ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳ ಸಿಗಂದೂರು ದೇವಿ ದೇವಸ್ಥಾನದ ಸುತ್ತಮುತ್ತಲಿನ ಒತ್ತುವರಿ ಅರಣ್ಯ ಭೂಮಿಯ ತೆರವು ಕಾರ್ಯಾಚರಣೆ ಯನ್ನು ನ್ಯಾಯಾಲಯದ ಆದೇಶದಂತೆ ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ನಡೆಸಲಾಯಿತು.
ಸಿಗಂದೂರು ದೇವಾಲಯದ ಟ್ರಸ್ಟ್ ದೇವಸ್ಥಾನದ ಸುತ್ತಮುತ್ತಲಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಒತ್ತುವರಿ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು ಎಂದು ಸಾಗರದ ಲಕ್ಷ್ಮಿನಾರಾಯಣ ಎಂಬುವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಜಿಲ್ಲಾಧಿಕಾರಿ ವರದಿ ನೀಡುವಂತೆ ಸೂಚಿಸಿದ್ದರು.

ವರದಿಯಲ್ಲಿ ಒತ್ತುವರಿ ಕುರಿತು ಉಲ್ಲೇಖ ಮಾಡಲಾಗಿದ್ದು ಇದರ ಹಿನ್ನಲೆಯಲ್ಲಿ ತೀರ್ಪು ನೀಡಿದ ನ್ಯಾಯಾಲಯ ದೇವಸ್ಥಾನದ ಸುತ್ತಮುತ್ತ 6 ಎಕರೆ 16 ಗುಂಟೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಾಗರದ ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಡಿವೈಎಸ್ ಪಿ ವಿನಯ್ ಶೆಟಗೇರಿರವರ ಮುಂದಾಳತ್ವದಲ್ಲಿ ಒತ್ತುವರಿ ಅರಣ್ಯ ಭೂಮಿ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸುವ ಕಾರ್ಯ ನಡೆಸಿದರು.
ಅರಣ್ಯ ಕಡಿದು ವಾಣಿಜ್ಯ ಕಟ್ಟಡ ನಿರ್ಮಾಣ!
ದೇವಸ್ಥಾನ ಸುತ್ತಮುತ್ತಲೂ ಅರಣ್ಯ ಭೂಮಿ ಇದ್ದು ಕಳೆದ ಹಲವು ವರ್ಷದಿಂದ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ನವರ ತಂಡ ಹಂತಹಂತವಾಗಿ ಕಡಿದು ,ಗುಡ್ಡವನ್ನು ಅಗೆದು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತಿದ್ದರು. ಈ ಹಿನ್ನಲೆಯಲ್ಲಿ ಸಾಕಷ್ಟುಬಾರಿ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ತಮ್ಮ ಪ್ರಭಾವದಿಂದ ಒತ್ತುವರಿ ತೆರವು ಗೊಳಿಸದಂತೆ ಒತ್ತಡ ಹೇರಿದ್ದರು. ಆದರೇ ಹೈಕೋರ್ಟ ನ್ಯಾಯಯುತ ತೀರ್ಪು ನೀಡಿದ್ದು ಸ್ಥಳೀಯರು ಸ್ವಾಗತಿಸಿದ್ದಾರೆ.