
ಮೇರಿ ಜಾನ್’ ಎಂದು ಕರೆಸಿಕೊಂಡ ಊರಿನ ಕಥೆಯಿದು. ಒಂದು ಕಾಲದಲ್ಲಿ ಉತ್ತರಕನ್ನಡದ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಮೆರೆದು ಇಂದು ಪುಟ್ಟ ಹಳ್ಳಿಯಾಗಿರುವ ಐತಿಹಾಸಿಕ ಮಹತ್ವದಊರಿದು.
ಆದು ಸುತ್ತಲೂ ಸಹ್ಯಾದ್ರಿ ಪರ್ವತದ ಎತ್ತರದ ಗಿರಿಗಳು ಅಡರಿಕೊಂಡಿರುವ, ಸುತ್ತೆಲ್ಲ ಹಸಿರಿನ ತೋರಣವೇ ಇರುವ ನಿತ್ಯ ಹರಿದ್ವರ್ಣದ ತೊಪ್ಪಲಿನಲ್ಲಿರುವ ಅಚವೆ ಎಂಬ ಊರಿನ ದನ ಕಾಯುವ ಹುಡುಗ.

ಹಿಂದೊಮ್ಮೆ ಅಚವೆಯಲ್ಲಿ ಯಾವುದೋ ಕಾರ್‍ಯಕ್ರಮಕ್ಕೆ ಹೋದಾಗ ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಶೆಟ್ಟಿಯವರು ಭೂಮಿಯ ಮೇಲೆ ಆ ದೇವರೇನಾದರೂ ಸೌಂದರ್‍ಯದ ನಿಧಿಯನ್ನು ಯಥೇಶ್ಚವಾಗಿ ಸುರಿದಿದ್ದೇ ಆದರೆ ಅದು ನಿಸ್ಸಂಶಯವಾಗಿ ಅಚವೆಯ ಮೇಲೆ ಎಂದು ಹೆಮ್ಮೆಯಿಂದ ಹೇಳಿದ ಮಾತು ನನಗೆ ಪದೇ ಪದೇ ಕಿವಿಯಲ್ಲಿ ಮೊಳಗುತ್ತಿರುತ್ತದೆ.
ಹೀಗೆಂದೇ ನಾವೂ ಕೂಡ ಸಕುಟುಂಬ ಪರಿವಾರ ಸಮೇತ ಪದೇ ಪದೇ ಅಚವೆಗೆ ಬೇಟಿಕೊಡುತ್ತಿರುತ್ತೇವೆ.
ಹತ್ತಿರದಲ್ಲೇ ಶಾಲ್ಮಲೆ ಮೇಲಿಂದ ವಿಭೂತಿ ಚೆಲ್ಲಿದಂತೆ ಧುಮ್ಮಿಕ್ಕುತ್ತ ಸುಂದರವಾದ ಜಲಪಾತವನ್ನು ಸೃಷ್ಟಿಸಿದ್ದಾಳೆ.
ಉತ್ತರ ಕನ್ನಡದ ಎತ್ತರದ ಶೀಖರಗಳಲ್ಲಿ ಒಂದೆಂದು ಖ್ಯಾತಿ ಪಡೆದ ಮೋತಿಗುಡ್ಡ ಹತ್ತಿರದಲ್ಲೇ ಇದೆ. ಊಟಿಯಂತಹ ವಾತಾವರಣದಿಂದ ಇದು ಜನರ ಗಮನ ಸೆಳೆಯುತ್ತದೆ.

ಅಂತಹ ಅದ್ಭುತ ಪರಿಸರದಲ್ಲಿ ಆತ ಅಲ್ಲಿಯ ಹೆಬ್ಬಾರ ಮನೆತನವೊಂದರಲ್ಲಿ ದನ ಕಾಯುವ ಕೆಲಸ ಮಾಡುತ್ತಿದ್ದ.
