ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಮತ ಪ್ರಚಾರಕ್ಕೆ ತೆರಳಿದ್ದ ಪ್ರಮೋದ್ ಮಧ್ವರಾಜ್ ಗೆ ಗ್ರಾಮಸ್ಥರ ತರಾಟೆ!

119

ಕಾರವಾರ: ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕಾರವಾರ ತಾಲೂಕಿನ ಮಾಜಾಳಿಯ ಬಾವಳದಲ್ಲಿ ನಡೆದಿದ್ದು, ಗ್ರಾಮಸ್ಥರ ವರ್ತನೆಯಿಂದಾಗಿ ಬಿಜೆಪಿ ಮುಖಂಡರಿಗೆ ಇರಿಸುಮುರುಸು ಉಂಟಾಗಿದೆ.

ಕಾರವಾರ ತಾಲ್ಲೂಕಿನ ಬಾವಳ ಗ್ರಾಮದಲ್ಲಿ ಬಿಜೆಪಿ ಮುಖಂಡ, ಪಕ್ಕದ ಉಡುಪಿ ಜಿಲ್ಲೆಯವರಾದ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರುಗಳು ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕಿ ರೂಪಾಲಿ ನಾಯ್ಕ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಆದರೆ ಈ ಪ್ರಚಾರ ಕಾರ್ಯದಲ್ಲಿ ಶಾಸಕಿ ಪಾಲ್ಗೊಂಡಿರಲಿಲ್ಲ.

ಸಭೆಗೆ ಬಾರದೇ ಹೊರಗೆ ನಿಂತು ಭಾಷಣ ಕೇಳಿದ ಗ್ರಾಮಸ್ಥರು.

ಬಿಜೆಪಿ ಮುಖಂಡರ ಪ್ರಚಾರದ ವೇಳೆ ಶಾಸಕಿ ಪ್ರಚಾರಕ್ಕೆ ಆಗಮಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು, ರೂಪಾಲಿ ನಾಯ್ಕ ಶಾಸಕಿಯಾದ 5 ವರ್ಷದಲ್ಲಿ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಸಮಸ್ಯೆಗಳನ್ನ ಆಲಿಸಿಲ್ಲ. 2018ರ ಚುನಾವಣೆಯಲ್ಲಿ ಮತಯಾಚನೆಗೆ ಬಂದಿದ್ದವರು ಮತ್ತೆ ಮುಖ ತೋರಿಸಿಲ್ಲ. ಸ್ಥಳೀಯವಾಗಿ ಯಾವುದೇ ಅಭಿವೃದ್ಧಿ ಮಾಡದೇ ಈಗ ಮತ ಯಾಚನೆಗೆ ಬಂದಿದ್ದೀರಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ಜಿಲ್ಲೆಯ ನಾಯಕರು ಇಲ್ಲಿನವರ ಪರ ಬಂದು ಪ್ರಚಾರ ಮಾಡುವುದೇನಿದೆ? ಶಾಸಕಿಯೇ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಸ್ಯೆ ಕೇಳಲಿ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಆಕ್ರೋಶಗೊಂಡವರನ್ನ ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರು ಸಮಾಧಾನಪಡಿಸಲೆತ್ನಿಸಿದರು. ಮನವಿ ಕೂಡ ಮಾಡಿಕೊಂಡರೂ ಸ್ಥಳೀಯರು ಸಭೆಗೆ ಆಗಮಿಸದೇ ವೇದಿಕೆ ಹೊರಗೆ ನಿಂತು ಬಿಜೆಪಿಗರ ಭಾಷಣ ಕೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!