


ಕಾರವಾರ :- ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಗುಡ್ಡೇಹಳ್ಳಿ ಅಧಿಕಾರಿಗಳ ,ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಮೂಲ ಸೌಕರ್ಯವಿಲ್ಲದೇ ಅನಾರೋಗ್ಯ ಪೀಡಿತ ರೋಗಿಗಳನ್ನು ಕರೆದೊಯ್ಯಲು ಜೋಳಿಗೆ ಮೂಲಕ ಹೊತ್ತೊಯ್ದು ಜನ ಪರದಾಡುತಿದ್ದಾರೆ.
ಈ ಗ್ರಾಮಕ್ಕೆ ಸಂಪರ್ಕಿಸುವ ದಾರಿ ತೀರ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಕಾರಣ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗುವ ಜನರನ್ನು ಬೆಡ್‌ಶಿಟ್ ಜೋಳಿಗೆಯಲ್ಲಿಯೇ ಮಲಗಿಸಿ ಹೊತ್ತು ತುರ್ತು ಚಿಕಿತ್ಸೆಗೆ ತರಬೇಕಾದ ಅನಿವಾರ್ಯತೆ ಇದೆ.
ಇಂದು ಮಧ್ಯಾಹ್ನ ಅನಾರೋಗ್ಯಕ್ಕೆ ಒಳಗಾದ 64 ವರ್ಷದ ವೃದ್ಧ ಮಹಿಳೆಯೋರ್ವಳನ್ನು ತುರ್ತು ಚಿಕಿತ್ಸೆಗೆ ಜೋಳಿಗೆಯಲ್ಲಿ ಹೊತ್ತು ತಂದು, ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.

ಇದಕ್ಕೂ ಎರಡು ದಿನ ಮುಂಚೆ ಅನಾರೋಗ್ಯದಿಂದ ಒದ್ದಾಡುತ್ತಿದ್ದ ೨೩ ವರ್ಷದ ಯುವಕನೊಬ್ಬನನ್ನು ಇದೇ ರೀತಿಯಲ್ಲಿ ಜೋಳಿಗೆಯಲ್ಲಿ ಹೊತ್ತು ತಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈಗ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೀಗೆ ವಯೋವೃದ್ಧರು ಸೇರಿದಂತೆ, ಯುವಕರು, ಮಹಿಳೆಯರು, ಮಕ್ಕಳು ಅನಾರೋಗ್ಯದಂತಹ ತುರ್ತು ಸ್ಥಿತಿಯಲ್ಲಿ ಜೋಳಿಗೆಯಲ್ಲಿಯೇ ಮಲಗಿಸಿ ಹೊತ್ತು ತರುವ ಅನಿವಾರ್ಯ ಸ್ಥಿತಿಯನ್ನು ನಗರದ ವ್ಯಾಪ್ತಿಯಲ್ಲಿ ಇದ್ದರೂ ಸೌಕರ್ಯದ ಕೊರತೆಯಿಂದ ತೊಂದರೆ ಎದುರಿಸುವಂತಾಗಿದೆ.
ಪ್ರತಿ ದಿನ ನಗರಕ್ಕೆ ಬರಬೇಕೆಂದರೆ ಇಲ್ಲಿನ ಜನ ನಡೆದುಕೊಂಡೇ ಬರಬೇಕು,ಯಾವುದೇ ವಾಹನ ಸೌಕರ್ಯವಾಗಲಿ,ನಗರ ಸಾರಿಗೆಯಾಗಲಿ ಇಲ್ಲಿ ಇಲ್ಲ.ಇದ್ದ ಚಿಕ್ಕ ರಸ್ತೆಯೂ ಮಳೆಯಿಂದ ಕೊಚ್ಚಿಹೋಗಿದ್ದು ನರಳಾಟದ ಬದುಕನ್ನು ಇಲ್ಲಿನ ಜನ ನಡೆಸುವಂತಾಗಿದೆ. ಇದು ಗುಡ್ಡೇಹಳ್ಳಿಯ ಜನರು ಪಡುವ ಪಾಡಿಗೆ ಸಾಕ್ಷಿಯಾಗಿದೆ.
ನಗರಸಭೆಯವರು ಆದಷ್ಟು ಶೀಘ್ರ ಇಲ್ಲಿನ ರಸ್ತೆ ಸರಿಪಡಿಸಿ ಕೊಟ್ಟರೆ ಬಹಳ ಉಪಕಾರ ಮಾಡಿದಂತಾಗುತ್ತದೆ ಎಂದು ಇಲ್ಲಿನ ಜನರು ಈ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ನಗರದ ಬಿಣಗಾ ಹಾಗೂ ಹೈಚರ್ಚ್ ಸಮೀಪದಿಂದ ನೇರವಾಗಿ ಗುಡ್ಡೇಹಳ್ಳಿಗೆ ಕಾಡು-ಮೇಡುಗಳಿಂದ ಸುಮಾರು 8 ಕಿ.ಮೀ. ದೂರದ ಕಚ್ಚಾ ರಸ್ತೆ ಸಾಗಿದೆ.

