ಶಿವಮೊಗ್ಗ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು.

437

ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತ ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ನಿಗಧಿ ಪಡಿಸುವ ಸಭೆ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 266 ಗ್ರಾಮಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ನಿಗಧಿಪಡಿಸಬೇಕಾಗಿದ್ದು, ಆಯಾ ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ.

ಜ.22 ರಂದು ಬೆಳಗ್ಗೆ 11.00ಕ್ಕೆ ಸೊರಬ ಪಿ.ಡಬ್ಲ್ಯೂಡಿ ರಂಗಮಂದಿರದಲ್ಲಿ, ಮ.03.00ಕ್ಕೆ ಸಾಗರ ಎಲ್.ಬಿ. ಕಾಲೇಜು ಸಭಾಂಗಣದಲ್ಲಿ. ಜ. 23 ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗ ಕುವೆಂಪು ರಂಗಮಂದಿರ, ಜ. 25 ರಂದು ಮ. 03.00ಕ್ಕೆ ಭದ್ರಾವತಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ. ಜ. 27 ರಂದು ಮ. 3.00ಕ್ಕೆ ಶಿಕಾರಿಪುರ ಸುವರ್ಣ ಸಾಂಸ್ಕøತಿಕ ಭವನದಲ್ಲಿ. ಜ. 28 ರಂದು ಬೆಳಗ್ಗೆ 11.00ಕ್ಕೆ ಹೊಸನಗರ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮತ್ತು ಮ. 3.00ಕ್ಕೆ ತೀರ್ಥಹಳ್ಳಿ ಗೋಪಾಲಗೌಡ ರಂಗಮಂದಿರ ಈ ಎಲ್ಲಾ ಸ್ಥಳಗಳಲ್ಲಿ ಸಭೆಗಳನ್ನು ಏರ್ಪಡಿಸಲಾಗಿದ್ದು, ಆಯಾ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಚುನಾಯಿತ ಸದಸ್ಯರುಗಳು ಹಾಗೂ ಅವಧಿ ಮುಕ್ತಾಯಗೊಳ್ಳದೇ ಇರುವ ಗ್ರಾ.ಪಂ. ಚುನಾಯಿತ ಸದಸ್ಯರುಗಳು ಹಾಜರಿರುವಂತೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

ಕರಾಮುವಿಯ ಮೂರು ದಿನದ ಆನ್‍ಲೈನ್ ಪರಿಚಯ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2020-21 ಸಾಲಿನ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗಾಗಿ ದಿನಾಂಕ 18-01-2021 ರಿಂದ 20-01-2021 ರವರೆಗೆ ಮೂರು ದಿನದ ಪರಿಚಯ ಕಾರ್ಯಕ್ರಮವನ್ನು ಆನ್‍ಲೈನ್ ಮುಖಾಂತರ ಏರ್ಪಡಿಸಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯ ಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆ, ಐಟಿ,ಬಿಟಿ ಹಾಗೂ ಕೌಶಲ್ಯ ಅಭಿವೃದ್ದಿ ಸಚಿವ ಡಾ|| ಸಿ.ಎನ್. ಆಶ್ವತ್ಥ ನಾರಾಯಣ ಅವರು ಕರಾಮುವಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೂರು ದಿನದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕರಾಮುವಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ತಾವು ಆಯ್ಕೆ ಮಾಡಿಕೊಂಡಿರುವ ಕಾರ್ಯಕ್ರಮದ ಪರೀಕ್ಷೆ, ಸಂಪರ್ಕ ಕಾರ್ಯಕ್ರಮಗಳ ಮಾಹಿತಿ ನೀಡಲಾಗುವುದು. ಅಲ್ಲದೇ ಕರಾಮುವಿಯ ಗ್ರಂಥಾಲಯ, ಸೌಲಭ್ಯಗಳು, ಔದ್ಯೋಗಿಕ ಮಾಹಿತಿ, ಉಚಿತವಾಗಿ ಸಿಗುವ ಸಂಪನ್ಮೂಲಗಳು, ಕೌಶಲ್ಯಾಭಿವೃದ್ದಿ ಕಾರ್ಯಕ್ರಮ, ಕೌಶಲ್ಯ ಕರ್ನಾಟಕ ಯೋಜನೆಗಳು ಮತ್ತು ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ, ಇದಲ್ಲದೆ ವಿವಿಧ ಕ್ಷೇತ್ರಗಳ ಪರಿಣಿತರನ್ನು ಅಹ್ವಾನಿಸಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಉಪನ್ಯಾಸ ನೀಡಿಸಲಾಗುವುದು.