ಮುಸ್ಲಿಂ ಸಮಾಜದ ಬಾಲಕ ಆತ. ದನ ಕಾಯಲು ಹೊರಟವನು ದನಗಳನ್ನೆಲ್ಲ ಬೆಟ್ಟದ ಕಣಿವೆ ಪ್ರದೇಶದಲ್ಲಿ ಮೇಯಲು ಬಿಟ್ಟು ಹಾಯಾಗಿ ಮರದ ನೆರಳಿನಲ್ಲಿ ಮಲಗಿ ಬಿಡುತ್ತಿದ್ದ.
ಕೆಲಸ ಮಾಡಿ ಸುಸ್ತಾಗಿದ್ದಕ್ಕೋ ಅಥವಾ ಸುತ್ತಲಿನ ತಂಪಿನ ಆಹ್ಲಾದತೆಗೋ ಆತನಿಗೆ ಬಹು ಬೇಗ ನಿದ್ರೆ ಬಂದು ಬಿಡುತ್ತಿತ್ತು. ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆಂದು ಕೊಂಡೊಯ್ದ ಬುತ್ತಿ ತಿನ್ನುವಷ್ಟೂ ಆತನಿಗೆ ಎಚ್ಚರವಾಗುತ್ತಿರಲಿಲ್ಲ.
ಒಮ್ಮೆ ಯಾಕೋ ಮನೆಯ ಯಜಮಾನರಿಗೆ ಅನುಮಾನ ಬಂತು. ಹುಡುಗ ದಿನೇ ದಿನೇ ಕೃಷವಾಗುತ್ತಿದ್ದಾನೆ. ಸಂಜೆ ಮನೆಗೆ ಬಂದವನು ಗಬಗಬನೆ ತಿನ್ನುವ ರೀತಿ ನೋಡಿದರೆ ಮಧ್ಯಾಹ್ನದ ಊಟ ಮಾಡುವಂತೆ ಕಾಣುತ್ತಿಲ್ಲ ಎಂದುಕೊಂಡರು.
ಮೊದ ಮೊದಲು ಚಿಕ್ಕ ಹುಡುಗ, ಅಲ್ಲಿಯೂ ಕೂಡ ತಂಡ ಕಟ್ಟಿಕೊಂಡು ಆಟ ಆಡಿ ದಣಿದಿರುತ್ತಾನೆ ಎಂದೇ ಅವರು ಭಾವಿಸಿದರು.
ಆದರೆ ಅವನ ಜೊತೆಗೆ ಹೋಗುವ ಮಕ್ಕಳನ್ನು ವಿಚಾರಿಸಿದಾಗ ಆತ ತಮ್ಮ ಜೊತೆ ಇರುವುದಿಲ್ಲ ಎಂದಾಗ ಯಜಮಾನರಿಗೂ ಭಯ ಪ್ರಾರಂಭವಾಯಿತು.

ಎಲ್ಲಾದರೂ ಈತ ಮಲಗಿ ಬಿಟ್ಟರೆ ದನ ಕರುಗಳನ್ನು ಹುಲಿ, ಚಿರತೆಗಳು ಎಳೆದುಕೊಂಡು ಹೊಗಲಾರದೇ? ಹೀಗೆಂದೇ ಒಂದು ದಿನ ತಾವೇ ಆತನನ್ನು ಹುಡುಕಿಕೊಂಡು ಬೆಟ್ಟಕ್ಕೆ ಹೋದರು.
ಅವರು ಎಣಿಸಿದಂತೆ ಹುಡುಗ ಮಲಗಿದ್ದ. ಇನ್ನೇನು ಬೈಯ್ದು ಎಬ್ಬಿಸಬೇಕು ಎಂದು ಮುಂದಡಿಯಿಟ್ಟವರು ಆಶ್ಚರ್‍ಯಚಕಿತರಾಗಿ ಹೆಜ್ಜೆ ಕೇಳಿಸಿದಂತೆ ನಿಂತು ಬಿಟ್ಟರು.
