ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಅಂಕೋಲಾದ ಉದ್ಯಮಿ ,ಬಿಜೆಪಿ ಮಾಜಿ ಉಪಾಧ್ಯಕ್ಷ ಭಾಸ್ಕರ್ ನಾರ್ವೇಕರ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ಅಂಕೋಲಾ ಮಂಡಲಾಧ್ಯಕ್ಷ ಸಂಜಯ ನಾಯಕ, ವಿಧಾನ ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್, ಕಾರವಾರ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಭಾಸ್ಕರ್ ನಾರ್ವೇಕರ್ ಅವರೊಂದಿಗೆ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಸಭೆ ನಡೆಸಿದರು.

ಪಕ್ಷದಲ್ಲಿ ಈ ರೀತಿ ಬಂಡಾಯವಾಗಿ ಸ್ಪರ್ಧೆ ಮಾಡುವುದರಿಂದ ಜನರಿಗೆ ಹಾಗೂ ಮತದಾರರಿಗೆ ತಪ್ಪು ಸಂದೇಶ ಹೋಗುತ್ತದೆ. ಬಿಜೆಪಿ ಎಂದರೆ ಸಂಘಟನೆಯ, ಶಿಸ್ತಿನ ಪಕ್ಷ. ಹೀಗಾಗಿ ಒಗ್ಗಟ್ಟಾಗಿ ಈ ಚುನಾವಣೆಯನ್ನು ನಾವೆಲ್ಲ ಎದುರಿಸಬೇಕಿದೆ. ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ಗೆಲ್ಲಿಸಲು ನಾವು ಶ್ರಮ ವಹಿಸಬೇಕಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಭೆ ನಡೆದ ನಂತರ ಭಾಸ್ಕರ್ ನಾರ್ವೇಕರ್ ಮನಸ್ಸು ಬದಲಿಸಿ, ತಮ್ಮ ನಿರ್ಧಾರವನ್ನು ಸಭೆಗೆ ತಿಳಿದರು.
ಈ ವೇಳೆ ಮಾತನಾಡಿದ ಭಾಸ್ಕರ್ ನಾರ್ವೇಕರ್, ಬಂಡಾಯವಾಗಿ ಸ್ಪರ್ಧಿಸುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ದನಿದ್ದೇನೆ. ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರ ಗೆಲುವಿಗಾಗಿ ನಾವೆಲ್ಲರೂ ದುಡಿಯುತ್ತೇವೆ. ಅಂಕೋಲಾ ತಾಲೂಕಿನ ಜವಾಬ್ದಾರಿ ಹೊತ್ತು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಅಂತಿಮವಾಗಿ, ಒಗ್ಗಟ್ಟಾಗಿ ಎಲ್ಲರೂ ಈ ಚುನಾವಣೆ ನಡೆಸುತ್ತೇವೆ. ಮಂಗಳವಾರ ಪ್ರಮುಖರೆಲ್ಲರೂ ಸೇರಿ ಕಾರವಾರದಲ್ಲಿ ನಾಮಪತ್ರ ಸಲ್ಲಿಸುತ್ತೇವೆ ಎಂದು ಶಿವರಾಮ ಹೆಬ್ಬಾರ್ ತಿಳಿಸಿದರು.