
ಶಿರಸಿ: ಜೀವ ಜಲ ಕಾರ್ಯಪಡೆ ಅಧ್ಯಕ್ಷ ಮತ್ತು ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಶ್ರೀನಿವಾಸ ಹೆಬ್ಬಾರ ಅವರು ಇಂದು ಮತ್ತಿಘಟ್ಟಕ್ಕೆ ತೆರಳಿ ಭೂ ಕುಸಿತ ದಿಂದ ತೊಂದರೆಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ವಯಕ್ತಿಕವಾಗಿ ತಲಾ 51 ಸಾವಿರ ರೂ.ಗಳ ಚೆಕ್ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಚೆಕ್ ಸ್ವೀಕರಿಸಿ ಮಾತನಾಡಿದ ಮಧುಸೂದನ ನರಸಿಂಹ ಹೆಗಡೆಯವರು ಭೂ ಕುಸಿತವುಂಟಾಗಿ ತಮ್ಮ ಒಂದು ಎಕರೆ ತೋಟ ಸಂಪೂರ್ಣ ನಾಶವಾಗಿ ನಿರ್ಗತಿಕರಾಗಿದ್ದೇವೆ.

ಈವರೆಗೆ ನೋಡಲು ಬಂದವರು ಭರವಸೆ ನೀಡಿ ಹೋಗಿದ್ದಾರೆಯೇ ವಿನಃ ಬೇರೆ ನೆರವಿಗೆ ಬಂದಿಲ್ಲ. ಆದರೆ ಹೆಬ್ಬಾರರು ನಮ್ಮ ಪಾಲಿಗೆ ದೇವರಂತೆಯೇ ಬಂದು ಈ ನೆರವು ನೀಡಿದರು.
ನಾವು ಈ ಜನ್ಮದಲ್ಲಿ ಅವರ ಋಣ ತೀರಿಸಲು ಸಾಧ್ಯವಿಲ್ಲವೆಂದು ಗದ್ಗದಿತರಾಗಿ ನುಡಿದರು.
ತಮಗೆ ಬ್ಯಾಂಕಿನಲ್ಲಿ ೫ ಲಕ್ಷ ರೂ ಗಳಿಗೂ ಹೆಚ್ಚು ಸಾಲವಿದೆ. ಕಳೆದ ವರ್ಷ ಮನ್ನಾ ಆಗಿದೆಯೆಂದು ಹೇಳಿದ 1 ಲಕ್ಷ ರೂ. ಕೂಡ ಮನ್ನವಾಗಿಲ್ಲ.
ಈ ಸಾಲ ತೀರಿಸುವುದು ಹೇಗೆ? ನಮಗೀಗ ಏನೂ ಇಲ್ಲದಂತಾಗಿದೆ. ಜೀವನ ಅಭದ್ರವಾಗಿದೆಯೆಂದರು.
ಇನ್ನು ಇವರ ಜಮೀನಿಗೆ ಹೊಂದಿರುವ ನೀಲಕಂಠ ನಾರಾಯಣ ಭಟ್ ಎಂಬವರ ತೋಟಕ್ಕೂ ಸಾಕಷ್ಟು ಹಾನಿಯಾಗಿದ್ದು ಸಹಾಯವನ್ನು ಕೇಳಿಕೊಂಡರು.
ಚೆಕ್ ನೀಡುವ ಸಂದರ್ಭದಲ್ಲಿ ಜನಮಾಧ್ಯಮ ಸಂಪಾದಕ ಅಶೋಕ ಹಾಸ್ಯಗಾರ, ಚಿದಾನಂದ ಹೆಗಡೆ ಮತ್ತಿತರರು ಇದ್ದರು.
ಮತ್ತೆ ಆತಂಕದಲ್ಲಿ ಸಂತ್ರಸ್ತ ಕುಟುಂಬ- ಬದಲಿ ವ್ಯವಸ್ತೆಗೆ ಆಗ್ರಹ.

ನೈಸರ್ಗಿಕವಾಗಿ ಮತ್ತಿಘಟ್ಟದಲ್ಲಿ ಹರಿಯುವ ನೀರನ್ನು ಕುಡಿಯಲು ಮತ್ತು ತೋಟಕ್ಕೆ ಬಳಸಿಕೊಳ್ಳಲು ಮಾಡಿದ ಯೋಜನೆಗಳ ಪೈಕಿ 2010-11 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯು ಮತ್ತಿಘಟ್ಟ ಕೆಳಗಿನ ಕೇರಿಯ ಕಲಗದ್ದೆಯಲ್ಲಿ ಹಸೆಹಳ್ಳದ ನೀರಿಗೆ ಕಾಲುವೆ ನಿರ್ಮಿಸಿಕೊಟ್ಟಿತ್ತು.
ಈ ಕಾಲುವೆ ನಿರ್ಮಾಣವಾಗಿ ಹತ್ತು ವರ್ಷಗಳೇ ಕಳೆದುದರಿಂದ ಶಿಥಿಲವಾಗಿ ಕಾಲುವೆಯಲ್ಲಿ ಹರಿಯುವ ನೀರು ಭೂಮಿಯೊಳಗೆ ಇಳಿದು ಈ ಅವಘಡ ಸಂಭವಿಸಿದೆ ಎಂಬುದು ಗ್ರಾಮಸ್ತರ ಮಾತು.

ಇದಲ್ಲದೇ ಇನ್ನಷ್ಟು ಭೂ ಕುಸಿತವಾಗುವ ಸೂಚನೆಯಿದ್ದು ಭಾರೀ ಬಿರುಕು ಬಿಟ್ಟಿದೆ. ಅದರಿಂದ ಈ ಸಂತ್ರಸ್ತರಿಗೆ ಅಳಿದುಳಿದ ಕೃಷಿ ಭೂ ಭಾಗವೂ ಜರಿದು ಹೋಗಿ ಸಮೀಪವೇ ಇರುವ ಅವರ ಮನೆಗೂ ಧಕ್ಕೆಯುಂಟಾಗುವ ಸಾಧ್ಯತೆ ಇದೆ.
ಆದ್ದರಿಂದ ಈ ಕುಟುಂಬಗಳಿಗೆ ಬೇರೆಡೆ ಸರ್ಕಾರ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಬೇಕೆಂದು ಸ್ಥಳೀಯ ಜನರು ಸರ್ಕಾರವನ್ನು ವತ್ತಾಯಿಸಿದ್ದಾರೆ.