ಯಾಕೆಂದರೆ ಹಾಗೆ ಮಲಗಿದ ಬಾಲಕನ ಮುಖದ ಮೇಲೆ ಬಿಸಿಲು ಬೀಳದಂತೆ ಒಂದು ಹಾವು ಹೆಡೆ ಬಿಚ್ಚಿ ನಿಂತಿತ್ತಂತೆ. ಹೆಬ್ಬಾರರು ಅಲ್ಲಿಂದಲೇ ಹಿಂದಿರುಗಿದರಂತೆ.
ಮನೆಗೆ ಹಿಂದಿರುಗಿದ ನಂತರ ಆ ಬಾಲಕನಿಗೆ ಶಸ್ತ್ರಾಭ್ಯಾಸ ಮಾಡಿಸಿದರಂತೆ. ಮುಂದೊಂದು ದಿನ ರಾಜನಾಗುವ ಯೋಗ ಆತನಲ್ಲಿದೆ ಎಂದು ತಿಳಿದ ಅವರು ಆತನಿಗಾಗಿ ಎಲ್ಲ ಅನುಕೂಲತೆಗಳನ್ನು ಮಾಡಿಕೊಟ್ಟು ಆತನಿಗೊಂದು ಸಣ್ಣ ಸೈನ್ಯವನ್ನೂ ಒದಗಿಸಿದರು.
ಆತ ನಂತರ ಮಿರ್ಜಾನ್ ಕೋಟೆಯನ್ನಾಳಿದ ಮಲಿಕ್ ಎಂಬುದು ಈ ಭಾಗದಲ್ಲಿರುವ ಐತಿಹ್ಯ.

ಸರ್ಪದ ನೆರಳಿನಲ್ಲಿ ಇದ್ದವನಾದ್ದರಿಂದ ಆತನನ್ನು ಸರ್ಪ ಮಲಿಕ್ ಎಂದೇ ಆತನ ಯಜಮಾನರಾದ ಹೆಬ್ಬಾರರು ಕರೆದರಂತೆ. ಹೀಗೆ ಸರ್ಪ ಮಲ್ಲಿಕನಿಂದ ಮೇರಿ ಜಾನ್ ಎಂದು ಕರೆಯಿಸಿಕೊಂಡ ಸುಂದರವಾದ ಊರು ಮಿರ್ಜಾನ್.
ಒಂದು ಕಾಲದಲ್ಲಿ ಮಿಡಚಿ ಎಂದು ಕರೆಯಿಸಿಕೊಂಡ ಊರು ಅಘನಾಶಿನಿ ನದಿಯ ತಟದಲ್ಲಿದೆ.
ಹಿಂದೊಮ್ಮೆ ಈ ಊರು ಅಘನಾಶಿನಿ ತಟದ ಅತಿ ಉತ್ತಮ ಬಂದರಾಗಿದ್ದು ವ್ಯಾಪಾರಿ ಕೇಂದ್ರವಾಗಿತ್ತು.
ಜಿಲ್ಲೆಗೆ ಸಮುದ್ರ ಮಾರ್ಗವಾಗಿ ಒಳನಾಡಿಗೆ ಬರುವುದಕ್ಕೆ ಜಲ ಮಾರ್ಗದಿಂದ ನಾವೆಗಳು ಬಂದು ನಿಲ್ಲುವುದಕ್ಕೆ ಅನುಕೂಲವಾದ ಸ್ಥಳ ಇದಾಗಿತ್ತು.
ಸಮುದ್ರ ಮಾರ್ಗದಿಂದ ಒಳ ನಾಡಿಗೆ ಬರುವರಿಗೆ ಉತ್ತಮ ಬಂದರಾಗಿತ್ತು. ಅಂತೆಯೇ ಡೆಕ್ಕನ್‌ನಿಂದ ಸಮುದ್ರ ಮಾರ್ಗದಲ್ಲಿ ವ್ಯಾಪಾರಕ್ಕೆಂದು ಹೊರಡುವವರಿಗಗಿ ಇದು ಸೂಕ್ತವಾದ ಸ್ಥಳವಾಗಿತ್ತು.
