ಕೇರಳ/ತಿರುವನಂತಪುರಂ : ಕೊವೀಡ್ ಲಸಿಕಾ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ್ದು, ಅರ್ಜಿದಾರ ಪೀಟರ್ ಮೈಲಿಪರಂಪಿಲ್‌ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸಾಮಾಜಿಕ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ನೇತೃತ್ವದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಈ ಅರ್ಜಿ ದುರುದ್ದೇಶದಿಂದ ಸಲ್ಲಿಕೆಯಾಗಿರುವ ಕ್ಷುಲ್ಲಕ ಅರ್ಜಿಯಾಗಿದೆ. ರಾಜಕೀಯ ಉದ್ದೇಶಗಳಿರುವಂತೆ ತೋರುತ್ತಿದ್ದು ಇದು ಪ್ರಚಾರಕ್ಕಾಗಿ ಸಲ್ಲಿಸಿದಂತಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಾವಿರಾರು ವಿಷಯಗಳು ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ ಮತ್ತು ಪ್ರಸ್ತುತ ರೀತಿಯ ಅರ್ಜಿಗಳು ನ್ಯಾಯಾಲಯದ ಸಮಯವನ್ನು ಹೇಗೆ ವ್ಯರ್ಥಗೊಳಿಸುತ್ತವೆ ಎಂಬುದನ್ನು ನ್ಯಾಯಾಲಯವು ಯೋಚಿಸಿದೆ ಈ ಹಿನ್ನಲೆಯಲ್ಲಿ ಈ ಅರ್ಜಿ ಭಾರೀ ವೆಚ್ಚದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ ಎಂದ ನ್ಯಾಯಮೂರ್ತಿಗಳು ಒಂದು ಲಕ್ಷ ದಂಡಿ ವಿಧಿಸಿದರು.
ದಂಡದ ಹಣವನ್ನು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಸೂಚಿಸಿತು. ಒಂದು ಲಕ್ಷ ದಂಡ ಅಧಿಕವಾಗಿದೆ ಎಂದು ಗೊತ್ತು ಆದರೆ ಅನಗತ್ಯ ಅರ್ಜಿಗಳನ್ನು ತಡೆಯಲು ಈ ರೀತಿಯ ಕ್ರಮ ಅಗತ್ಯ ಎಂದು ನ್ಯಾಯಮೂರ್ತಿಗಳು ಕೊನೆಯಲ್ಲಿ ಅಭಿಪ್ರಾಯಪಟ್ಟರು.
ಹಣ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದರೂ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಅಳವಡಿಸಿಲಾಗಿದ್ದು ಇದನ್ನು ತೆಗೆದುಹಾಕುವಂತೆ ಸಾಮಾಜಿಕ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಮನವಿ ಮಾಡಿದ್ದರು.