ಶಿವಮೊಗ್ಗ: ಲಾಕ್‌ಡೌನ್ ಸಂದರ್ಭದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳವಾಗಿದೆ. ಆದರೆ, ಹಾಲು ಮಾರಾಟ ಕುಸಿದಿದ್ದು, ಲಾಕ್‌ಡೌನ್ ಹೀಗೇ ಮುಂದುವರಿದರೆ ರೈತರಿಂದ ಖರೀದಿ ಮಾಡುವ ಹಾಲಿನ ದರ ಕಡಿತಗೊಳಿಸಲು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿಮುಲ್) ನಿರ್ಧರಿಸಿದೆ
ಲಾಕ್‌ಡೌನ್ ಕಾರಣ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಮದುವೆ, ಸಭೆ, ಸಮಾರಂಭಗಳು ಇಲ್ಲದಂತಾಗಿವೆ. ಹೀಗಾಗಿ ಹಾಲು ಮಾರಾಟವಾಗದ ಕಾರಣ ಹಾಲು ಒಕ್ಕೂಟ ಆರ್ಥಿಕವಾಗಿ ನಷ್ಟಕ್ಕೆ ಸಿಲುಕಿದೆ.
ಲಾಕ್‌ಡೌನ್ ಬಳಿಕ ಒಂದು ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಹೆಚ್ಚಾಗಿದ್ದು, ಸದ್ಯ ನಿತ್ಯ 6.75 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಸದ್ಯ 2.4 ಲಕ್ಷ ಲೀಟರ್‌ನಷ್ಟು ಹಾಲು ಮಾತ್ರ ಮಾರಾಟವಾಗುತ್ತಿದೆ. 20 ಸಾವಿರದಿಂದ 23 ಸಾವಿರ ಲೀಟರ್ ಮೊಸರು ಹಾಗೂ 90 ಸಾವಿರ ಲೀಟರ್ ಹಾಲು ಹೊರ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಉಳಿದ 3 ಲಕ್ಷ ಲೀಟರ್‌ನಷ್ಟು ಹಾಲು ಪುಡಿಯಾಗಿ ಪರಿವರ್ತನೆಯಾಗುತ್ತಿದೆ.
3 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಒಂದು ಕೆ.ಜಿ. ಹಾಲಿನ ಪುಡಿ ಉತ್ಪಾದನೆಗೆ 10 ಲೀಟರ್ ಹಾಲು ಬೇಕಾಗುತ್ತದೆ. ಉತ್ಪಾದನೆ ಅಧಿಕವಾಗಿ, ಮಾರಾಟ ಕುಸಿದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆ ಹಾಗೂ ಹಾಲಿನ ಪುಡಿ ಮಾಡಲಾಗುತ್ತಿದೆ. ಆದರೆ, ಸದ್ಯ ಹಾಲಿನ ಪುಡಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವ ಕಾರಣ ಶಿಮುಲ್ ಆರ್ಥಿಕ ನಷ್ಟ ಅನುಭವಿಸುತ್ತಿದೆ.
ಹಾಲಿನ ದರ ಕಡಿತಕ್ಕೆ ಚಿಂತನೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಮಾರಾಟ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರದ ಬೆಲೆಯು ಕುಸಿಯುವ ಸಾಧ್ಯತೆ ಹೆಚ್ಚಿದೆ.
ಜಿಲ್ಲೆಯ ಹಾಲಿನ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹ 25.25 ದರವನ್ನು ಶಿಮುಲ್ ನೀಡುತ್ತಿದೆ. ಇದರ ಜತೆ ಸರ್ಕಾರದ ₹ 5 ಸೇರಿ ರೈತರಿಗೆ ₹ 30.25 ದರ ಸಿಗುತ್ತಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ₹ 4ರಿಂದ ₹ 5 ಕುಸಿದಿದೆ. ಕಳೆದ ಬಾರಿ ಇದೇ ದಿನದಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹ 35 ಸಿಗುತ್ತಿತ್ತು. ಲಾಕ್‌ಡೌನ್ ಹೀಗೆ ಮುಂದುವರಿದು ಹಾಲು ಮಾರಾಟವಾಗದೇ, ಪುಡಿಗೂ ಬೇಡಿಕೆ ಸಿಗದೇ ಇದ್ದರೆ ರೈತರಿಂದ ಖರೀದಿ ಹಾಲಿನ ದರ ಕಡಿತ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಶಿಮುಲ್ ಅಧ್ಯಕ್ಷ ಡಿ.ಆನಂದ್ ಮಾಹಿತಿ ನೀಡಿದ್ದಾರೆ.
ಹಾಲಿನ ಪುಡಿಗೂ ಬೇಡಿಕೆ ಇಲ್ಲ
ಲಾಕ್‌ಡೌನ್ ನಂತರ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಇದರಿಂದಾಗಿ 800 ಟನ್‌ಗಿಂತಲೂ ಹೆಚ್ಚು ಹಾಲಿನ ಪುಡಿ, 350ರಿಂದ 400 ಟನ್‌ನಷ್ಟು ಬೆಣ್ಣೆ ಹಾಗೇ ಉಳಿದಿದ್ದು ನಷ್ಟದತ್ತ ಸಾಗಿದೆ.