ದತ್ತಾವತಾರಿ ಶ್ರೀ ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಪಾದುಕೆಗೆ ಕೇಸರಿ ಗಂಧಲೇಪನದ ಮಹತ್ವವೇನು ?

2312

ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಶ್ರೀ ಭಗವಾನ್ ಶ್ರೀಧರ ಸ್ವಾಮಿ ಮಹಾರಾಜ್ ರವರ ದಿವ್ಯ ಪಾದುಕೆ ಮತ್ತು ಸಮಾಧಿಗೆ ಪ್ರತಿವರ್ಷ ಮಾಘ ಬಹುಳ ಪಾಡ್ಯಮಿಯಂದು (ಗುರು ಪಾಡ್ಯಮಿ) ಕೇಸರಿ ಗಂಧ ಲೇಪಿಸಿ ನಂತರ ಅದನ್ನು ಭಕ್ತಾದಿಗಳಿಗೆ ಪ್ರಸಾದ ದ ರೂಪದಲ್ಲಿ ನೀಡುವ ಪರಿಪಾಠವನ್ನು ಕಳೆದ 11 ವರ್ಷಗಳಿಂದ ಶ್ರೀಮಠವು ನಡೆಸಿಕೊಂಡು ಬರುತ್ತಿದೆ.

ಕೇಸರಿ ಗಂಧ ಲೇಪನದ ವೈಶಿಷ್ಟ್ಯ


ಶ್ರೀ ದತ್ತಾತ್ರೇಯ ಪರಂಪರೆಯಲ್ಲಿ ಗಾಣಗಾಪುರ ದಲ್ಲಿರುವ ಶ್ರೀ ದತ್ತಾತ್ರೇಯರ ಮೂಲ ನಿರ್ಗುಣ ಪಾದುಕೆಗೆ ಯಾವುದೇ ರೀತಿಯ ಅಭಿಷೇಕವಿಲ್ಲ. ಪ್ರತಿನಿತ್ಯ ನಿರ್ಗುಣ ಪಾದುಕೆಗಳಿಗೆ ಶುದ್ಧ ಗಂಧದ ಎಣ್ಣೆ ಅಥವಾ ಅತ್ತರ್ ಗೆ ಸಿದ್ದ ಕೇಸರಿಯನ್ನು ಸೇರಿಸಿ ಲೇಪನ ಮಾಡುತ್ತಾರೆ. ಅದೇ ರೀತಿ ದತ್ತಾತ್ರೇಯನ ಬೇರೆ ಬೇರೆ ಸ್ಥಾನಗಳಲ್ಲಿ ಪ್ರತಿನಿತ್ಯ ಅಭಿಷೇಕ ವಿದ್ದರು ಅಲ್ಲಿರುವ ಪಾದುಕೆಗೆ ವರ್ಷಕ್ಕೊಮ್ಮೆ ಕೇಸರಿ ಗಂಧದ ಲೇಪನವನ್ನು ಮಾಡುವ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಅದೇ ರೀತಿ ದತ್ತಾತ್ರೇಯನ ಅವತಾರವೆಂದು ನಂಬಿರುವ ಶ್ರೀ ಶ್ರೀಧರ ಸ್ವಾಮಿಗಳ ದಿವ್ಯ ಚೈತನ್ಯ ಸಮಾಧಿಗೆ ಮತ್ತು ದಿವ್ಯ ಪಾದುಕೆಗಳಿಗೆ ವರ್ಷಕ್ಕೊಮ್ಮೆ ಕೇಸರಿ ಗಂಧದ ಲೇಪನವನ್ನು ಮಾಡಲಾಗುತ್ತದೆ.

