ಕಾರವಾರ:- ಬೆಂಗಳೂರ ನಗರದ ಮಾದರಿಯಲ್ಲಿ ಸಾರ್ವಜನಿಕ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಚಾರ ನಿರ್ವಹಣಾ ಕೇಂದ್ರವನ್ನು ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜು ಐಪಿಎಸ್ ರವರು ಉದ್ಘಾಟಿಸಿದರು.

ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಸುರಕ್ಷೀತ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದ ಪ್ರಮುಖ ವೃತ್ತಗಳಲ್ಲಿ ಅತ್ಯಾಧುನಿಕ 360 ಡಿಗ್ರಿಯಲ್ಲಿ ತಿರುಗುವ ಹೈ ರೆಸೂಲೆಷನ್ ಸಿಸಿ ಕ್ಯಾಮೆರಾಗಳನ್ನು ಮತ್ತು ವಾಹನ ಸವಾರರಿಗೆ ಸೂಚನೆಗಳನ್ನು ನೀಡಲು ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು ನಿರ್ವಹಣಾ ಕೇಂದ್ರದಿಂದಲೇ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಗುತ್ತದೆ.
ವಾಹನ ಸವಾರರಿಗೆ ಸೂಚನೆಗಳನ್ನು ಸಹ ನೀಡಲಾಗುತ್ತದೆ,ನಿರ್ವಹಣಾ ಕೇಂದ್ರಕ್ಕೆ ಪ್ರತ್ಯೆಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು ದಿನದ 24 ಗಂಟೆಗಳ ಕಾಲ ಸಂಚಾರ ದಟ್ಟಣೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ,ಮತ್ತು ನಿಯಮ ಉಲ್ಲಂಘಿಸುವ ವಾಹನಗಳ ಫೋಟೊಗಳನ್ನು ತೆಗೆದುಕೊಂಡು ಮನೆಗಳಿಗೆ ನೊಟೀಸ್ ಕಳಿಸಲಾಗುತ್ತದೆ.
ಈ ಮೂಲಕ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೇಂದ್ರದಿಂದ ಸೂಚನೆ ನೀಡಲು ಅನುಕೂಲವಾಗಿದೆ.

ಎಲ್ಲೆಲ್ಲಿ ವ್ಯವಸ್ಥೆ?
ಕಾರವಾರದ ಪ್ರಮುಖ ವೃತ್ತವಾದ ಸುಭಾಷ್ ಸರ್ಕಲ್,ಸವಿತಾ ಸರ್ಕಲ್, ಹೂವಿನ ಚೌಕ್ ಸರ್ಕಲ್,ಶಿವಾಜಿ ಸರ್ಕಲ್ ಬಳಿ ಅಳವಡಿಕೆ.

ವಿಶೇಷ ಏನು?
ವೈರ್ಲೆಸ್ PTZ ಕ್ಯಾಮರಾ ಅಳವಡಿಕೆ.ಇದಕ್ಕೆ ಪಬ್ಲಿಕ್ ಅಡ್ರಸ್ ಸಿಸ್ಟಮ್ ಅಳವಡಿಕೆ, ಸ್ವಯಂ ಚಾಲಿತವಾಗಿ 360 ಡಿಗ್ರಿ ವರೆಗೆ ತಿರುಗಬಲ್ಲ ಹಾಗೂ ವಾಹನಗಳ ನಂಬರ್ ಅನ್ನು ರೆಕಾರ್ಡ ಮಾಡಿ ಚಿತ್ರ ಸಮೇತ ನೋಟೀಸ್ ಕಳುಹಿಸಲು ಅನುಕೂಲ.
ಇನ್ನು ಸಂಚಾರ ನಿರ್ವಹಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಬದರಿನಾಥ, ಕಾರವಾರ ಉಪವಿಭಾಗದ ಡಿಎಸ್ಪಿ ಅರವಿಂದ ಕಲಗುಜ್ಜಿ,ಕಾರವಾರ ಗ್ರಾಮೀಣ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಮತ್ತು ಪಿಎಸ್ಐಗಳಾದ ನಾಗಪ್ಪ,ಸಂತೋಷಕುಮಾರ,
ವಿಜಯಲಕ್ಷ್ಮೀ ಹಾಗೂ ಸಿಬ್ಬಂದಿಗಳು ಹಾಜರಿದ್ದರು.