ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನವನ್ನು ತಡೆದು ದರೋಡೆ ಮಾಡುತಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವ್ಯಕ್ತಿಯನ್ನು ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗಿದ್ದ ಭದ್ರಾವತಿ ಮೂಲದ ಆರು ಜನ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳಿಯೂರ ಹೊಸ್ಕೆರಿ ನಿವಾಸಿ ಆಸಿಫ್ ತಂದೆ ಅಬ್ದುಲ್ ರೆಹಮಾನ್(೩೫) ಎಂದು ಗುರುತಿಸಲಾಗಿದೆ.
ಬಂಧನವಾಗಿದ್ದು ಹೇಗೆ?

ಬಂಧಿತ ಆರೋಪಿ ಸೇರಿದಂತೆ ಏಳು ಜನರು ಒಂದು ತಂಡ ರಚಿಸಿಕೊಂಡು ಕೆ.ಎ ೦೨, ಎಮ್.ಎಚ್. ೪೧೫೧ ಸಂಖ್ಯೆಯ ಕಾರ್‌ನಲ್ಲಿ ಶಿಕಾರಿಪುರದಿಂದ ಕಾರವಾರಕ್ಕೆ ಬಂದಿದ್ದು , ಕಾರವಾರ ಹಾಗೂ ಗೋವಾ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನಗಳಲ್ಲಿ ಓಡಾಡುವ ಜನರ ಬಳಿಯಿರುವ ಹಣ, ಬಂಗಾರದ ಆಭರಣಗಳು ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು.
ಕಾರವಾರದ ಬೈತಖೊಲ್‌ನ ಸಿದ್ದರಾಮೇಶ್ವರ ಮಠದ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಏಳು ಜನ ಕಳ್ಳರ ತಂಡ ಇಂದು ಬೆಳಗಿನ ಜಾವ ತಮ್ಮ ಕಾರ್‌ನಲ್ಲಿ ೨ ಕಬ್ಬಿಣದ ಕತ್ತಿ, ೨ ಕಟ್ಟಿಗೆಯ ದೊಣ್ಣೆ, ನೈಲಾನ್ ಹಗ್ಗ, ಖಾರದ ಪುಡಿಯನ್ನು ಇಟ್ಟುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನು ದರೋಡೆ ಮಾಡಲು ನಿಂತಿದ್ದರು ಈ ವೇಳೆ ಖಚಿತ ಮಾಹಿತಿ ಮೇರೆಗೆ ಶಹರ ಪೊಲೀಸ್ ಠಾಣೆ ಪಿಎಸ್‌ಐ ಎಮ್. ಸಂತೋಷ್ ಕುಮಾರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.