ಅಲ್ಲಿನ ಜನರು ಪ್ರತಿನಿತ್ಯ ಇದೇ ರಸ್ತೆಯ ಮೂಲಕವೇ ದಿನನಿತ್ಯದ ಕೆಲಸಕಾರ್ಯಕ್ಕಾಗಿ ಕಾರವಾರ-ಅಂಕೋಲಾ ಕಡೆಗೆ ಹೋಗಿ ಬರಬೇಕು. ಆದರೆ ಈ ರಸ್ತೆ ಮಾತ್ರ ತೀವ್ರ ಹದಗೆಟ್ಟಿದೆ. ಈ ರಸ್ತೆ ಮೂಲಕ ಪ್ರತಿನಿತ್ಯ ಹೋಗಿ ಬರಲು 17 ರಿಂದ 18 ಕಿಮೀ. ದೂರ ಕ್ರಮಿಸಬೇಕಾಗಿದೆ. ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಜನರು ನಿತ್ಯವೂ ನಡೆದಾಡಿಕೊಂಡೇ ಸಾಗಬೇಕು. ಜನರಿಗೆ ಆಯಾಸ ಭರಿತ ಪ್ರಯಾಣವಾಗಿದೆ.
ಕನಿಷ್ಟ ಪಕ್ಷ ದ್ವಿಚಕ್ರ ವಾಹನ ಇಲ್ಲವೇ ಆಟೋ ರೀಕ್ಷ ಸಾಗುವಂತೆ ರಸ್ತೆ ಅಭಿವೃದ್ಧಿ ಪಡಿಸಿಕೊಟ್ಟರೆ, ಬಹಳ ಅನುಕೂಲವಾಗುತ್ತದೆ ಎಂದು ಇಲ್ಲಿನ ಜನರು ಬೇಡಿಕೆ ಹಲವು ವರ್ಷದ್ದಾಗಿದೆ.
ಪ್ರವಾಸಿಗರ ಮೆಚ್ಚಿನ ತಾಣ ಗುಡ್ಡೆಹಳ್ಳಿ
ಗುಡ್ಡೇಹಳ್ಳಿಯು ನಗರಸಭೆ ವ್ಯಾಪ್ತಿಯ ಬಿಣಗಾದ 31 ನೇ ವಾರ್ಡಿಗೆ ಒಳಪಡುತ್ತದೆ. ಚಿಕ್ಕ ಹಳ್ಳಿಯಾಗಿರುವ ಇದು ಚಾರಣ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿಯೂ ಮಾರ್ಪಟ್ಟಿದೆ.
ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿ ಆಗಾಗ ಭೇಟಿ ನೀಡುತ್ತಾರೆ. ಇಲ್ಲಿನ ಎತ್ತರದ ಬೆಟ್ಟದ ಬಂಡೆಗಲ್ಲಿನ ಮೇಲೆ ನಿಂತು ಅಂಕೋಲಾ, ಗೋಕರ್ಣ ಮುಂತಾದ ಊರುಗಳನ್ನು ಮತ್ತು ಹಸಿರಿನಿಂದ ಕೂಡಿದ ಪ್ರಾಕೃತಿಕ ಸೌಂದರ್ಯ ಹಾಗೂ ಕಡಲಿನ ಸೌಂದರ್ಯ ರಾಶಿಯನ್ನು ಕಣ್ಣು ತುಂಬಿಸಿಕೊಳ್ಳಬಹುದಾದ ಸ್ಥಳವಾಗಿದ್ದು ಬ್ರಿಟೀಷರ ಕಾಲದಲ್ಲಿ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿರುವ ಈ ತಂಪಾದ ಹಳ್ಳಿಯೇ ಬೇಸಿಗೆ ಕಳೆಯಲು ಬ್ರಿಟೀಷ್ ಅಧಿಕಾರಿಗಳಿಗೆ ಇಷ್ಟದ ತಾಣವಾಗಿತ್ತು.
ಇಲ್ಲಿ ಕಾಲ ಕಳೆಯಲು ಬ್ರಿಟೀಷರು ಕಟ್ಟಿದ ಬಂಗ್ಲೆಗಳ ಅಡಿಪಾಯದ ಕುರುಹುಗಳು ಈಗಲೂ ಕಾಣಲು ಸಿಗುತ್ತವೆ. ಇಲ್ಲಿಗೆ ಬರಲು ಬ್ರಿಟೀಷರು ಇದೇ ಕಾಲು ದಾರಿಯನ್ನು ಅವಲಂಬಿಸಿಕೊಂಡಿದ್ದರು. ಕುದುರೆ ಸವಾರಿ ಮೂಲಕ ಇಲ್ಲಿಗೆ ಬ್ರಿಟೀಷ ಅಧಿಕಾರಿಗಳು ಬರುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿರುವ ಈ ಹಳ್ಳಿ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ನಗರಸಭೆಯ ಯಾವ ಸೌಕರ್ಯಗಳು ಈ ಊರಿನ ಜನರಿಗೆ ಸಿಗದಿರುವುದು ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.