ದೂರದ ಊರುಗಳಿಂದ ಕತ್ತೆ, ಕುದುರೆ ಹಾಗೂ ಬಂಡಿಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ಬರುತ್ತಿದ್ದ ವ್ಯಾಪಾರಸ್ಥರಿಗೆ ಹಡಗಿಗೆ ಸಾಮಾನು ತುಂಬಿಸಲು ಅನುಕೂಲವಾಗಿತ್ತು.
ದೂರದಿಂದ ಬಂದ ಕುದುರೆ ಕತ್ತೆಗಳ ದಾಹ ನಿವಾರಣೆಗೆಂದೇ ಕುದುರೆಹಳ್ಳ ಕತ್ತೆಹಳ್ಳ ಎಂಬ ಹೆಸರಿನ ಕಿರುತೊರೆಗಳು ಇಂದಿಗೂ ಅದೇ ನಾಮಹೊತ್ತು ಹರಿಯುತ್ತಿವೆ.

ಹಾಗೆಂದೆ ಒಳ ನಾಡಿನ ರಾಜರೆಲ್ಲರೂ ಈ ಸ್ಥಳವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು.
ಬಹಳಷ್ಟು ರಾಜರ ಆಡಳಿತ ಕಂಡ ಮಿಡಚಿ ನಂತರ ವಿಜಯಪುರದ ಸುಲ್ತಾನನ ವಶವಾಯಿತು.
ಆತ ಇಲ್ಲಿ ವ್ಯಾಪಾರ ವಹಿವಾಟಿನ ಅನುಕೂಲತೆಗಾಗಿ ಕೋಟೆಯನ್ನು ಕಟ್ಟಿಸಿದ. ನಂತರ ಕರಾವಳಿಯ ಬಹುತೇಕ ಕೊಟೆಗಳನ್ನು ವಶಪಡಿಸಿಕೊಂಡ ಶಿವಾಜಿಯ ವಶವಾಯಿತು.
ಈ ಕೊಟೆ ಟಿಪ್ಪುವಿನ ಪಾಲಾದ ನಂತರ ಆತ ಈ ಮೊದಲೆ ತಿಳಿಸಿದಂತೆ ಚಿಕ್ಕದೊಂದು ಸೈನ್ಯ ಕಟ್ಟಿಕೊಂಡಿದ್ದ ಸರ್ಪ ಮಲಿಕನಿಗೆ ಇಲ್ಲಿಯ ಆಡಳಿತವನ್ನು ವಹಿಸಿ ಪಾಳೆಗಾರನನ್ನಾಗಿ ನೇಮಿಸಿದ್ದರಿಂದ ಅದು ಸರ್ಪ ಮಾಲಿಕನ ಆಳ್ವಿಕೆಗೆ ಒಳಪಟ್ಟಿತು.
ಸರ್ಪಮಲಿಕನ ನಂತರ ಈ ಸ್ಥಳವು ಕೆಲಕಾಲ ಗೇರುಸೊಪ್ಪೆ ಅರಸರ ಆಳ್ವಿಕೆಯಲ್ಲಿತ್ತು. ನಂತರ ಕೋಟೆಯನ್ನು ಬ್ರಿಟೀಷರು ವಶಪಡಿಸಿಕೊಂಡು ತಮ್ಮ ವ್ಯಾಪಾರ ವಹಿವಾಟಿಗಾಗಿ ಬಳಸಿಕೊಂಡಿದ್ದರು.
೧೭೮೪ರಲ್ಲಿ ಜನರಲ್ ಮ್ಯಾಥೂಸನ್ ಎಂಬ ಅಧಿಕಾರಿ ತನ್ನ ಸೈನ್ಯದೊಂದಿಗೆ ಇಲ್ಲಿಂದ ಮಂಗಳೂರಿಗೆ ಹೋಗಿದ್ದಕ್ಕೆ ದಾಖಲೆಗಳಿವೆ.
