ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ ಹಾವಳಿ ತಡೆಗಟ್ಟಲು ಅಲರಾಮ್,ಪ್ಲಾಷ್ ಲೈಟ್ ಗೆ ಮೊರೆಹೋದ ಅರಣ್ಯ ಇಲಾಖೆ!

927

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಹೊಲಗಳಿಗೆ ದಾಳಿ ಇಟ್ಟು ಬೆಳೆ ಹಾನಿ ಮಾಡುವ ಆನೆಗಳ ಹಿಂಡನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಲರಾಮ್ ಮತ್ತು ಪ್ಲಾಷ್ ಲೈಟ್ ಮೊರೆಹೋಗಿದ್ದಾರೆ.

ಇದಕ್ಕಾಗಿ ಯಲ್ಲಾಪುರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿಯವರು ಸಾತ್ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ಮುಂಡಗೋಡ ತಾಲೂಕಿನ ಪ್ರದೇಶಗಳಿಗೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆನೆಗಳ ಹಿಂಡು ಬಂದು ಬೆಳೆದು ನಿಂತ ರೈತರ ಪೈರನ್ನು ತಿಂದು-ತುಳಿದು ಹಾನಿ ಮಾಡುತ್ತವೆ.ಈ ವರ್ಷ ಹಾನಿಯ ಪ್ರಮಾಣ ಸಹ ಹೆಚ್ಚಾಗಿದ್ದು ರೈತರು ಅರಣ್ಯ ಇಲಾಖೆಗೆ ಹಿಡಿ ಶಾಪ ಹಾಕುವಂತಾಗಿತ್ತು.

ಈ ನಿಟ್ಟಿನಲ್ಲಿ ಇವುಗಳ ನಿಯಂತ್ರಣಕ್ಕೆ ರೈತರ ಹೊಲಗಳಲ್ಲಿ ಅಲಾರಾಂ ಮತ್ತು ಫ್ಲಾಶ್ ಲೈಟ್ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಹಿಂದೆಯೂ ನಡೆದಿತ್ತು ಪ್ರಯೋಗ!

2010ರಿಂದ ಜಿಲ್ಲೆಯ ಕೆನರಾ ವೃತ್ತದ ಯಲ್ಲಾಪುರ, ಹಳಿಯಾಳ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್) ವ್ಯಾಪ್ತಿಯಲ್ಲಿ ಬರುವ ಎಲ್ಲ 13 ವಲಯಗಳಲ್ಲಿ ರೈತರಿಗೆ ಅತಿ ಕಡಿಮೆ 400-450 ರೂ. ಖರ್ಚಿನಲ್ಲಿ ಹೊಲದ ಅಂಚಿನಲ್ಲಿ 5 ವರ್ಷ ಬಾಳಿಕೆ ಬರುವ ಟ್ರಿಪ್ ಅಲಾರಾಂ ಅಳವಡಿಸಲಾಗುತ್ತಿದೆ. ರೈತನ ಹೊಲದಿಂದ ಸುಮಾರು 200 ಮೀ. ಅಂತರದವರೆಗೆ ಇದರ ಸೈರನ್ ಶಬ್ದ ಕೇಳುತ್ತದೆ. ಸ್ವತಃ ರೈತನೇ ಬಂದು ಆಫ್ ಮಾಡುವವರೆಗೆ ಸೈರನ್ ಬಂದ್ ಆಗುವುದಿಲ್ಲ. ಕಳೆದ 5-6 ವರ್ಷಗಳಿಂದ ಟ್ರಿಪ್ ಅಲಾರಾಂ ಅಳವಡಿಕೆಯಿಂದ ಹಳಿಯಾಳ ಮತ್ತು ಯಲ್ಲಾಪುರ ಭಾಗಗಳಲ್ಲಿ ಕಾಡಾನೆ ಹಾವಳಿ ಗಣನೀಯ ಇಳಿಕೆ ಕಂಡಿದೆ.

ಮೂರು ವರ್ಷದ ಹಿಂದೆ ಪ್ರಾಯೋಗಿಕವಾಗಿ ಮುಂಡಗೋಡು ತಾಲೂಕಿನ ಗುಂಜಾವತಿ ಗ್ರಾಮದ ಹೊಲಗಳಲ್ಲಿ ಟ್ರಿಪ್ ಅಲಾರಾಂ ಅಳವಡಿಸಿದ ನಂತರ ಆನೆ ಬಂದರೂ ಒಂದೇ ದಿವಸಕ್ಕೆ ವಾಪಸಾಗುತ್ತಿದ್ದು ಸಂಪೂರ್ಣವಾಗಿ ಬೆಳೆ ಹಾನಿ ಹತೋಟಿಗೆ ಬಂದಿದೆ. ಮುಂಡಗೋಡ ವಲಯದ ಕ್ಯಾತನಳ್ಳಿ, ಕವಲಗಿ ಮತ್ತು ಕಾತೂರ ವಲಯದ ಸುಳ್ಳಳ್ಳಿ, ಬಸವನಕೊಪ್ಪ ಗ್ರಾಮಗಳಲ್ಲಿ ಸಂಪೂರ್ಣವಾಗಿ ಟ್ರಿಪ್ ಅಲಾರಾಂ ಅಳವಡಿಸಲಾಗಿದೆ.

ಸೋಲಾರ್ ಚಾರ್ಜ್​ನಲ್ಲಿ ನಡೆಯುವ ಫ್ಲಾಶ್ ಲೈಟ್ ಕೂಡ ಅಳವಡಿಸಲಾಗುತ್ತಿದ್ದು ಇದಕ್ಕೆ ಸುಮಾರು 3500 ಸಾವಿರ ರೂ. ಖರ್ಚು ತಗಲುತ್ತದೆ. ಹಗಲು ಬಂದ್ ಇದ್ದು ರಾತ್ರಿ ವೇಳೆ ಮಿನುಗುತ್ತದೆ. ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮೊದಲ ಬಾರಿ ಪ್ರಾಯೋಗಿಕವಾಗಿ ಬ್ಯಾನಳ್ಳಿ ಮತ್ತು ಮಲವಳ್ಳಿ ಗ್ರಾಮಗಳ ಹೊಲಗಳಲ್ಲಿ ಅಳವಡಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!