BREAKING NEWS
Search

ರಾಜ್ಯಾಧ್ಯಾಂತ ನ.8 ರಿಂದ ಅಂಗನವಾಡಿಗಳು ಪುನಾರಾರಂಭ-ನಿಯಮಗಳೇನು ವಿವರ ನೋಡಿ

1125

ಬೆಂಗಳೂರು:- ರಾಜ್ಯಾಧ್ಯಾಂತ ಕೋವಿಡ್-19ರ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸಲು ನಿರ್ಬಂಧಿಸಲಾಗಿತ್ತು. ಫಲಾನುಭವಿಗಳ ಮನೆಗೆ ಪೂರಕ ಪೌಷ್ಟಿಕ ಆಹಾರವನ್ನು ಆಹಾರ ಇಲಾಖೆ ಮೂಲಕ ವಿತರಿಸಲಾಗುತ್ತಿತ್ತು. ಆದರೇ ಇದೀಗ ಸರ್ಕಾರ ಅಂಗನವಾಡಿಯನ್ನು ಪುನಹಾ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯದಲ್ಲಿ ಶೇ. 2 ಕ್ಕಿಂತ ಕಡಿಮೆ TPR ಇರುವ ತಾಲ್ಲೂಕುಗಳಲ್ಲಿ ಕೋವಿಡ್-19ರ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಲಸಿಕೆ ಪಡೆದಿರುವ ಅಂಗನವಾಡಿ ಕಾರ್ಯಕರ್ತ / ಸಹಾಯಕಿಯರ ಮೂಲಕ ಸೇವೆಗಳನ್ನು ಒದಗಿಸಲು 2 ಗಂಟೆಗಳ ಕಾಲ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದಿನಾಂಕ: 04.09.2021 ರಂದು ನಡೆದ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಪುನರ್‌ಪ್ರಾರಂಭಿಸಲು ಅನುಮೋದನೆಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ದಿನಾಂಕ: 08/11/2021 ರಿಂದ ಪುನರ್ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ.

ಅಂಗನವಾಡಿ ಪ್ರಾರಂಭಕ್ಕೆ ನಿಯಮಗಳೇನು?