ಉತ್ತರಕನ್ನಡದ ನಾಡವರು ಎಂಬ ಜನಾಂಗವೂ ಕೂಡ ದಕ್ಷಿಣದ ಬಾರಕುರು ಕಡೆಯಿಂದ ಇದೇ ಬಂದರಿನ ಮೂಲಕವಾಗಿ ಒಳನಾಡು ಪ್ರವೇಶಿಸಿ ಹಿರೇಗುತ್ತಿಯಲ್ಲಿ ನೆಲೆನಿಂತ ಕುರಿತಾಗಿ ಜಾನಪದ ಐತಿಹ್ಯಗಳಿವೆ.
ತುಂಬಾ ವ್ಯವಸ್ಥಿತವಾಗಿ ಕಟ್ಟಿಸಿರುವ ಈ ಕೋಟೆಯ ಸುತ್ತಲೂ ಆಳವಾದ ಕಂದಕವನ್ನು ನಿರ್ಮಿಸಲಾಗಿದ್ದು ಅದಕ್ಕೆ ಅಘನಾಶಿನಿ ನದಿಯ ನೀರನ್ನು ಹಾಯಿಸಿ ಅದರಲ್ಲಿ ಮೊಸಳೆಯನ್ನು ಬಿಡಲಾಗುತ್ತಿತ್ತಂತೆ.

ಹೀಗಾಗಿ ಎಲ್ಲಿಯೂ ಕಳ್ಳದಾರಿಯಿಂದ ಕೋಟೆಯ ಅತಿಕ್ರಮಣ ಸಾಧ್ಯವೇ ಇರಲಿಲ್ಲ.
ಕೋಟೆಯ ಒಳಗೆ ರಾಣಿ ನಿವಾಸ, ಸ್ನಾನಗೃಹ ಸ್ನಾನದ ತೊಟ್ಟಿ ಇರುವ ಸ್ಥಳವಿದೆ. ಕೋಟೆಯ ಸುತ್ತಲು ದೂರದವರೆಗೂ ಕಾಣಲು ವ್ಯವಸ್ಥೆ ಮಾಡಲಾಗಿದೆ. ಎತ್ತರದ ಬುರುಜುಗಳಿವೆ. ಸುತ್ತಲೂ ಇರುವ ಕಾಲುವೆಯನ್ನು ಮೀರಿಯೂ ಆಕ್ರಮಣವಾದರೆ ಕಾಲುವೆಯ ಕೆಳಗಿಂದಲೇ ಹೊರ ಹೋಗಲು ಸುರಂಗ ಮಾರ್ಗವೂ ಇದೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಕೋಟೆಯ ಒಳಗಡೆಯಿಂದಲೇ ಹೊರ ಹೋಗಲು ಅನೇಕ ಸುರಂಗ ಮಾರ್ಗಗಳಿವೆ ಎನ್ನಲಾಗಿದೆ. ಈ ಸುರಂಗ ಮಾರ್ಗಗಳು ಗೋಕರ್ಣದ ಕೋಟಿತೀರ್ಥಕ್ಕೊಂದು, ಅಂಕೋಲಾದ ಕೋಟೆಗೊಂದು, ಮತ್ತು ಅಘನಾಶಿನಿ ನದಿಯ ಅಡಿಭಾಗದಿಂದ ಅತ್ತ ಕಡೆ ಇರುವ ಅಘನಾಶಿನಿ ನದಿ ಸಮುದ್ರಕ್ಕೆ ಸೇರುವ ಊರಾದ ಅಘನಾಶಿನಿ ಕೋಟೆಗೊಂದು ಮಾರ್ಗವಿದ್ದು ಅಂತಹ ಅವಶ್ಯಕತೆ ಇದ್ದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಬಳಸುತ್ತಿದ್ದರಂತೆ.
ಕೋಟೆಯ ಬಾಗಿಲಿನ ಚಿಲಕದ ವ್ಯವಸ್ಥೆ ಗಮನ ಸೆಳೆಯುವಂತಿದ್ದು ಅದೀಗ ಹಾಳಾಗಿದ್ದರೂ ಆಧುನಿಕ ತಂತ್ರಜ್ಞಾನವನ್ನೂ ಮೀರಿಸಿದ ಜ್ಞಾನವನ್ನು ಕಾಣಬಹುದಾಗಿದೆ.
