
ಭಾರತ ವಿಶಿಷ್ಟವಾಗಿ ಕಾಣುವುದೇ ಹೀಗೆ,ಇಲ್ಲಿ ಸಕಲ ಧರ್ಮ,ಸಮುದಾಯ,ಪಂಥ,ವರ್ಗ ಎಲ್ಲರಿಗೂ ಸಮಾನ ಆದ್ಯತೆ ಅವಕಾಶಗಳಿವೆ,ವಸುಧೈವ ಕುಟುಂಬ ಸಿದ್ಧಾಂತ ಈ ನೆಲದಲ್ಲಿ ಸಾವಿರಾರು ವರ್ಷಗಳಿಂದ ಸ್ಥಾಪಿತಗೊಂಡುಬಿಟ್ಟಿದೆ.
ಭಾರತೀಯರ ಈ ಮನೋವಿಶಾಲತೆಯನ್ನೇ ಹಲವರು ದುರುಪಯೋಗಪಡಿಸಿಕೊಂಡಿದ್ದು ಮಾತ್ರ ದೇಶದ ದುರದೃಷ್ಟವೇ ಸರಿ.
ಮಧ್ಯಕಾಲೀನ ಅವಧಿ ಎಂದರೆ ಭಾರತಕ್ಕೆ ಪರ್ಶಿಯನ್ನರು ಹೆಚ್ಚಾಗಿ ಬಂದು ನೆಲೆಸುತ್ತಿದ್ದ ಸಮಯ,ಅವರು ಬರುತ್ತಿದ್ದುದು ವ್ಯಾಪಾರಕ್ಕಾದರೂ ಬಂದಮೇಲೆ ಇಲ್ಲಿಯೇ ಆಡಳಿತ ಮಾಡುವಷ್ಟು ಬೆಳೆಯುತ್ತಿದ್ದರು.
ಇದಕ್ಕೆ ಈ ವಾರದ ಅಂಕಣದಲ್ಲಿ ಒಂದು ವಿಶೇಷ ವಿಷಯ ಹಂಚಿಕೊಳ್ಳುತ್ತೇನೆ ಕೇಳಿ.
ಇದು ಒಬ್ಬ ಸಾಮಾನ್ಯ ವ್ಯಕ್ತಿ ಪರ್ಶಿಯಾದಿಂದ ಭಾರತಕ್ಕೆ ವ್ಯಾಪಾರಕ್ಕೆಂದು ಬಂದು ನಂತರ ಒಂದೋಂದೇ ಹಂತ ಮೇಲೇರುತ್ತಾ ಭಾರತದ ಒಂದು ಸಾಮ್ರಾಜ್ಯದ ಪ್ರಧಾನಿಯಾಗಿ ಶಿಕ್ಷಣ ತಜ್ಞನಾಗಿ ಬೆಳೆದ ಯಶೋಗಾಥೆ!
ಹೀಗೆ ಅಚ್ಚರಿ ಹುಟ್ಟಿಸುವ ವ್ಯಕ್ತಿ ಬೇರಾರೂ ಅಲ್ಲ, ಆತನೇ ಮಹ್ಮದ್ ಗವಾನ್ .

ಗವಾನ್ ಭಾರತಕ್ಕೆ ಬಂದಾಗ ಚಿಕ್ಕ ಹುಡುಗ,ಆಗ ಅವನ ತಾತ ಅವನನ್ನು ಬಹುಮನಿ ಸುಲ್ತಾನನ ಆಸ್ತಾನದಲ್ಲಿ ಸಣ್ಣ ಕೆಲಸವೊಂದನ್ನು ಕೊಡಿಸಿದ,ಕೆಲಸವನ್ನು ಅತ್ಯಂತ ಶೃದ್ಧೆಯಿಂದ ಮಾಡುತ್ತಿದ್ದ ಗವಾನ್ ಬಹಳ ಬೇಗ ಸೈನಿಕನಾದ,ದಂಡನಾಯಕನಾದ, ಮುಂದೆ ಆತನ ಕುಶಾಗ್ರಮತಿತ್ವ,ಶೌರ್ಯ ಆತನಿಗೆ ಬಹುಮನಿ ಸಾಮ್ರಾಜ್ಯದ ಅತ್ಯಂತ ದೊಡ್ಡ ಹುದ್ದೆಯಾದ ಪ್ರಧಾನಿ ಹುದ್ದೆ ದೊರಕುವಂತೆ ಮಾಡಿತ್ತು.
ಇದು ಆತನ ಒಂದು ಮುಖವಾದರೆ ಇನ್ನೊಂದು ಮುಖ ಆತನ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.
ಆತ ಹಿಂದುಗಳ ವಿಷಯದಲ್ಲಿ ಪಕ್ಷಪಾತಿಯಾಗಿದ್ದ,ಹಿಂದುಗಳನ್ನ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ,ಹಿಂದೂಗಳ ದೇವಾಲಯವನ್ನು ನಾಶ ಮಾಡುವವರಿಗೆ ಘಾಸಿ ಎಂಬ ಬಿರುದನ್ನು ನೀಡುತ್ತಿದ್ದ.

ಇನ್ನೊಂದು ಮುಖ ಮತ್ತೂ ಅಚ್ಚರಿ ಮೂಡಿಸುವಂತದ್ದು,ಅದೇನೆಂದರೆ ಆತ ಶಿಕ್ಷಣದ ಕುರಿತು ಬಹಳ ಆಸ್ಥೆ ,ಮಹತ್ವಾಕಾಂಕ್ಷೆಯನ್ನು ಹೊಂದಿದ್ದ,ಸ್ವತಃ ಒಬ್ಬ ಶಿಕ್ಷಣ ತಜ್ಞನಾಗಿದ್ದ.
ಆತನ ಬಹುದೊಡ್ಡ ಕಾರ್ಯವೆಂದರೆ ಕ್ರಿ.ಶ ೧೪೭೨ ರಲ್ಲಿ ಬೀದರ್ ನಲ್ಲಿ ಮದರಸಾ ವನ್ನು ನಿರ್ಮಿಸಿದ್ದು.
ಇದು ಮೂರು ಅಂತಸ್ತಿನ ಒಂದು ಬೃಹತ್ ಕಟ್ಟಡವಾಗಿತ್ತು,ಒಂದು ಅಂತಸ್ತಿನಲ್ಲಿ ಆಡಳಿತ ಕಛೇರಿ,ಮತ್ತೊಂದರಲ್ಲಿ ಬೋಧನಾ ಕೊಠಡಿಗಳು,ಇನ್ನೊಂದರಲ್ಲಿ ವಿದ್ಯಾರ್ಥಿಗಳ ವಸತಿ ಕೊಠಡಿಗಳಿದ್ದವು.

ಅಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವಿತ್ತು,ಸ್ವತಃ ತಾನೇ ಅಲ್ಲಿನ ವಿದ್ಯಾರ್ಥಿಗಳಿಗೆ ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದ. ಇದರಲ್ಲಿ ಗ್ರಂಥಾಲಯ,ಮಸೀದಿಯೂ ಇದ್ದವು. ಇಂತಿರ್ಪ ಈ ಕಟ್ಟಡ ಈಗ ಆ ಕಾಲದ ಗವಾನನ ಶಿಕ್ಷಣ ಪ್ರೇಮಕ್ಕೆ ಸಾಕ್ಷಿಯಾಗಿ ಶಿಥಿಲಗೊಂಡು ಮೌನವಾಗಿ ನಿಂತಿದೆ.
-ಲಕ್ಷ್ಮೀಶ್ ಸೋಂದಾ
( ಇತಿಹಾಸಕಾರರು)