  1. ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯು ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದಿರಬೇಕು. ಈ ಬಗ್ಗೆ ಉಪ ನಿರ್ದೇಶಕರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಖಚಿತಪಡಿಸಿಕೊಳ್ಳತಕ್ಕದ್ದು.
  2. ಅಂಗನವಾಡಿ ಕೇಂದ್ರದ ಒಳ ಆವರಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸುವುದು.
  3. ಅಂಗನವಾಡಿ ಕೇಂದ್ರದಲ್ಲಿನ ಪಾಕೋಪಕರಣ, ಮಕ್ಕಳು ಉಪಯೋಗಿಸಿದ ಜಮಖಾನ/ ಡೆಸ್ಕ್/ ಕುರ್ಚಿ/ ಕುಳಿತುಕೊಳ್ಳಲು ಆಟಿಕೆ ಸಾಮಾನುಗಳು ಮುಂತಾದವುಗಳನ್ನು ಅಂಗನವಾಡಿ ಪ್ರಾರಂಭದ ಹಿಂದಿನ ದಿನಗಳಲ್ಲಿ ಶುಚಿಗೊಳಿಸುವುದು, ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳನ್ನು ತೆರೆಯುವುದು.
  4. ಶೌಚಾಲಯ, ಅಂಗನವಾಡಿಯ ನೆಲ, ಗೋಡೆ, ಕಿಟಕಿ, ಬಾಗಿಲು ಮುಂತಾದವುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸುವುದು.
  5. ಅಂಗನವಾಡಿ ಕೇಂದ್ರದಲ್ಲಿ ಪೂರಕ ಪೌಷ್ಟಿಕ ಆಹಾರ ತಯಾರಿಸುವ ಎಲ್ಲಾ ಪಾತ್ರೆ /ಲೋಟ / ಕುಕ್ಕರ್ ಗಳನ್ನು ಸ್ವಚ್ಛಗೊಳಿಸುವುದು.
  6. ಅಂಗನವಾಡಿ ಕೇಂದ್ರದಲ್ಲಿ ನೀರು ಶೇಖರಣೆಯ ವಾಟರ್ ಫಿಲ್ಟರ್, ಟ್ಯಾಂಕ್, ಸಂಪು ಇವುಗಳಲ್ಲಿರುವ ನೀರನ್ನು ಹೊರಚೆಲ್ಲಿ ಸ್ವಚ್ಛಗೊಳಿಸುವುದು.
  7. ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಬಾಲವಿಕಾಸ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡುವುದು.
  8. ಅಂಗನವಾಡಿ ಕೇಂದ್ರಗಳಿಗೆ ಹಾಜರಾಗಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಅಂಗನವಾಡಿ ಕಾರ್ಯಕರ್ತೆಯು ಪಡೆಯುವುದು.
  9. ಅಂಗನವಾಡಿ ಕೇಂದ್ರಗಳ ಪಲಾನುಭವಿಗಳ ಎಲ್ಲಾ ಪೋಷಕರು 2 ಡೋಸ್ ಕೋವಿಡ್-19 ವ್ಯಾಕ್ಸಿನೇಷನ್ ಪಡೆದಿರಬೇಕು.
  10. ಕೋವಿಡ್ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದು.
  11. ಯಾವ ಯಾವ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಪಾಸಿಟಿವ್ ದರ 2% ಕ್ಕಿಂತ ಕಡಿಮೆ ಇದೆ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
  12. ಅಂಗನವಾಡಿ ಕೇಂದ್ರವನ್ನು ಮೊದಲಿನ ಹಂತದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ: 12.00 ಗಂಟೆಯವರೆಗೆ ತೆರೆಯುವುದು.
  13. ಕೋವಿಡ್-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಮೈಕೈ ನೋವು, ಉಸಿರಾಟದ ಸಮಸ್ಯೆ, ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣಗಳಿಂದ ಬಳಲುತ್ತಿದ್ದರೆ ಅಂತಹ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕರೆ ತರದಂತೆ ಪೋಷಕರಿಗೆ ಸೂಚಿಸುವುದು.
