ಕಾರವಾರ :- ಕಾಡಾನೆಗಳ ಹಿಂಡು ಭತ್ತ ಹಾಗೂ ಗೋವಿನ ಜೋಳದ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು, ತುಳಿದು ನಾಶ ಪಡಿಸಿದ ಘಟನೆ ಮುಂಡಗೋಡು ತಾಲೂಕಿನ ಬ್ಯಾನಳ್ಳಿ ಅರಣ್ಯದ ಅಂಚಿನ ಗದ್ದೆಗಳಲ್ಲಿ ನಡೆದಿದೆ.
ಬ್ಯಾನಳ್ಳಿ ಗ್ರಾಮದ ಸೋನು ವರಕ್ ಎಂಬುವರ ಗದ್ದೆಯಲ್ಲಿ 3 ಎಕರೆಯಲ್ಲಿ ಬೆಳೆದ ಭತ್ತ ಮತ್ತು ಕಟಾವು ಮಾಡಿದ ಗೋವಿನ ಜೋಳದ ತೆನೆಯನ್ನು ಕಾಡಾನೆಗಳು ಹಾನಿ ಮಾಡಿವೆ. ಅಲ್ಲದೇ, ಅಕ್ಕಪಕ್ಕದ ಭತ್ತದ ಗದ್ದೆಗಳಿಗೂ ದಾಳಿ ನಡೆಸಿ, ಹಾನಿ ಮಾಡಿದ ಬಗ್ಗೆ ರೈತರು ತಿಳಿಸಿದ್ದಾರೆ. ಕಾಡಾನೆಗಳ ಹಿಂಡು ಮುಂಡಗೋಡು ತಾಲೂಕಿನ ಕಾತೂರ ವಲಯದ ಮರಗಡಿ, ಕಾತೂರ, ಸಿಂಗನಳ್ಳಿ, ಆಲಳ್ಳಿ ಗ್ರಾಮಗಳ ಭಾಗದ ರೈತರ ತೋಟ, ಗದ್ದೆಗಳಲ್ಲಿ ಬೆಳೆದ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡಿದ್ದವು.
ಆದರೆ ಈಗ ಮುಂಡಗೋಡ ವಲಯದ ಬ್ಯಾನಳ್ಳಿಯಲ್ಲಿ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ. ಈಗಾಗಲೇ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ ಕಾಡು ಪ್ರಾಣಿಗಳ ದಾಳಿಯಿಂದ ರೈತ ಬೆಳೆದ ಬೆಳೆ ಹಾನಿಯಾಗುತ್ತಿರುವುದರಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.