ರಾಕಿಂಗ್ ಸ್ಟಾರ್ ಯಶ್ ನೇತ್ರತ್ವದಲ್ಲಿ ಸಾಗರದ ಆನಂದಪುರದ ಪುರಾತನ ಕೊಳ ಪುನರುಜ್ಜೀವನಕ್ಕೆ ಚಾಲನೆ-ವಿಶೇಷವೇನು ವಿವರ ನೋಡಿ

1021

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಪುರಾಣ ಪ್ರಸಿದ್ಧ ಚಂಪಕ ಸರಸು ಕಲ್ಯಾಣಿಯ ಪುನರುಜ್ಜೀವನ ಕಾರ್ಯಕ್ಕೆ ಖ್ಯಾತ ನಟ ರಾಕಿಂಕ್ ಸ್ಟಾರ್ ಯಶ್ ನೇತ್ರತ್ವದ ಯಶೋಮಾರ್ಗ ಸಂಸ್ಥೆ ಕೈ ಹಾಕಿದೆ.

ಹೈದರಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ನೇತ್ರತ್ವದಲ್ಲಿ ಈ ಕಾರ್ಯ ಇಂದಿನಿಂದ ಆರಂಭವಾಗಿದ್ದು , ಜಲತಜ್ಞ ಶಿರಸಿಯ ಶಿವಾನಂದ ಕಳವೆ ರವರು ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ರಾಕೇಶ್ ,ರಾಜ್ಯ ಯಶ್ ಅಭಿಮಾನಿ ಸಂಘದ ಸತೀಶ್ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

ಪುರಾತನ ಕಲ್ಯಾಣಿ ಚಂಪಕ ಸರಸು ವಿಶೇಷ ಏನು?

ಶಿವಮೊಗ್ಗ ಜಿಲ್ಲೆಯ ಆನಂದಪುರದ ಹೆದ್ದಾರಿಯ ಪಕ್ಕದಲ್ಲೇ ಬರುವ ಅಲಂದೂರಿನಲ್ಲಿ ಈ ಪುರಾತನ ಕಲ್ಯಾಣಿ ಇದೆ. ಕೆಳದಿ ಅರಸ ವೆಂಕಟಪ್ಪ ನಾಯ್ಕ ಅವರ ಕಾಲದಲ್ಲಿ ಈ ಕೊಳ ನಿರ್ಮಾಣವಾಗಿದೆ. ಇದಕ್ಕೆ 400 ವರ್ಷದ ಇತಿಹಾಸವಿದೆ. ಸೂಕ್ತ ನಿರ್ವಹಣೆ ಇಲ್ಲದೇ ಸಂಪೂರ್ಣ ಹಾಳಾಗಿದೆ.

ಜಲ ತಜ್ಞ ಶಿವಾನಂದ ಕಳವೆ ಹೇಳುವುದು ಏನು?

ನಮ್ಮ ರಾಜ್ಯದ ಕೆಳದಿಯ ಅರಸರದು ಜಲ ಕಾಯಕದಲ್ಲಿ ದೊಡ್ಡ ಹೆಸರು. ಅರಸು ಮನೆತನದ ಪ್ರಮುಖರಾದ ವೆಂಕಟಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸನಿಹದ ಚಂಪಕ ಸರಸು ಎಂಬ ಅಪುರೂಪದ ಕಲ್ಯಾಣಿ ನಿರ್ಮಿಸಿದರು. ಇಂದಿಗೆ 400 ವರ್ಷಗಳ ಹಿಂದೆ ನಿರ್ಮಿಸಿದ ಈ ಕಲ್ಯಾಣಿ ಪುನಶ್ಚೇತನ ಮಾಡಲು ರಾಕಿಂಗ್ ಸ್ಟಾರ್ ಶ್ರೀ ಯಶ್ ರ ಯಶೋ ಮಾರ್ಗ ಈಗ ಮುಂದಾಗಿದೆ. ಕಲ್ಲಿನ ಕಟ್ಟೆ ಕುಸಿತ, ಗಿಡಗಂಟಿ ಬೆಳೆಯುತ್ತ ಅಪುರೂಪದ ಶಿಲ್ಪಗಳು ಹಾಳಾಗುವ ಹೊತ್ತಿನಲ್ಲಿ ಇದಕ್ಕೊಂದು ನಿಶ್ಚಿತ ಕಾರ್ಯಕ್ರಮ ರೂಪಿಸಿ ಸಂರಕ್ಷಣೆಗೆ ಹೆಜ್ಜೆ ಇಡಲಾಗಿದೆ. ಇತಿಹಾಸ ಪರಂಪರೆ ಉಳಿಸಿ ಆಂದೋಲನ ಸ್ಥಳೀಯ ಸಹಕಾರ ನೀಡಿದೆ.

ನಾಡಿನ ಹೆಸರಾಂತ ಚಿತ್ರನಟರಾಗಿ ಇಂಥ ಸಮಾಜಮುಖಿ ಕಾರ್ಯಕ್ಕೆ ಶ್ರೀ ಯಶ್ ರ ಸ್ಪಂದನೆ ನಿಜಕ್ಕೂ ಅಮೂಲ್ಯವಾದುದು. ನಾವಿಬ್ಬರೂ ಇಷ್ಟು.ವರ್ಷಗಳ ಪರಿಚಯ ಕಾಲದಿಂದಲೂ ಮಾತಾಡಿದ್ದು ನೀರು, ಕೃಷಿ, ಕಾಡಿನ ಬಗ್ಗೆ ಮಾತ್ರ. ಪರಿಸರ ಪ್ರೀತಿಗೆ ಇವತ್ತು ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಲು ನನಗೆ ನೀಡಿದ ಅವಕಾಶಕ್ಕೆ , ಅವರ ಜಲ ಪ್ರೀತಿಗೆ ಶರಣು.

ಮಿತ್ರ ರಾಕೇಶ್, ಸತೀಶ್ ಶಿವಣ್ಣ, ಶ್ರೀಗಂಧ ಇವರೆಲ್ಲ ಬೆಳಗಿನಿಂದಲೇ ಹಾಜರಿದ್ದು ಕಾರ್ಯಕ್ಕೆ ತೋರಿದ ಸ್ಪಂದನೆ ವಿಶೇಷ. ರವಿಕುಮಾರ್, ಬರಹಗಾರ ಮಿತ್ರ ಅರುಣ್ ಪ್ರಸಾದ್ ಹೀಗೆ ಹತ್ತು ಹಲವು ಆಸಕ್ತರ ಆಶಯ, ಕಾಳಜಿ ಕಾರ್ಯಕ್ಕೆ ಸಹಾಯಕವಾಗಿದೆ. ಎಂದು ಶಿರಸಿಯ ಶಿವಾನಂದ ಕಳವೆ ರವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಯಶೋಮಾರ್ಗದ ಪ್ಲಾನ್ ಏನು?

ಈ ಕೊಳದ ಸುತ್ತಲೂ ಸ್ವಚ್ಛತೆ ಮಾಡಿ ನಂತರ ಇಂಗು ಗುಂಡಿ ನಿರ್ಮಿಸಿ,ಈ ಸ್ಮಾರಕಕ್ಕೆ ಗೇಟ್ ನಿರ್ಮಿಸಿ ,ಕಾವಲುಗಾರರ ಮನೆ ಹಾಗೂ ಅವಷ್ಯಕ ಮೂಲ ಸೌಕರ್ಯಗಳನ್ನು ಮಾಡಿ ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿ ಸಂರಕ್ಷಿಸುವ ಉದ್ದೇಶ ಹೊಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!