ಈ ಎಲ್ಲಾ ದೂರ ಶಿಕ್ಚಣ ವಿದ್ಯಾರ್ಥಿಗಳಿಗೆ ಕ್ಷಣಮಾತ್ರದಲ್ಲಿ ಅಗತ್ಯ ಮಾಹಿತಿ ರವಾನಿಸಲು ಕರಾಮುವಿಯು ಟೆಲಿಗ್ರಾಂ ಆಪ್ ಉಪಯೋಗ ಪಡೆಯಲಾಗಿದೆ. ಟೆಲಿಗ್ರಾಂ ಆಪ್ ವಾಟ್ಸಾಪ್ ನಂತೆಯೇ ಕಾರ್ಯ ನಿರ್ವಹಿಸುತ್ತ್ತಿದ್ದು, ಇದರಲ್ಲಿ 2 ಲಕ್ಷದ ತನಕ ಸದಸ್ಯರನ್ನು ಹೊಂದಬಹುದಾಗಿದ್ದು, ಕೇವಲ ಅಡ್ಮಿನ್ ಮಾತ್ರ ಮೆಸೇಜ್ ಮಾಡುವಂತೆ ಸೆಟ್ ಮಾಡಬಹುದಾಗಿದೆ. ಸದಸ್ಯರು ಅಥವಾ ಅಡ್ಮಿನ್ ತಮ್ಮ ಪೋನ್ ನಂಬರ್ ಯಾರಿಗೂ ಸಿಗದಂತೆ ಸೆಟ್ ಮಾಡಬಹುದಾಗಿರುವುದು ಈ ಆಪ್ ವಿಶೇಷತೆಯಾಗಿದೆ, ಅಲ್ಲದೆ ತಡವಾಗಿ ಸೇರಿದ ಸದಸ್ಯರು ಸಹಾ ಈಗಾಗಲೇ ಕಳುಹಿಸಿರುವ ಮೆಸೇಜ್‍ಗಳನ್ನು ಓದಬಹುದಾಗಿದೆ ಈ ವಿಶೇಷತೆ ವಾಟ್ಸಾಪ್‍ನಲ್ಲಿ ಲಭ್ಯವಿರುವುದಿಲ್ಲ.
ಟೆಲಿಗ್ರಾಂನಲ್ಲಿ ಯೂಟ್ಯೂಬ್ ತರಹ ಚಾನೆಲ್ ಮಾಡಬಹುದಾಗಿದ್ದು, ಇದರ ಮೂಲಕ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಕರಾಮುವಿ ಹೊಂದಿದೆ.
ವಿದ್ಯಾರ್ಥಿಗಳು http://event.ksoumysuru.ac.in ಅಥವಾ https://www.youtube.com/channel/UCtQYO1J2UIJgscw1hqentDQ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಬ್ರೈಲ್ ಕಿಟ್ ಪಡೆಯಲು ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು 2020-21ನೇ ಸಾಲಿಗೆ ಅಂಧ ವಿಧ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರ ಸಾಧನಗಳನ್ನು ಒಳಗೊಂಡ ತಲಾ ರೂ. 25 ಸಾವಿರ ರೂ.ಗಳ ಬ್ರೈಲ್ ಕಿಟ್‍ಗಳನ್ನು ವಿತರಿಸುತ್ತಿದ್ದು, ಎಸ್.ಎಸ್.ಎಲ್.ಸಿ. ಹಾಗೂ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಂಧ ವಿದ್ಯಾರ್ಥಿಗಳು ನಿಗಧಿತ ನಮೂನೆ ಅರ್ಜಿಯನ್ನು ಜಿಲ್ಲೆಯ ಪ್ರತಿ ತಾಲೂಕು ಪಂಚಾಯತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ವಾಸಸ್ಥಳ ದೃಢೀಕರಣ ಪತ್ರ, ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ, ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ, ವಿಕಲತೆಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಗುರುತಿನ ಚೀಟಿ ಪ್ರತಿಗಳನ್ನು ಲಗತ್ತಿಸಿ ಜನವರಿ-27ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-250372/251676 ಗಳನ್ನು ಸಂಪರ್ಕಿಸುವುದು.

