ಕಾರವಾರ: ಕಾರವಾರದ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಉಡುಪಿ ಮೂಲದ ವರದಾ ಹೆಸರಿನ ಬೋಟೊಂದು ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿ ಘಟನೆ ನಡೆದಿದೆ.
ಘಟನೆ ಆಗಿದ್ದು ಹೇಗೆ ?

ಉಡುಪಿ ಜಿಲ್ಲೆಯ ಮಲ್ಪೆಯ ವರದಾ ಹೆಸರಿನ (ನೋಂದಣಿ ಸಂಖ್ಯೆ IND KA 02 MM 4495)
ದೋಣಿಯು ಲೈಟ್ ಹೌಸ್ ನಡುಗಡ್ಡೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತಿತ್ತು.
ಈ ವೇಳೆ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು, ತಕ್ಷಣವೇ ಕಾರವಾರದ ‘ಸಿ 155’ ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು.
ಇನ್ನು ಧಗಿಸುತಿದ್ದ ದೋಣಿಯಲ್ಲಿ ಮೀನುಗಾರರು ಸಹ ಇದ್ದಿದ್ದರಿಂದ ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ವಜ್ರ ಕ್ಕೆ ಸ್ಥಳೀಯ ಮೀನುಗಾರರು ರಕ್ಷಿಸಿ ರವಾನಿಸಿದರು. ಬಳಿಕ ಬೆಂಕಿಯನ್ನು ನಂದಿಸಲಾಯಿತು. ರಕ್ಷಿಸಲಾದ ಎಲ್ಲ ಮೀನುಗಾರರೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಬೆಂಕಿ ಹೊತ್ತಿಕೊಂಡ ದೋಣಿಯನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ. ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.