ಕೋಟೆಯ ವಿವಿಧ ಕಿಂಡಿಗಳಲ್ಲಿ ಸರ್ಪದ ಶಿಲ್ಪಗಳಿದ್ದು ನಾಗಾರಾದನೆಯ ಮಹತ್ವವನ್ನು ಸಾರುತ್ತ ಸರ್ಪಮಲಿಕನ ಕಥೆಗೆ ಇಂಬುಕೊಡುವಂತಿದೆ.

ಕೆಲವು ವರ್ಷಗಳ ಹಿಂದೆ ನಿರ್ಜನ ಪ್ರದೇಶವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ, ಶಿಥಿಲಗೊಂಡು ನಿರ್ನಾಮದ ಹಂತದಲ್ಲಿದ್ದ ಕೋಟೆಯನ್ನು ಇದೀಗ ರಾಜ್ಯ ಪುರಾತತ್ವ ಇಲಾಖೆಯು ತನ್ನ ಸುಪರ್ದಿಗೆ ತೆಗೆದು ಕೊಂಡಿದ್ದು ಕೋಟೆಯನ್ನು ಪುನರ್‌ನಿರ್ಮಾಣ ಮಾಡಿದೆ.
ಹಿಂದೊಮ್ಮೆ ಪ್ರೇಮಿಗಳಿಗೆ, ಅನೈತಿಕ ವ್ಯವಹಾರ ಮಾಡುವವರಿಗೆ, ಆತ್ಮಹತ್ಯೆ, ಕೊಲೆಗಳಂತಹ ಪಾತಕ ಕೆಲಸಗಳಿಗೆ ಪ್ರಶಸ್ತವಾಗಿದ್ದ ಸ್ಥಳವೀಗೆ ಸೂಕ್ತವಾದ ಸ್ಥಳ ಫಲಕಗಳೊಂದಿಗೆ ಕೋಟೆಯ ವೈಭವವನ್ನು ಸಾರುವಂತಾಗಿದ್ದು ಸುತ್ತೆಲ್ಲ ಹಳ್ಳಿಗೆ ನೆಮ್ಮದಿ ನೀಡುವಂತಾಗಿದೆ.
ಅನತಿ ದೂರದಲ್ಲೇ ರಾಜರ ಕುದುರೆಗೆ ಆಯಾಸ ಪರಿಹಾರಕ್ಕಾಗಿ ಕುದುರೆ ಭಾವಿ ಇದ್ದು ಸಮೀಪದಲ್ಲೇ ಲಕ್ಷ್ಮಿನಾರಾಯಣ ದೇಗುಲವಿದೆ.
ಇಷ್ಟಾಗಿಯೂ ಕೂಡ ಪುರಾತತ್ವ ಇಲಾಖೆ ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನು ತಡೆಗಟ್ಟಲು ವ್ಯವಸ್ಥೆ ಮಾಡಬೇಕಿದೆ. ಇಲ್ಲಿ ಖಾಯಂ ಆಗಿ ಕಾವಲುಗಾರರನ್ನು ನೇಮಿಸಿ ದಿಟ್ಟ ಕ್ರಮ ಕೈಗೊಳ್ಳುವುದು ನಿಜಕ್ಕೂ ಈ ಕೋಟೆಯನ್ನು ಪುನರಿಜ್ಜೀವಗೊಳಿಸಿದಷ್ಟೇ ಮಹತ್ವಪೂರ್ಣವಾದುದು ಎಂಬುದನ್ನು ಮನಗಂಡರೆ ಪ್ರವಾಸೋದ್ಯಮ ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಜಿಲ್ಲೆಗೆ ಇನ್ನೊಂದು ಗರಿ ಸೇರಿಸಿದಂತಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಲೇಖನ- ಶ್ರೀದೇವಿ ಕೆರೆಮನೆ