ಖಾಸಗಿ ಬಂದರು ನಿರ್ಮಾಣ ಕ್ಕೆ ವಿರೋಧ:ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಮೀನುಗಾರರು

950

ಕಾರವಾರ :- ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಕೋವಿಡ್ ಲಾಕ್ ಡೌನ್ ಮಧ್ಯೆ ಇಂದು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಣಿಜ್ಯ ಬಂದರು ಕಾಮಗಾರಿ ಆರಂಭಿಸಲಾಗಿದೆ. ಇದನ್ನ ವಿರೋಧಿಸಿ ಯುವಕರು ಸಮುದ್ರಕ್ಕೆ ಜಿಗಿದು ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಒಂದು ಕಡೆ ಜೆಸಿಬಿ ಯಂತ್ರಗಳಿಂದ ಮನೆ, ಮರಗಳನ್ನ ತೆರವುಗೊಳಿಸುತ್ತಿರುವ ದೃಶ್ಯ. ಇನ್ನೊಂದೆಡೆ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿರುವ ಯುವಕರು. ಇದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಂಡು ಬಂದ ದೃಶ್ಯ.

ತಾಲೂಕಿನ ಕಾಸರಕೋಡ ಟೊಂಕ ಭಾಗದಲ್ಲಿ ಮತ್ತೆ ವಾಣಿಜ್ಯ ಬಂದರು ಕಾಮಗಾರಿ ಆರಂಭಿಸಲಾಗಿದೆ. ಇಂದು ಬೆಳ್ಳಂಬೆಳ್ಳಗೆ ಸುಮಾರು ಐನೂರುಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್ ನಲ್ಲಿ ಬಂದರು ಕಾಮಗಾರಿ ಆರಂಭಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ನಡೆಸಿದಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ತಡೆಯಾಜ್ನೆ ತಂದಾಗ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಇಂದು ಧಿಡೀರಾಗಿ ಕಾಮಗಾರಿ ಆರಂಭಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಇಂದು ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಒಂದು ಹಂತದಲ್ಲಿ ಸ್ಥಳೀಯ ಯುವಕರು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಹಲವರು ಅಸ್ವಸ್ಥರಾಗಿದ್ದಾರೆ. ಮೀನುಗಾರರ ಬದುಕನ್ನ ಸರ್ವನಾಶ ಮಾಡುವ ಬಂದರು ಯೋಜನೆ ಮಾಡುವುದು ಬೇಡ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ನಿರ್ಮಾಣದಿಂದಾಗಿ ಇಲ್ಲಿನ ಜನಸಾಮಾನ್ಯರು ನೆಲೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಕಳೆದ ಕೆಲ ತಿಂಗಳಿಂದ ಹೊನ್ನಾವರ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿ ವಾಣಿಜ್ಯ ಬಂದರು ಸಂಬಂಧ ಕಾಮಗಾರಿ ನಡೆಸುವ ಹುನ್ನಾರು ನಡೆಸಿದೆ. ಆರಂಭದಲ್ಲಿ ರಸ್ತೆ ಕಾಮಗಾರಿ ನಡೆಸಿ ಬಳಿಕ ದೊಡ್ಡಮಟ್ಟದ ಯೋಜನೆ ಮಾಡುವ ಪ್ಲ್ಯಾನ್ ಇದೆ. ಹೀಗಾಗಿ 48 ಮೀಟರ್ ಅಗಲದ ರಸ್ತೆ ಕಾಮಗಾರಿ ನಡೆಸುತ್ತಿದೆ. ಹೀಗಾಗಿ ಸ್ಥಳೀಯ ಮೀನುಗಾರರ ಗುಡಿಸಲು, ಬೆಳೆದು ನಿಂತ ಮರಗಳನ್ನ ತೆರವುಗೊಳಿಸಲಾಗುತ್ತಿದೆ. ಕಾಸರಕೋಡು, ಟೊಂಕ, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು ಆರುನೂರಕ್ಕು ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನ ಅವಲಂಭಿಸಿಕೊಂಡಿವೆ. ಒಂದುವೇಳೆ ವಾಣಿಜ್ಯ ಬಂದರು ಜಾರಿಯಾದಲ್ಲಿ ಸ್ಥಳೀಯರ ಬದುಕು ಕಳೆದುಕೊಳ್ಳಲಿದ್ದಾರೆ. ಈ ಬಗ್ಗೆ ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡಿದ ಬಳಿಕ ಕಾಮಗಾರಿ ಆರಂಭಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೋವಿಡ್ ಸಂಬಂಧ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾಮಗಾರಿ ಆರಂಭಿಸಲಾಗಿದೆ. ತೆರವು ಕಾರ್ಯಾಚರಣೆಯಿಂದಾಗಿ ಜನ ಭಾವುಕರಾಗಿದ್ದಾರೆ. ಯಾಕಂದ್ರೆ ಅನಾದಿಕಾಲದಿಂದ ಅವರು ಇಲ್ಲೆ ಇರೋದ್ರಿಂದ ವಿರೋಧಿಸ್ತಿದ್ದಾರೆಂದು ಉಪವಿಭಾಗಾಧಿಕಾರಿಗಳು ಹೇಳಿದ್ದಾರೆ.

ಕಾಸರಕೋಡು ಭಾಗದಲ್ಲಿ ವಾಣಿಜ್ಯ ಬಂದರು ಕಾಮಗಾರಿ ಮತ್ತೆ ಆರಂಭಿಸಿರೋದು ಸ್ಥಳೀಯರ ಆತಂಕವನ್ನ ಹೆಚ್ಚು ಮಾಡುವಂತೆ ಮಾಡಿದೆ. ಆನಾದಿಕಾಲದಿಂದ ವಾಸಿಸುತ್ತಿರುವ ತಮ್ಮ ಮನೆಗಳು ಯೋಜನೆಗೆ ಹೋಗಲಿದೆ ಎಂಬ ಚಿಂತೆಯಲ್ಲಿ ಸ್ಥಳೀಯರಿದ್ದಾರೆ. ಮುಂದೆ ವಿರೋಧ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!