BREAKING NEWS
Search

ಮೀನುಗಾರನ ತಲೆ‌ ಕೆಳಗಾಗಿಸಿ ನೇತು ಹಾಕಿ ಹಲ್ಲೆ:ಆರು ಆರೋಪಿಗಳ ಬಂಧನ

1962

ಮಂಗಳೂರು:ಕಡಲನಗರಿ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ.ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಮೊಬೈಲ್ ಕದ್ದ ಆರೋಪದಲ್ಲಿ ಅಮಾನುಷವಾಗಿ ವರ್ತಿಸಿದ ಆರು ಜನರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ನಮ್ಮ ರಾಜ್ಯದ ಮೀನುಗಾರಿಕೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮೂಲದ ಕಾರ್ಮಿಕರು ಕೆಲಸ ಮಾಡುತ್ತಾರೆ. ಇದೇ ರೀತಿ ಮಂಗಳೂರಿನಲ್ಲಿ ಮೀನುಗಾರಿಕ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ ವೈಲ ಶೀನು ಎಂಬ ಆಂಧ್ರಪ್ರದೇಶ ಮೂಲದ ಕಾರ್ಮಿಕನಿಗೆ ಸಹೋದ್ಯೋಗಿಗಳೆ ಸೇರಿಕೊಂಡು ಅಮಾನುಷ ಹಲ್ಲೆ ಮಾಡಿದ್ದಾರೆ. ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‌ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರು ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಬಂಧಿತರನ್ನು ಕೊಂಡೂರು ಪೋಲಯ್ಯ,ಅವುಲ ರಾಜ್ ಕುಮಾರ್,ಕಾಟಂಗರಿ ಮನೋಹರ್,ವೂಟುಕೋರಿ ಜಾಲಯ್ಯ, ಕರಪಿಂಗಾರ ರವಿ, ಪ್ರಲಯಕಾವೇರಿ ಗೋವಿಂದಯ್ಯ ಎಂದು ಗುರುತಿಸಲಾಗಿದೆ. ಡಿ.14ರಂದು ಆರೋಪಿಗಳು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಶೈಲೇಶ್ 2 ಎಂಬ ಬೋಟಿನಲ್ಲಿ ಪಾರ್ಟಿಯೊಂದನ್ನು ಮಾಡಿರುತ್ತಾರೆ ಆ ಪಾರ್ಟಿಗೆ ಪರಿಚಯದ ವೈಲ ಶೀನುನನ್ನು ಕರೆದಿರ್ತಾರೆ. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಪಾರ್ಟಿಯಲ್ಲಿದ್ದವರ ಎರಡು ಮೊಬೈಲ್ ಮಿಸ್ಸಿಂಗ್ ಆಗಿರುತ್ತೆ.

ಈ ಮೊಬೈಲ್‌ನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಉಲ್ಟಾ ನೇತು ಹಾಕಿ ಸರಪಳಿಯಿಂದ ಹಲ್ಲೆ ನಡೆಸುತ್ತಾರೆ. ಆ ಬಳಿಕ ಸಾರ್ವಜನಿಕರ ಸಹಾಯಯಿಂದ ವೈಲ ಶೀನು ಬಚವಾಗಿ ಕಾರವಾರಕ್ಕೆ ತೆರಳಿರುತ್ತಾನೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ ಆರೋಪಿಗಳು ಎಸ್ಕೇಪ್ ಆಗಿರುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.

ವೈಲ ಶೀನುವಿನ ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಆರೋಪಿಗಳು ಮಾತುಕತೆ ನಡೆಸಿದ್ದರು. ಹೀಗಾಗಿ ಸದ್ಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!