ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರು ಕಾರವಾರ ಹಾಗೂ ಅಂಕೋಲ ಭಾಗದ ಪಾಳು ಬಿದ್ದ ಕೃಷಿ ಭೂಮಿಯನ್ನು ಗೇಣಿಗೆ ಪಡೆದು ಸಾವಯವ ಪದ್ದತಿಯಲ್ಲಿ ಉಳುಮೆ ಗೆ ಮುಂದಾಗಿದ್ದಾರೆ.
ಅಂಕೋಲ ದಲ್ಲಿ 25 ಎಕರೆ ಹಾಗೂ ಕಾರವಾರ ದಲ್ಲಿ 25 ಎಕರೆ ಪಾಳು ಬಿಟ್ಟ ಕೃಷಿ ಜಮೀನನ್ನು ರೈತರಿಂದ ಗೇಣಿಗೆ ಪಡೆದು ಸಾವಯವ ಪದ್ದತಿಯಲ್ಲಿ ಉಳುಮೆ ಮಾಡಲು ಮುಂದಾಗಿದ್ದಾರೆ.
ಗದ್ದೆಯಲ್ಲಿ ಟ್ರಾಕ್ಟರ್ ಚಲಾಯಿಸಿ ಉಳಿಮೆ ಮಾಡಿದ ಶಾಸಕಿ

ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಮಂಗಳವಾರ ತಾಲ್ಲೂಕಿನ ವಂದಿಗೆ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದರು. ‘ಫಲವತ್ತತೆಯೆಡೆಗೆ ಮೊದಲ ಹೆಜ್ಜೆ’ ಎಂಬ ಕೃಷಿ ಚಟುವಟಿಕೆಗೆ ವಿನೂತನವಾಗಿ ಚಾಲನೆ ನೀಡಿದರು.
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆ ಉತ್ತೇಜಿಸಲು ಮತ್ತು ಯುವಜನರನ್ನು ಕೃಷಿಯತ್ತ ಆಕರ್ಷಿಸಲು 50 ಎಕರೆ ಗೇಣಿ ಭೂಮಿ ಪಡೆದು ಕೃಷಿ ಮಾಡುವುದಾಗಿ ಶಾಸಕಿ ಹಿಂದೆ ತಿಳಿಸಿದ್ದರು.
‘ನಷ್ಟದ ಭಯದಿಂದ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯುವಕರು ಕೃಷಿ ಬಿಟ್ಟ ಪರಿಣಾಮ ಭೂಮಿ ಬಂಜರಾಗುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಮತ್ತು ಕೃಷಿ ಅಗತ್ಯ ಜನರಿಗೆ ಅರ್ಥವಾಗಿದೆ. ತಾಲ್ಲೂಕಿನ ಕೃಷಿ ವಿಧಾನದಲ್ಲಿ ಬದಲಾವಣೆ ತರಲು ಮತ್ತು ರೈತರನ್ನು ಉತ್ತೇಜಿಸಲು ಈ ಪ್ರಯತ್ನ ಆರಂಭಿಸಿದ್ದೇನೆ. ಇದು ನನ್ನ ಕನಸಿನ ಕೂಸು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ, ಸ್ಥಳೀಯ ರೈತರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಪ್ರಯತ್ನಿಸುತ್ತೇವೆ’ ಎಂದು ಶಾಸಕಿ ರೂಪಾಲಿ ಹೇಳಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ‘ನುಡಿದಂತೆ ನಡೆಯುವುದು ರಾಜಕೀಯದಲ್ಲಿ ವಿರಳ. ಶಾಸಕಿ ರೂಪಾಲಿ ಗದ್ದೆಗಿಳಿದು ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಅಭಿವೃದ್ಧಿ ಚಟುವಟಿಕೆಯಲ್ಲಿಯೂ ಮುಂದಿದ್ದಾರೆ’ ಎಂದರು.
ಶಾಸಕರು ಕೃಷಿಗೆ ಮುಂದಾಗಿದ್ದೇಕೆ?
ಕಾರವಾರ -ಅಂಕೋಲ ಭಾಗದಲ್ಲಿ ನೂರಾರು ಎಕರೆ ಕೃಷಿ ಭೂವಿ ಪಳು ಬಿದ್ದಿದೆ. ರೈತಾಪಿ ಮಾಡುವ ಜನರು ಕೃಷಿಯಲ್ಲಿ ನಷ್ಟವಾಗುತ್ತಿರುವುದರಿಂದ ತಮ್ಮ ಕಸುಬನ್ನು ಬಿಟ್ಟು ಇತರೆ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಾರವಾರದಲ್ಲಿ ಭತ್ತ ,ತರಕಾರಿ ,ಹೈನುಉದ್ಯಮ ನೆಲ ಕಚ್ಚಿದೆ. ಕಾರವಾರದಲ್ಲಿ ಇರುವ ಎಪಿಎಂಸಿ ಕೂಡ ವಹಿವಾಟು ಇಲ್ಲದೇ ಮುಚ್ಚಿಹೋಗಿದೆ. ಇನ್ನು ಹಲವರು ಕೃಷಿ ಭೂಮಿ ಇದ್ದರೂ ಚಿಕ್ಕ ಭೂಮಿಯಲ್ಲಿ ಲಾಭದ ಬೆಳೆ ಬೆಳೆಯಲಾಗದೇ ಪಾಳು ಬಿಟ್ಟಿದ್ದಾರೆ. ಹೀಗಾಗಿ ಕೃಷಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ತಳಪಾಯ ಹಾಕಿರುವ ರೂಪಾಲಿ ನಾಯ್ಕ ರವರು ತಾವೇ ಸ್ವತಹ ಕೃಷಿ ಭೂಮಿ ಗೇಣಿಗೆ ಪಡೆದಿದ್ದಾರೆ. ತಾವು ಪಡೆದ ಭೂವಿಯಲ್ಲಿ ಸಾವಯವ ಪದ್ದತಿಯಲ್ಲಿ ಮೊದಲು ಭತ್ತ ನಂತರ ಬೇಸಿಗೆಯಲ್ಲಿ ತರಕಾರಿ ಹಾಗೂ ಹೈನುಗಾರಿಕೆ ಸಹ ಪ್ರಾರಂಭಿಸಲು ಮುಂದಾಗಿರುವ ಇವರು ಗೋವುಗಳಿಗಾಗಿ ಮೇವನ್ನು ಸಹ ಬೆಳೆಯಲು ಮುಂದಾಗಿದ್ದಾರೆ. ಈ ಮೂಲಕ ತನ್ನ ಕ್ಷೇತ್ರದ ಜನರಿಗೆ ಕೃಷಿ ಮಾಡುವ ಮೂಲಕ ಪ್ರೇರಣೆಯಾಗುವ ದಿಕ್ಕಿನಲ್ಲಿ ಹೊಸ ಪ್ರಯತ್ನಕ್ಕೆ ಅಡಿ ಇಟ್ಟಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರಿಗೂ ಕೃಷಿ ಮಾಡಲು ಪ್ರೇರಣೆ ನೀಡಿದ್ದು ಇದೀಗ ಕಾರವಾರ ಅಂಕೋಲ ಭಾಗದಲ್ಲಿ ಪಾಳು ಬಿದ್ದ ಕೃಷಿ ಭೂಮಿ ಹಸಿರಿನಿಂದ ಕಂಕೊಳಿಸಲು ಸಿದ್ದವಾಗಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.