ಬೆಂಗಳೂರು: ರಾಜ್ಯದಲ್ಲಿ ರೂಪಾಂತರದ ಕೊರೊನಾ ಭೀತಿಯಿಂದಾಗಿ ಇಂದಿನಿಂದ 9 ದಿನಗಳವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ ಎಮದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಬೆಳಗ್ಗೆ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚೆ ನಡೆಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೂಪಾಂತರ ಕೊರೋನಾ ಹಿನ್ನೆಲೆಯಲ್ಲಿ ಇಂದಿನಿಂದ 9 ದಿನ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಇಂದಿನಿಂದ ಜನವರಿ 2 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ. ತುರ್ತು ಸೇವೆಗಳಿಗೆ ಮಾತ್ರ ನೈಟ್ ಕರ್ಫ್ಯೂ ವೇಳೆ ಅವಕಾಶ ನೀಡಲಾಗುತ್ತದೆ. ಉಳಿದ ಎಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಗದಿಯಂತೆ ಶಾಲೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಬೆಳವಣಿಗೆ ಕಂಡು ಬಂದ್ರೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ಸಚಿವ ಸುಧಾಕರ್ ಮಾತನಾಡಿ, ಇವತ್ತಿಂದ ಜನವರಿ 2ರವರೆಗೆ ನೈಟ್ ಕರ್ಫ್ಯೂ ಜಾರಿಯಾಗುತ್ತದೆ. ಹಬ್ಬ ಹೊಸ ವರ್ಷಾಚರಣೆ ಸಂಭ್ರಮ, ಪಾರ್ಟಿಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಹೊರದೇಶಗಳಿಂದ ಬಂದವರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಸಂಜೆ ವೇಳೆ ನೈಟ್ ಕರ್ಫ್ಯೂ ಜಾರಿ ಕುರಿತು ನಿಯಮಗಳು ಹೇಗಿರುತ್ತದೆ ಎಂಬುದು ಸರ್ಕಾರ ನಿಯಮಾವಳಿಗಳನ್ನು ಬಿಡುಗಡೆ ಮಾಡಲಿದೆ.