BREAKING NEWS
Search

Women’s Reservation Bill ಲೋಕಸಭೆ ಅಂಗೀಕಾರ:ಯಾರು ಏನು ಹೇಳಿದ್ರು?

173

ನವದೆಹಲಿ:- ಕೇಂದ್ರ ಸರ್ಕಾರದಿಂದ ರಾಜ್ಯಗಳ ವಿಧಾನಸಭೆ, ಸಂಸತ್ ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ವಿಶೇಷ ಸಂಸತ್ ಅಧಿವೇಶನದಲ್ಲಿ ನಿನ್ನೆ ಮಂಡಿಸಲಾಗಿತ್ತು. ಸುದೀರ್ಘ 8 ಗಂಟೆಗಳ ಚರ್ಚೆಯ ಬಳಿಕ, ಇಂದು ಲೋಕಸಭೆಯಲ್ಲಿ ಸಂಸದರಿಂದ ಮತ ಪತ್ರಗಳ ಮೂಲಕ ವಿಧೇಯ ಪರ, ವಿರೋಧ ಬೆಂಬಲಿಸಿ ಮತದಾನ ನಡೆಯಿತು.

ಮಹಿಳಾ ಮೀಸಲಾತಿ ವಿಧೇಯಕ ಪರ 454 ಸಂಸದರು ಮತದಾನ ಮಾಡಿದ್ದು, ವಿಧೇಯಕದ ವಿರುದ್ಧ ಇಬ್ಬರು ಸಂಸದರಿಂದ ಮತ ಚಲಾಯಿಸಿದ್ದಾರೆ. ಲೋಕಸಭೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ಚರ್ಚೆ ನಂತರ ಸ್ಪೀಕರ್ ಓಂಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದ್ದಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು(Women’s Reservation Bill) ಲೋಕಸಭೆ (Lok sabha) ಅಂಗೀಕರಿಸಿದೆ.

ಈ ಮಸೂದೆಯಡಿ 181 ಲೋಕಸಭಾ ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗುವುದು.ವಿಧಾನಸಭೆಯ ಶೇ.33ರಷ್ಟು ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗಿದೆ.

ದೆಹಲಿ ವಿಧಾನಸಭೆಯಲ್ಲಿ ಶೇಕಡಾ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲು ಸಿಗಲಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ 84 ಸ್ಥಾನಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮತ್ತು ಶೇ.33ರಷ್ಟು ಸ್ಥಾನಗಳನ್ನ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ಇದೇ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಮಹಿಳಾ ಮೀಸಲಾತಿಯನ್ನು ಕಲ್ಪಿಸುವುದು ವಿಧೇಯಕದ (bill) ಮುಖ್ಯ ಉದ್ದೇಶವಾಗಿದೆ.

ಮಸೂದೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಇದು ಐದನೇ ಪ್ರಯತ್ನವಾಗಿತ್ತು ಈ ಹಿಂದೆ ದೇವೇಗೌಡರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ನಾಲ್ಕು ಬಾರಿ ಈ ಮಸೂದೆ ತರಲು ಪ್ರಯತ್ನಿಸಿದ್ರು. ಈ ಮಸೂದೆ ಅಂಗೀಕಾರವಾಗದಿರಲು ಕಾರಣವೇನು ಎಂದು ಅಮಿತ್ ಶಾ ವಿರೋಧ ಪಕ್ಷಕ್ಕೆ ಪ್ರಶ್ನಿಸಿದ್ದಾರೆ.

ಪ್ರಸ್ತುತ ಸಾಮಾನ್ಯ, SC, ST 3 ವರ್ಗಗಳಲ್ಲಿ ಚುನಾಯಿತರಾಗಿರುವ ಸಂಸದರು, ಪ್ರತಿಯೊಂದರಲ್ಲೂ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆಯೆಂದರೆ ಅವರ ಬೇರುಗಳು ಭಾರತದಲ್ಲಿಲ್ಲ, ಅವರು ಎಲ್ಲಿದ್ದಾರೆ ಎಂದು ನಾನು ಹೇಳಲು ಬಯಸುವುದಿಲ್ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಗೌರವದ ಸಂಕೇತ ಮತ್ತು ಹೊಸ ಯುಗದ ಆರಂಭ. ಮಹಿಳಾ ಮೀಸಲಾತಿ ಮಸೂದೆಯು ದೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಹಿಳಾ ಭದ್ರತೆ, ಗೌರವ, ಸಮಾನ ಭಾಗವಹಿಸುವಿಕೆ ಸರ್ಕಾರದ ಜೀವ ಶಕ್ತಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ, G20 ನಲ್ಲಿ ಮಹಿಳಾ ನೇತೃತ್ವದ ಪ್ರಗತಿಯ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದ್ದರು ಎಂದು ಅಮಿತ್ ಶಾ ಹೇಳಿದರು.

ರಾಹುಲ್ ಗಾಂಧಿ ಹೇಳಿದ್ದೇನು?