  14. ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿರತಕ್ಕದ್ದು. ಕೆಮ್ಮುವಾಗ /ಸೀನುವಾಗ ಮೊಣಕೈ ಅಡ್ಡ ಹಿಡಿದು ಕೆಮ್ಮಬೇಕು / ಸೀನಬೇಕು. ಮಕ್ಕಳು ಮುಖವನ್ನು ಮುಟ್ಟಿಕೊಳ್ಳದಿರುವಂತೆ ಮತ್ತು ಕೆಮ್ಮುವಾಗ / ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವಂತೆ ತಿಳಿಸಬೇಕು.
  15. ಮಗುವಿನ ಕುಟುಂಬದಲ್ಲಿ ಯಾರಾದರೂ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದರೆ, ಕೋವಿಡ್ ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಅಥವಾ ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಗಂಟಲುನೋವು ಅಥವಾ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರೆ ಅಂತಹ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ
    ಕರೆತರದಂತೆ ನೋಡಿಕೊಳ್ಳುವುದು.
  16. ಅಂಗನವಾಡಿ ಕೇಂದ್ರದಲ್ಲಿ ಇರುವ ಸ್ಥಳಾವಕಾಶವನ್ನು ನೋಡಿಕೊಂಡು ಮಕ್ಕಳನ್ನು 1 ಮೀಟರ್ ಅಂತರದಲ್ಲಿ ಕೂರಿಸುವ ವ್ಯವಸ್ಥೆ ಮಾಡುವುದು ಇದರನ್ವಯ ಅಂಗನವಾಡಿಗೆ ಪ್ರತಿದಿನ ಎಷ್ಟು ಮಕ್ಕಳು ಬರಬೇಕೆಂಬ ಬಗ್ಗೆ ತೀರ್ಮಾನಿಸುವುದು. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಲ್ಲಿ 2 ಅಥವಾ 3 ದಿನಕ್ಕೊಮ್ಮೆ ಬರಲು ಸೂಚಿಸುವುದು. ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ತಿಳಿಸುವುದು. ಯಾವ ಯಾವ ಮಕ್ಕಳು ಅಂಗನವಾಡಿಗೆ ಬರಬೇಕೆಂಬ ಬಗ್ಗೆ ಪೋಷಕರಿಗೆ ಮೊದಲೇ ಫೋನ್ ಮೂಲಕ ತಿಳಿಸುವುದು ಅಥವಾ ಕರೆ ತರುವುದು.
  17. ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವ ದಿನ ಅಂಗನವಾಡಿ ಕೇಂದ್ರದಲ್ಲಿ ಹಬ್ಬದ ವಾತಾವರಣ ಇರುವಂತೆ ಕ್ರಮ ಕೈಗೊಳ್ಳುವುದು. ಅಂಗನವಾಡಿ ಕೇಂದ್ರಗಳನ್ನು ತೋರಣಗಳಿಂದ/ ಹೂವಿನಿಂದ ಬೆಲೂನಿನಿಂದ ಅಲಂಕರಿಸುವುದು, ಅಂಗನವಾಡಿಗೆ ಬರುವ ಪ್ರತಿ ಫಲಾನುಭವಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸುವುದು, ಅಂಗನವಾಡಿ ಪ್ರಾರಂಭದ ದಿನ ಫಲಾನುಭವಿಗಳಿಗೆ ಸಿಹಿ ತಿನಿಸನ್ನು ನೀಡುವುದು, ಪ್ರಾರಂಭದ ದಿನ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗಲೂ ಸಹ ಕಡ್ಡಾಯವಾಗಿ ಕೋವಿಡ್ ಶಿಷ್ಟಾಚಾರವನ್ನು ಪಾಲಿಸುವಂತೆ ತಿಳಿಸಲಾಗಿದೆ.
  18. ಅಂಗನವಾಡಿ ಕೇಂದ್ರಕ್ಕೆ ಪೋಷಕರೊಂದಿಗೆ ಮಕ್ಕಳು ಬರುವಂತೆ ಕ್ರಮ ಕೈಗೊಳ್ಳುವುದು. ಪೋಷಕರು ಅಂಗನವಾಡಿ ಕೇಂದ್ರಕ್ಕೆ ಬಂದಾಗ ಕೋವಿಡ್ ಕಾರ್ಯವಿಧಾನದ ಬಗ್ಗೆ ವಿವರವಾಗಿ ತಿಳಿಸಲು ಕ್ರಮ ಕೈಗೊಳ್ಳುವುದು.
  19. ಅಂಗನವಾಡಿ ಪ್ರಾರಂಭದ ದಿನ ಬಾಲವಿಕಾಸ ಸಮಿತಿ ಸದಸ್ಯರು, ಊರಿನ ಮುಖ್ಯಸ್ಥರು,
    ಪಂಚಾಯಿತಿ ಸದಸ್ಯರು ಹಾಜರಿದ್ದು ಅಂಗನವಾಡಿ ಕೇಂದ್ರಕ್ಕೆ ಬರುವ ಫಲಾನುಭವಿಗಳನ್ನು ಸ್ವಾಗತಿಸುವುದು.
  20. ಪ್ರಸ್ತುತ ಅಂಗನವಾಡಿ ಕೇಂದ್ರವನ್ನು ಪೂರ್ಣ ಪ್ರಮಾಣದಲ್ಲಿ ತೆರೆಯದೇ ಇರುವುದರಿಂದ ಮುಂದಿನ ಸೂಚನೆಯವರೆಗೆ ಪೂರಕ ಪೌಷ್ಟಿಕ ಆಹಾರವನ್ನು ಆಹಾರ ಪದಾರ್ಥಗಳನ್ನು ಮನೆಗೆ ನೀಡುವುದನ್ನು ಮುಂದುವರೆಸುವುದು.