ಜ.19 ರಂದು ಗೃಹರಕ್ಷಕ ನೂತನ ಸದಸ್ಯರ ಆಯ್ಕೆ.

ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿಯಿರುವ ಸೇವೆಗಳ ಆಯ್ಕೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಜನವರಿ-19ರಂದು ನಗರದ ಡಿ.ಎ.ಆರ್. ಪೊಲೀಸ್ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಡಿ.ಡಿ.ಪಿ.ಐ ಮತ್ತು ಜಿಲಾ ಸಮಾದೇಷ್ಟರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಂದು ಬೆಳಗ್ಗೆ 9.30 ರಿಂದ ಸಂಜೆ 5.00ರವರೆಗೆ ಹಾಜರಾಗಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ದೂ.ಸಂ.: 08182-222630 ನ್ನು ಸಂಪರ್ಕಿಸುವುದು.

ಕೇಂದ್ರ ಗೃಹ ಸಚಿವರಿಂದ ಕ್ಷಿಪ್ರ ಕಾರ್ಯ ಪಡೆ ಘಟಕಕ್ಕೆ ಭದ್ರಾವತಿಯಲ್ಲಿ ಶಂಕುಸ್ಥಾಪನೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಭದ್ರಾವತಿ ಡಿಎಆರ್ ಮೈದಾನದಲ್ಲಿ ಕ್ಷಿಪ್ರ ಕಾರ್ಯ ಪಡೆ 97 ಬೆಟಾಲಿಯನ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಭದ್ರಾವತಿಯಲ್ಲಿ ಆರ್ ಎ ಎಫ್ ಬೆಟಾಲಿಯನ್ ಸ್ತಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ.

ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ರಾಜ್ಯ ಸರಕಾರ 50ಎಕ್ರೆ ಜಮೀನು ನೀಡಿದೆ. ಇಲ್ಲಿ ಸುಸಜ್ಜಿತವಾದ ವಸತಿಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದರ ಪ್ರಯೋಜನ ಸ್ಥಳೀಯರಿಗೂ ದೊರೆಯುವಂತೆ ಮಾಡಲಾಗುವುದು. ಸ್ಥಳೀಯರು ಇಲ್ಲಿನ ಎಲ್ಲಾ ಸೌಲಭ್ಯಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ದಿನ. ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ 97ಎಕ್ರೆ ಪ್ರದೇಶದಲ್ಲಿ ಆರ್.ಎ.ಎಫ್ ಘಟಕಕ್ಕೆ ರಾಜ್ಯ ಸರ್ಕಾರ 50ಎಕರೆ ಪ್ರದೇಶ ನೀಡಿದೆ.

ಸಾರಿಗೆ ಸಂಪರ್ಕ ಉತ್ತಮವಾಗಿರುವ ಭದ್ರಾವತಿಯಲ್ಲಿ ಆರ್ ಎ ಎಫ್ ಘಟಕ ಸ್ಥಾಪನೆಯಿಂದ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪಡೆಗಳನ್ನು ತರಿಸುವುದು ತಪ್ಪಲಿದೆ. ಇಲ್ಲಿ ಆರಂಬವಾಗಲಿರುವ ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ಕೇರಳದ ನಾಲ್ಕು, ಗೋವಾದ 2, ಪುದುಚೇರಿ ಮತ್ತು ಲಕ್ಷದ್ವೀಪದ ತಲಾ ಒಂದು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ.

ತುರ್ತು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಆರ್‍ಎಎಫ್ ಕೈಜೋಡಿಸಲಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ,
ಶಾಸಕರಾದ ಸಂಗಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು 9741058799 ಗೆ ವಾಟ್ಸ್ ಅಪ್ ಮಾಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!