ಕಾರವಾರ :-ಕಳೆದ ವರ್ಷ ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವರ ಸಾವಿಗೆ ಕಾರಣವಾಗಿದ್ದ ಮಂಗನಕಾಯಿಲೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಸಿದ್ದಾಪುರ ತಾಲೂಕಿನ ಕುಳಿಬೀಡಿನಲ್ಲಿ ಪತ್ತೆಯಾಗಿದೆ.

ಸಿದ್ದಾಪುರ ತಾಲೂಕಿನ ಕುಳಿಬೀಡಿನ 51 ವರ್ಷದ ಮಹಿಳೆಯಲ್ಲಿ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದು, ರಕ್ತ ಪರೀಕ್ಷೆ ನಂತರ ಮಂಗನಕಾಯಿಲೆ ಇರುವುದು ಪತ್ತೆಯಾಗಿದೆ.
ಸೋಂಕಿತೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸದ್ಯ ಈ ಭಾಗದಲ್ಲಿ ಮಂಗಗಳು ಸತ್ತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೂ ಈ ವರ್ಷ ಮರಳಿ ಮಂಗನಕಾಯಿಲೆ ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷ ಸಿದ್ದಾಪುರದ ಬಾಳಗೋಡು,ಇಟಗಿ,ಹೊನ್ನೆಗಟಗಿ,ತ್ಯಾಗಲಿ,ಮನಮನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು, 9 ಜನ ಸಾವನ್ನಪ್ಪಿದ್ದರು.