ಶುದ್ಧ ಕುಂಕುಮ ಕೇಸರಿಯನ್ನು ಒಂದು ದಿನಗಳ ಕಾಲ ಶುದ್ಧ ಗಂಧದೆಣ್ಣೆ ಅಥವಾ ಅತ್ತರ್ ನಲ್ಲಿ ನೆನೆಸಿಟ್ಟು, ಮಾರನೇ ದಿನ ಗಂಧದೆಣ್ಣೆ ಯಲ್ಲಿ ಶ್ರೀಗಂಧವನ್ನು ತೇಯ್ದು ಸಮಾಧಿ ಮತ್ತು ಪಾದುಕೆಗೆ ಲೇಪಿಸಲಾಗುತ್ತದೆ. ಈ ಕಾರ್ಯಕ್ಕೆ 350ಗ್ರಾಮ್ ನಷ್ಟು ಕೇಸರಿಯನ್ನು ಬಳಸಲಾಗುತ್ತದೆ.

ಕೇಸರಿ ಗಂಧ ಲೇಪನದ ಮಹತ್ವ:

ಕೇಸರಿಯು ಭಾರತೀಯ ಆಯುರ್ವೇದ ಶಾಸ್ತ್ರದ ಪ್ರಕಾರ ಮನಸ್ಸಿನ ಉದ್ವೇಗ ಹಾಗೂ ಖಿನ್ನತೆ ಯನ್ನು ಕಡಿಮೆ ಮಾಡುತ್ತದೆ. ಹಲವಾರು ಕಾಯಿಲೆಗಳಿಗೆ ಕೇಸರಿ ಔಷಧಿಯಾಗಿ ಬಳಕೆಯಾಗುತ್ತದೆ. ಅಲ್ಲದೆ ಕೇಸರಿ ರೋಗನಿರೋಧಕ ಅಂಶಗಳನ್ನು ಒಳಗೊಂಡಿದೆ. ಇದರೊಂದಿಗೆ ಶ್ರೀಗಂಧವು ಕೂಡ ಇದರಷ್ಟೇ ಮಹತ್ವವನ್ನು ಹೊಂದಿದೆ.

ಶ್ರೀಕ್ಷೇತ್ರ ವರದಹಳ್ಳಿಯಲ್ಲಿ ಕೇಸರಿ ಗಂಧದ ಲೇಪನ:


ಕಳೆದ 11 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಕೇಸರಿ ಗಂಧ ಲೇಪನವನ್ನು ಮಾಡುವ ಪರಿಪಾಠವನ್ನು ಬೆಳಸಿಕೊಂಡು ಬರಲಾಗಿದೆ. ಈ ಪದ್ಧತಿಗೆ ನಾಂದಿ ಹಾಡಿದವರು ಶ್ರೀ ಶ್ರೀಧರಸ್ವಾಮಿಗಳ ಪರಮ ಶಿಷ್ಯರಾದ ಶ್ರೀ ದತ್ತಾತ್ರೇಯ ವಾಡೆಕರ್ ಮಹಾರಾಜ್ ರವರು. ಅಂದಿನಿಂದ ಇಂದಿನವರೆಗೂ ಅವರು ತಮ್ಮ ಕೈಯಲ್ಲಾದಷ್ಟು ಕೇಸರಿಯನ್ನು ಲೇಪನ ಕಾರ್ಯಕ್ಕೆ ನೀಡುತ್ತಾ ಬಂದಿದ್ದಾರೆ.
ಕಲಿಯುಗದಲ್ಲಿ ದತ್ತಾತ್ರೇಯನ 2ನೇ ಅವತಾರವೆಂದೇ ನಂಬಿರುವ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳವರು ನಿಜಗಮಾನಂದ (ಅದೃಶ್ಯ)ವಾದ ಮಾಘ ಕೃಷ್ಣ ಪಾಡ್ಯಮಿಯಂದು ಕೇಸರಿ ಗಂಧ ಲೇಪನವನ್ನು ಶ್ರೀ ಶ್ರೀಧರರ ಸಮಾಧಿಗೆ ಮಾಡಲಾಗುತ್ತದೆ. ಬೆಳಿಗ್ಗೆ ಮಹಾಪೂಜೆಯ ಸಮಯಕ್ಕೆ ಲೇಪಿಸಿ, ಸಂಜೆ ಪೂಜೆಯ ಸಮಯದಲ್ಲಿ ಲೇಪನವನ್ನು ತೆಗೆದು ಅದನ್ನು ಪ್ರಸಾದದ ರೂಪದಲ್ಲಿ ಭಕ್ತಾದಿಗಳಿಗೆ ನೀಡಲಾಗುತ್ತದೆ. ಲೇಪನ ತೆಗೆದ ನಂತರ ಉಷ್ಣತೆ ಕಡಿಮೆ ಮಾಡಲು ಎಳನೀರು ಮತ್ತು ಹಾಲಿನ ಅಭಿಷೇಕ ಮಾಡಲಾಗುತ್ತದೆ.

