ಕಾರವಾರ:- ಅಡಿಕೆ ತೋಟದಲ್ಲಿ ಹಾವಳಿಯಿಟ್ಟಿದ್ದ ಮಂಗಗಳಿಗೆ ಗುಂಡು ಹಾರಿಸಲು ಹೋಗಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಮಾಲೀಕ ಗುಂಡುಹಾರಿಸಿದ ಘಟನೆ ಶಿರಸಿ ತಾಲ್ಲೂಕಿನ ಬಕ್ಕಳದಲ್ಲಿ ನಡೆದಿದೆ.
ಪರಮೇಶ್ವರ ಭಟ್ಟ (67) ಗುಂಡು ಹಾರಿಸಿದ ಆರೋಪಿಯಾಗಿದ್ದು ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಔಡಾಳದ ಕೇಶವ ರಾಮಾ ಮರಾಠಿ (27) ಗಾಯಗೊಂಡ ಕಾರ್ಮಿಕನಾಗಿದ್ದಾನೆ. ಗುಂಡು ಹಾರಿದ ಹೊಡೆತಕ್ಕೆ ಆತನ ಭುಜ,ಕೆನ್ನೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿದೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಪರಮೇಶ್ವರ ಭಟ್ ತಲೆಮರೆಸಿಕೊಂಡಿದ್ದು,ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.