‌15 ದಿನಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೂರಕ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನೀಡಲು ಸೂಚಿಸಲಾಗುವುದು, ಕೇಂದ್ರ ಕಛೇರಿಯ ಸೂಚನೆ ನಂತರ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ, ಬಿಸಿಯೂಟ, ಬಿಸಿಹಾಲು, ಬೇಯಿಸಿದ ಮೊಟ್ಟೆಯನ್ನು ನೀಡಲು ಕ್ರಮ ವಹಿಸುವುದು. ಆಹಾರ ವಿತರಣೆ ಸಮಯದಲ್ಲಿ ಗುಂಪು ಸೇರದಂತೆ ನೋಡಿಕೊಳ್ಳುವುದು.

  1. ಅಂಗನವಾಡಿ ಕೇಂದ್ರದಲ್ಲಿ ಹಾಜರಾಗುವ ಎಲ್ಲರಿಗೂ ಕೈತೊಳೆಯಲು ಸೋಪು ಇರುವಂತೆ ನೋಡಿಕೊಳ್ಳುವುದು. ಎಲ್ಲಾ ಮಕ್ಕಳು ಅಂಗನವಾಡಿಯಲ್ಲಿರುವ ಸಮಯದಲ್ಲಿ ಪ್ರತಿ 30 ನಿಮಿಷ ಗಳಿಗೊಮ್ಮೆ ಕೈ ತೊಳೆಯುವಂತೆ ನೋಡಿಕೊಳ್ಳುವುದು
  2. ಅಂಗನವಾಡಿಗೆ ಹಾಜರಾಗುವ ಪ್ರತಿ ಮಗವಿನ ಆರೋಗ್ಯದ ಬಗ್ಗೆ ನಿಗಾ ವಹಿಸುವುದು.
  3. ಪೋಷಕರ / ತಂದೆ ತಾಯಿಯರಿಗೆ ಸಂಬಂಧಿಸಿದ ಆರೋಗ್ಯ ಶಿಕ್ಷಣದ ಪರಿಕರಗಳನ್ನು ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು.
  4. ಹಿರಿಯ ನಾಗರಿಕರು ಅಂಗನವಾಡಿ ಕೇಂದ್ರಕ್ಕೆ ಬರದಂತೆ ನೋಡಿಕೊಳ್ಳುವುದು.

ಅಂಗನವಾಡಿ ಕಾರ್ಯಕರ್ತೆಯರು /ಸಹಾಯಕಿಯರು ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು:

i) ಅಂಗನವಾಡಿ ಪ್ರಾರಂಭವಾಗುವ ದಿನದ ಮೊದಲು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 72 ಗಂಟೆ ಮೊದಲು ಕಡ್ಡಾಯವಾಗಿ ಕೋವಿಡ್ RTPCR ಟೆಸ್ಟ್ ಮಾಡಿಸಿಕೊಳ್ಳುವುದು.

ii) ಅಂಗನವಾಡಿ ಕೇಂದ್ರದಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು.

iii) ಆಗಾಗೆ ಕೈಗಳನ್ನು ಸೋಪಿನಿಂದ ಅಥವಾ ಹ್ಯಾಂಡ್ ಸ್ಕ್ಯಾನಿಟೈಸರ್ ನಿಂದ

ಸ್ವಚ್ಛಗೊಳಿಸುವುದು.

iv) ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಗಂಟಲುನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಕೆಲಸಕ್ಕೆ ಹಾಜರಾಗಬಾರದು. ಕೂಡಲೇ ವೈದ್ಯಕೀಯ ಸಲಹೆ ಪಡೆಯುವುದು.

ಆಹಾರ ತಯಾರಿಸುವವರು ಮುಖಗವಸು / ಹೆಡ್ ಕ್ಯಾಪ್ ಮತ್ತು ಏಪುನ್ ಧರಿಸುವುದು. ಮುಖಗವಸು ಬಾಯಿ ಮತ್ತು ಮೂಗನ್ನು ಸರಿಯಾಗಿ ಮುಚ್ಚಿರಬೇಕು.

  1. ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸುವುದು, ಸಾಂಕ್ರಾಮಿಕ ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲುನೋವು ಮತ್ತು ಉಸಿರಾಟದ ತೊಂದರೆಯಿಂದ ಮಕ್ಕಳು ಬಳಲುತ್ತಿದ್ದರೆ ಅಂತಹ ಮಕ್ಕಳನ್ನು ಇತರೆ ಮಕ್ಕಳಿಂದ ಬೇರ್ಪಡಿಸಬೇಕು ಮತ್ತು ಇಂತಹ ಮಕ್ಕಳನ್ನು ಪೋಷಕರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ಸಲಹೆ ಪಡೆಯುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
  2. ಸಂದರ್ಶಕರಿಗೆ ಪ್ರವೇಶ ನಿರ್ಬಂಧಿಸಬೇಕು. 28 ಅಂಗನವಾಡಿ ಕೇಂದ್ರಗಳಲ್ಲಿ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು. 29 ಹಾಲಿನ ಪ್ಯಾಕೆಟನ್ನು ತರಕಾರಿಗಳನ್ನು ದಿನಸಿ ಪ್ಯಾಕೆಟ್‌ಗಳನ್ನು ಹರಿಯುವ ನೀರಿನಿಂದ

ಸ್ವಚ್ಛಗೊಳಿಸುವುದು. 30 ತಯಾರಿಸಿದ ಆಹಾರವನ್ನು ಸ್ವಚ್ಛ ಮತ್ತು ಮುಚ್ಚಿದ ಪಾತ್ರೆಯಲ್ಲಿ ಸಂಗ್ರಹಿಸುವುದು.