ವರದಹಳ್ಳಿಯ ಕಿರು ಪರಿಚಯ:

ಶ್ರೀ ಕ್ಷೇತ್ರ ವರದಾಪುರ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಈ ಪುಟ್ಟ ಗ್ರಾಮವು ಒಂದು ತೀರ್ಥಕ್ಷೇತ್ರ. ಪಶ್ಚಿಮ ಘಟ್ಟಗಳ ಹಚ್ಚಹಸಿರಿನ ನಡುವೆ ಇಲ್ಲಿ ದತ್ತಾತ್ರೇಯನ ಅವತಾರ ಎಂದೇ ನಂಬಿರುವ ಶ್ರೀ ಶ್ರೀಧರ ಸ್ವಾಮಿಗಳು ಸಮಾಧಿಸ್ಥಿತಿಯಲ್ಲಿ ನೆಲೆಸಿದ್ದಾರೆ. ಶ್ರೀಗಳು ದುರ್ಗಾದೇವಿಯ ಆಣತಿಯಂತೆ ನಾಡ ವರದಹಳ್ಳಿಗೆ ಆಗಮಿಸಿ ಅಲ್ಲಿರುವ ದುರ್ಗಾಂಬ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ನಂತರ ವರದಹಳ್ಳಿಯಲ್ಲಿ ತಪೋನಿರತರಾಗಿ ಈ ಕ್ಷೇತ್ರವನ್ನು ಪಾವನ ಗೊಳಿಸಿದ್ದಾರೆ.

ಪರಮಪೂಜ್ಯ ಶ್ರೀಗಳು.

ಅವರ ತಪೋಶಕ್ತಿಯಿಂದ ತೀರ್ಥ ಜಲವನ್ನು ಉದ್ಭವಿಸುವಂತೆ ಮಾಡಿ, ಧರ್ಮಸಂಸ್ಥಾಪನೆ ಮತ್ತು ಧರ್ಮದ ಉಳಿವಿಗಾಗಿ ಶ್ರೀ ಕ್ಷೇತ್ರದಲ್ಲಿ ಧರ್ಮ ಧ್ವಜವನ್ನು ಪ್ರತಿಷ್ಠಾಪಿಸಿದ್ದಾರೆ. ಶ್ರೀಗಳ ಸಮಾಧಿ ದರ್ಶನಕ್ಕೆ ಬರುವವರು ಗೋಮುಖದಿಂದ ಬರುವ ತೀರ್ಥಸ್ನಾನ ಮಾಡಿ ಶ್ರೀಗಳ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತಿನಿತ್ಯವೂ ಇಲ್ಲಿ ತ್ರಿಕಾಲ ದಾಸೋಹ ನಡೆಯುತ್ತದೆ.

ಶ್ರೀ ಶ್ರೀಧರ ಸ್ವಾಮಿಯವರ ಧ್ಯಾನ ಶ್ಲೋಕ:

ನಮಃ ಶಾಂತಾಯ, ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ

ಲೇಖನ:-ಅಂಜನ್ ಕಾಯ್ಕಿಣಿ.ಸಾಗರ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!