ರಸ್ತೆಯೇ ಕಾಣದ ಶಿರಸಿ-ಕುಮಟಾ ಹೆದ್ದಾರಿ!ಜನರ ಸಂಕಟಕ್ಕೆ ಪೂರ್ಣ ವಿರಾಮ ಎಂದು?

256

ಕಾರವಾರ :- ಎಲ್ಲಿ ನೋಡಿದರಲ್ಲಿ ಹಗಲು ರಾತ್ರಿ ಎನ್ನದೇ ರಸ್ತೆಯಲ್ಲ ಮುಸುಕು, ಎದುರಿಗಿರುವ ವಾಹನ ಸಹ ಕಾಣದಷ್ಟು ತೊಂದರೆ. ಅರೆ ಇದೆನು ಘಟ್ಟದಲ್ಲಿ ಇಷ್ಟೊಂದು ಮಂಜೇ ಎಂದುಕೊಂಡರೇ ನಿಮ್ಮ ಊಹೆ ತಪ್ಪಾಗಲಿದೆ. ಇದು ರಸ್ತೆಯ ಧೂಳು…! ಹೌದು ಭಾರತ್ ಮಾಲಾ ಯೋಜನೆ ಕಾಮಗಾರಿಯಿಂದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಹಿಡಿಶಾಪ ಹಾಕಿಕೊಂಡು ಸಂಚರಿಸುವ ಸ್ಥಿತಿ ಇದೀಗ ನಿರ್ಮಾಣವಾಗಿದೆ .

ಈ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಧೂಳಿನ ಗಾಳಿ ಸೇವಿಸಿ ರೋಗರುಜಿನೆಗಳ ಭಯದಿಂದ ತತ್ತರಿಸುವಂತೆ ಮಾಡಿದರೇ ರಸ್ತೆಯಲ್ಲಿ ಸಂಚರಿಸುವ ಜನ ಜೀವ ಕೈಯಲ್ಲೇ ಹಿಡಿದು ಸಾಗಬೇಕಿದೆ.( National Highway)

ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿದ್ದು, (SIRSI)ಶಿರಸಿಯಿಂದ ಅಗಲೀಕರಣ ಕಾರ್ಯ ಆರಂಭವೇನೋ ಆಗಿದೆ. ಕೆಲವು ಕಿಲೊ ಮೀಟರ್ ದೂರದವರೆಗೆ ಕಾಂಕ್ರೀಟಿಕರಣ ಮಾಡಿ ಮುಗಿಸಲಾಗಿದೆ. ಆದ್ರೆ ಅಮ್ಮಿನಳ್ಳಿ, ಸಂಪಖಂಡ, ಖೂರ್ಸೆ, ಬಂಡಲ, ರಾಗಿಹೊಸಳ್ಳಿ, ಕತಗಾಲವರೆಗೆ ಕಾಮಗಾರಿ ನಡೆಯಬೇಕಿದ್ದು, ಕಳೆದ ಮಳೆಗಾಲದಲ್ಲಿ ರಸ್ತೆಗಳು ಹೊಂಡಗಳು ಬಿದ್ದು ಹೋಗಿವೆ.

ಮಳೆ ಮುಗಿದ ಬಳಿಕ ಹೊಂಡವನ್ನು ಮುಚ್ಚಲು ಜೆಲ್ಲಿಯ ಪೌಡರ್, ಮಣ್ಣನ್ನು ಹಾಕಲಾಗಿದ್ದು, ಭಾರಿ ಗಾತ್ರದ ವಾಹನ ಸಾಗಿದರೆ ಧೂಳು ಹಾರುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಬಸ್ ಅಥವಾ ಲಾರಿಯಂತಹ ಭಾರಿ ಗಾತ್ರದ ವಾಹನ ಸಾಗಿದರೆ ಕೆಲವು ನಿಮಿಷ ಮಂಜು ಮುಸುಕಿದಂತೆ ಧೂಳು ರಸ್ತೆಯನ್ನೆಲ್ಲಾ ಆವರಿಸುತ್ತದೆ.( highway road construction)

ಹಲವು ಕಡೆ ಡಾಂಬರೀಕರಣ ಮಾಡಿದ್ದು ಮಳೆಯಿಂದಾಗಿ ಹಾಳಾಗಿ ಜೆಲ್ಲಿಕಲ್ಲು ಉಳಿದುಕೊಂಡಿದೆ. ಜತೆಗೆ ಅಲ್ಲಿಲ್ಲಿ ಮಳೆ ನೀರು ಸಾರಾಗವಾಗಿ ಹೋಗಲು ರಸ್ತೆಗೆ ಅಡ್ಡಲಾಗಿ ಸ್ಲಾಬ್ ನಿರ್ಮಾಣ ಮಾಡಲಾಗಿದ್ದು, ಮಣ್ಣು, ಜೆಲ್ಲಿಗಳನ್ನು ಹಾಕಲಾಗಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ.

ತಾತ್ಕಾಲಿಕವಾಗಿಯಾದರೂ ಇದನ್ನು ದುರಸ್ತಿ ಮಾಡಲು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಕಂಪೆನಿ ಕ್ರಮ ಕೈಗೊಳ್ಳಬೇಕಿದೆ.

ಪ್ರತಿನಿತ್ಯ ಸಾವಿರಾರು ವಾಹನಗಳು ಕುಮಟಾ-ಶಿರಸಿ ಮಾರ್ಗದಲ್ಲಿ ಸಂಚಾರ ಮಾಡುತ್ತವೆ. ಅಮ್ಮಿನಳ್ಳಿಯಿಂದ ಕತಗಾಲವರೆಗೆ ಈ ರಸ್ತೆಯ ಅಕ್ಕಪಕ್ಕದ ನಿವಾಸಿಗಳು, ಅಂಗಡಿಕಾರರು ದಿನನಿತ್ಯ ಧೂಳು ತಿಂದು ರೋಗರುಜಿನೆಗಳ ಭಯದಿಂದ ತತ್ತರಿಸಿದ್ದಾರೆ. ಒಂದು ಭಾರಿ ವಾಹನ ಸಾಗಿದರೆ ಮನೆ, ಅಂಗಡಿಯನ್ನು ಧೂಳು ಮೆತ್ತಿಕೊಳ್ಳುತ್ತಿದೆ. ಹಗಲು ಇರುಳೆನ್ನದೇ ವಾಹನ ಸಂಚಾರ ಮಾಡುವುದರಿಂದ ಜೆಲ್ಲಿಯ ಹಾಗೂ ಮಣ್ಣಿನ ಧೂಳು ಸ್ಥಳೀಯರ ನಿದ್ದೆಗೆಡಿಸಿದೆ. ಈ ಧೂಳಿನಿಂದ ಅಲರ್ಜಿ, ನೆಗಡಿ, ಕೆಮ್ಮು, ಶ್ವಾಸಕೋಶದ ಸಮಸ್ಯೆ ಕಾಡುವ ಭಯ ಪ್ರಾರಂಭವಾಗಿದೆ.

ಅಮ್ಮಿನಳ್ಳಿಯಿಂದ ಕತಗಾಲವರೆಗೂ ಹೆದ್ದಾರಿ ಅಕ್ಕಪಕ್ಕವೇ ಸಾಕಷ್ಟು ಮನೆಗಳು, ಅಂಗಡಿಗಳಿದ್ದು, ಪ್ರಾಥಮಿಕ, ಪ್ರೌಢಶಾಲೆಗಳು ಇವೆ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!