ಜಿಲ್ಲೆಯಲ್ಲಿ ಮೇ 31ರಿಂದ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ

376

ಶಿವಮೊಗ್ಗ, ಮೇ 29:- ಜಿಲ್ಲೆಯಾದ್ಯಂತ ಮೇ 31ರಿಂದ ಜೂನ್ 7ರವರೆಗೆ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ ಕಡಿಮೆಯಾಗುತ್ತಿಲ್ಲ. ಲಾಕ್‍ಡೌನ್ ಜಾರಿಯಲ್ಲಿದ್ದರೂ, ಜನರು ಅನಗತ್ಯವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೋಮವಾರ 10ಗಂಟೆಯಿಂದ ಒಂದು ವಾರ ಕಾಲ ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಈ ಅವಧಿಯಲ್ಲಿ ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದರೆ ಚಿಲ್ಲರೆ ಅಂಗಡಿಗಳಿಗೆ ಅವರು ಸರಕುಗಳನ್ನು ನೇರವಾಗಿ ಪೂರೈಕೆ ಮಾಡಬಹುದಾಗಿದೆ. ತಳ್ಳುಗಾಡಿಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ಇರುವುದಿಲ್ಲ. ಕನಿಷ್ಟ ಮಟ್ಟದಲ್ಲಿ ಬ್ಯಾಂಕ್ ಸೇವೆ ಇರುವುದು ಎಂದು ಹೇಳಿದರು.

ಹೊಟೇಲ್‍ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆಗೆ ಸಂಬಂಧಿಸಿದ ಸಮಾರಂಭಗಳು, ಗೃಹಪ್ರವೇಶ ಇತ್ಯಾದಿಗಳಿಗೆ ಅನುಮತಿ ಇರುವುದಿಲ್ಲ. ಇದನ್ನು ಉಲ್ಲಂಘಿಸಿ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಞ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿರುವ ಅಗತ್ಯ ಕೈಗಾರಿಕಾ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುವುದು. ಅಗತ್ಯ ಸರ್ಕಾರಿ ಕಾಮಗಾರಿಗಳು ಹಾಗೂ ಮಾನ್ಸೂನ್ ಪೂರ್ವ ಕಾಮಗಾರಿಗಳನ್ನು ಬಿಟ್ಟು ಬೇರೆ ಎಲ್ಲಾ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇರುವುದಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗೆ ಬರುವ ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲದೆ, ಸವಾರರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಕಳೆದ 7ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಒಂದು ವಾರ ಕಾಲ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 26 ಸಕ್ರಿಯ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನೀರನ್ನು ಸರಿಯಾಗಿ ಕುದಿಸಿ ಆರಿಸಿ ಕುಡಿಯುವುದು ಸೇರಿದಂತೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಜನರು ಅನುಸರಿಸಬೇಕು ಎಂದು ಸಚಿವರು ತಿಳಿಸಿದರು.

ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!