ನಡೆದಿದೆ.

ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಎಚ್.ಪಿ.ಪಿ.ಎಲ್  ಕಂಪನಿ ವಾಣಿಜ್ಯ ಬಂದರು ನಿರ್ಮಾಣ ಮಾಡತೊಡಗಿದೆ.

ಬಂದರಿಗೆ ಪೂರಕವಾಗಿ ಶರಾವತಿ ಅಳವೆ ಪ್ರದೇಶದಂಚಿನ ಪ್ರದೇಶದಲ್ಲಿ ಇದೀಗ ಏಕಾಏಕಿ ಮಣ್ಣು ಸುರಿದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರಸ್ತೆಯಂಚಿನ ಮನೆಗಳ ಜನರು ಆತಂಕಕ್ಕೊಳಗಾಗಿದ್ದಾರೆ.
ಇಂದು ಕಂಪನಿ ಪೊಲೀಸ್ ಭದ್ರತೆಯಲ್ಲಿ ರಸ್ತೆಯಂಚಿನ ಮನೆಗಳನ್ನು ತೆರವುಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಆತಂಕ್ಕಿತರಾದ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಂಪನಿ ಸರಿಯಾದ ಮಾಹಿತಿ ನೀಡದೇ ಕಾಮಗಾರಿ ನಡೆಸುತ್ತಿದ್ದು, ಮೀನುಗಾರಿಕೆ ಮೂಲಕ ಬದುಕುಕಟ್ಟಿಕೊಂಡಿರುವ ಸಾವಿರಾರು ಮೀನುಗಾರರ ಬದುಕು ಇದೀಗ ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಕಂಪನಿ ಈ ಪ್ರದೇಶದಲ್ಲಿ ಕಾಮಗಾರಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು.

ಇನ್ನು ಕಾಮಗಾರಿ ಪ್ರದೇಶಕ್ಕೆ ಪ್ರತಿಭಟನಾಕಾರರು ನುಗ್ಗಲು ಮುಂದಾದಾಗ ತಡೆದ ಪೊಲೀಸರು ಸ್ಥಳಕ್ಕೆ ಕಂಪನಿ ಅಧಿಕಾರಿಗಳು ಹಾಗೂ ತಹಶೀಲ್ದಾರ ವಿವೇಕ್ ಶೆಣ್ವಿ ಅವರನ್ನು ಕರೆಸಿದ್ದರು.

ಕೊನೆಗೆ ಸಮಸ್ಯೆಯನ್ನು ಹೇಳಿಕೊಂಡ ಸ್ಥಳೀಯರು ಈ ಭಾಗದಲ್ಲಿ ೧೦೦ ಕ್ಕೂ ಹೆಚ್ಚು ಮನೆಗಳಿದ್ದು ನಮಗೆ ಯಾವುದೇ ನೋಟೀಸ್ ನೀಡದೆ ತೆರವಿಗೆ ಮುಂದಾಗಿದ್ದಾರೆ.

ಮೀನುಗಾರಿಕೆ ಮೂಲಕವೇ ಬದುಕು ಕಟ್ಟಿಕೊಂಡಿರುವ ಈ ಭಾಗದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಸಮಸ್ಯೆಗಳು ಕಾಡಲಿದೆ.

ಅಲ್ಲದೆ ಈಗಾಗಲೇ ಹಲವಾರು ಮನೆಗಳಿಗೆ ಮಾರ್ಕಿಂಗ್ ಮಾಡಿದ್ದು ಮನೆಗಳು ತೆರವು ಮಾಡುವ ಆತಂಕ ಇದೆ.

ಕಂಪನಿ ಎಲ್ಲಿಯವರೆಗೆ ಬಂದರು ಅಭಿವೃದ್ಧಿ ಪಡಿಸಲಿದೆ ಎಂಬುದರ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿ ಕೂಡಲೇ ಕಾಮಗಾರಿಯನ್ನು ಸ್ಥಗೀತಗೊಳಿಸುವಂತೆ ಒತ್ತಾಯಿಸಿದರು.

ಕಂಪನಿಯು ಸರ್ವೆ ಮಾಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ.‌

ಕೊನೆಗೆ ತಹಶೀಲ್ದಾರರು ಅರ್ಧಕ್ಕೆ ತೆರಳಿದ್ದು ಸ್ಥಳೀಯರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಸದ್ಯ ಪೊಲೀಸ್ ಭದ್ರತೆಯಲ್ಲಿ ರಸ್ತೆ ಕಾಮಗಾರಿ ಮುಂದುವರಿದಿದೆ. ಸ್ಥಳದಲ್ಲಿ ನೂರಾರು ಪೊಲೀಸರು ಬೀಡು ಬಿಟ್ಟಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!