  1. ಪಾತ್ರೆಗಳನ್ನು ಡಿಟರ್ಜೆಂಟ್‌ನಿಂದ ಚೆನ್ನಾಗಿ ತೊಳೆಯುವುದು. 32 ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ / ಆರೋಗ್ಯ ತಪಾಸಣೆ ನಡೆಸುವಾಗ ಸರ್ಕಾರ ಹೊರಡಿಸಿದ ನಿಗದಿತ ಖಚಿತಪಡಿಸಿಕೊಳ್ಳುವುದು. ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು.
  2. ಸಭೆಗಳು, ಗುಂಪು ಸಭೆಗಳನ್ನು ನಿಯಂತ್ರಿಸುವುದು ಅಥವಾ ಸಭೆಗಳನ್ನು ಮುಕ್ತ ಪ್ರದೇಶಗಳಲ್ಲಿ ನಡೆಸುವುದು ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
  3. ಅಂಗನವಾಡಿ ಸಮಯದ ನಂತರ ಆಟದ ಸ್ಥಳ, ಕೈ ಕಂಬಿ(ಹ್ಯಾಂಡ್ ರೈಲ್ಸ್) ಆಟದ ಸಾಮಾನುಗಳು, ಎಲ್ಲರೂ ಉಪಯೋಗಿಸುವ ಪೀಠೋಪಕರಣಗಳನ್ನು, ಗೋಡೆಗಳನ್ನು 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಅಥವಾ 7% ಲೈಜಾಲ್ ಅಥವಾ ಇದೇ ತರಹದ ಮಾರುಕಟ್ಟೆಯಲ್ಲಿ ದೊರೆಯುವ ಯಾವುದಾದರೂ ಸೋಂಕುನಿವಾರಕದಿಂದ ಶುದ್ಧಿಗೊಳಿಸುವುದು.
  4. ನೆಲ ಮತ್ತು ಕೈತೊಳೆಯುವ ಸ್ಥಳದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ನಿಯತವಾಗಿ ಸೋಂಕುನಿವಾರಕಗಳನ್ನು / ಸಾಮಾನ್ಯವಾಗಿ ಉಪಯೋಗಿಸುವ ಡಿಟರ್ಜೆಂಟ್‌ನಿಂದ / 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಶುದ್ದೀಕರಿಸುವುದು.
  5. ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ಮಕ್ಕಳನ್ನು ಅದರಲ್ಲಿಯೂ ವಲಸೆ ಬಂದ ಮಕ್ಕಳನ್ನು ಕಡ್ಡಾಯವಾಗಿ ನೊಂದಣಿ ಮಾಡಿಕೊಂಡು ಪೂರಕ ಪೌಷ್ಟಿಕ ಆಹಾರದೊಂದಿಗೆ ಎಲ್ಲಾ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳುವುದು. ಆಧಾರ್ ಕಾರ್ಡ್ ಅಥವಾ ಇನ್ಯಾವುದೆ ದಾಖಲಾತಿಗಳನ್ನು ಕೋರದೆ ನೊಂದಣಿ ಮಾಡಿಕೊಳ್ಳುವುದು.

ಉಪ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕಿಯರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿರುವ ಬಗ್ಗೆ, ನಿಯತಕಾಲಿಕವಾಗಿ ಮೇಲ್ವಿಚಾರಣೆ ಮಾಡುವುದು. ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಸ್ಕ್ಯಾನಿಟ್ರಸ್ ಮಾಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ತಮ್ಮ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರ ಪ್ರಾರಂಭಿಸುವ ಮೊದಲು ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ಯಾನಿಟೈಸರ್‌ ಮಾಡಿಸಲು ಸೂಕ್ತ ವ್ಯವಸ್ಥೆಯನ್ನು ಮಾಡುವ ನಿಯಮಗಳನ್ನು ಹೇರಲಾಗಿದೆ.

.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!