ಸಂಸತ್ ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ಕೋಟಾದ ಕೊರತೆಯಿಂದಾಗಿ ಈ ಕ್ರಮವು ಅಪೂರ್ಣ ಎಂದು ಹೇಳಿದ್ದಾರೆ.

ಈ ಮಸೂದೆ ಒಂದು ದೊಡ್ಡ ಹೆಜ್ಜೆ. ನಮ್ಮ ದೇಶದ ಮಹಿಳೆಯರಿಗೆ ಇದು ಬಹಳ ಮುಖ್ಯವಾದ ಹೆಜ್ಜೆ ಎಂದು ಎಲ್ಲರೂ ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ, ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿಯನ್ನು ಸೇರಿಸುವುದನ್ನು ನಾನು ನೋಡಲು ಬಯಸುತ್ತೇನೆ. ಅದಿಲ್ಲದೇ ಇದು ಅಪೂರ್ಣ ಎಂದು ಅವರು ಹೇಳಿದರು.

ಭಾರತ ಸರ್ಕಾರದ 90 ಕಾರ್ಯದರ್ಶಿಗಳಿದ್ದಾರೆ 90 ಜನರಲ್ಲಿ ಎಷ್ಟು ಜನರು ಒಬಿಸಿ ಸಮುದಾಯದಿಂದ ಬಂದಿದ್ದಾರೆ? ಉತ್ತರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನಾನು ಇದಕ್ಕೆ ಉತ್ತರಿಸಲು ಬಯಸುತ್ತೇನೆ. ಕೇವಲ ಮೂವರು ಕಾರ್ಯದರ್ಶಿಗಳು ಮಾತ್ರ ಒಬಿಸಿ ಸಮುದಾಯದವರು.

ಮಸೂದೆಯನ್ನು ಬೆಂಬಲಿಸಿದ ರಾಹುಲ್ ಗಾಂಧಿ ಅವರು ಜಾತಿ ಗಣತಿಗಾಗಿ ಪಕ್ಷದ ಬೇಡಿಕೆಯನ್ನು ಪ್ರಸ್ತಾಪಿಸಿದರು ಮತ್ತು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಅದರ ಮೂಲಕ ಮಾತ್ರ ತಿಳಿಯಬಹುದು ಎಂದು ಹೇಳಿದರು.

ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಿ, ಡಿ ಲಿಮಿಟೇಶನ್ ಮತ್ತು ಜನಗಣತಿಯ ಅಗತ್ಯವಿಲ್ಲ, ಮಹಿಳೆಯರಿಗೆ ಕೇವಲ 33 ಪ್ರತಿಶತ ಮೀಸಲಾತಿ ನೀಡಿ. ಪ್ರತಿಪಕ್ಷಗಳು ಜಾತಿ ಗಣತಿಯನ್ನು ಪ್ರಸ್ತಾಪಿಸಿದ ಕ್ಷಣ ಬಿಜೆಪಿ ಹೊಸ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನೂತನ ಸಂಸತ್ ಭವನದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ರಾಷ್ಟ್ರಪತಿ ಬುಡಕಟ್ಟು ಸಮುದಾಯದ ಮಹಿಳೆಯಾಗಿದ್ದು, ಹೊಸ ಸಂಸತ್ ಭವನಕ್ಕೆ ವರ್ಗಾವಣೆ ಮಾಡುವಾಗ ಅವರು ಕಾಣಿಸಬೇಕಿತ್ತು. ಇದು ಸುಂದರವಾದ ಕಟ್ಟಡವಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ರಾಷ್ಟ್ರಪತಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದು ರಾಹುಲ್ ಹೇಳಿದ್ದಾರೆ.

ಮಸೂದೆಗೆ ಓವೈಸಿ ವಿರೋಧ!

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನಿನ್ನೆ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಸೂದೆಯಲ್ಲಿ ಮುಸ್ಲಿಮರು ಮತ್ತು ಒಬಿಸಿ ಸಮುದಾಯಗಳಿಗೆ ಯಾವುದೇ ಪ್ರಾತಿನಿಧ್ಯವಿಲ್ಲ.
ಈ ಕಾರಣ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಕಾನೂನನ್ನು ಮಾಡುತ್ತೀರಿ. ದೇಶದಲ್ಲಿ ಇಲ್ಲಿಯವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿವೆ. 8,990 ಸಂಸದರು ಆಯ್ಕೆಯಾಗಿದ್ದಾರೆ. ಅದರಲ್ಲಿ ಕೇವಲ 520 ಸಂಸದರು ಮುಸ್ಲಿಮರು.

520 ಮುಸಲ್ಮಾನರಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಂ ಮಹಿಳೆಯರೂ ಕಾಣಿಸುವುದಿಲ್ಲ. ಹಾಗಾದರೆ ಪ್ರಾತಿನಿಧ್ಯ ಎಲ್ಲಿದೆ? ಮಸೂದೆಯ ಪ್ರಮುಖ ದೋಷವೆಂದರೆ ಮುಸ್ಲಿಂ ಮತ್ತು ಒಬಿಸಿ ಮಹಿಳೆಯರಿಗೆ ಯಾವುದೇ ಕೋಟಾ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!