ತುಮಕೂರು- ನಾಳೆಯಿಂದ 9ರಿಂದ 12ನೇ ತರಗತಿವರೆಗೆ ತರಗತಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಒತ್ತಾಯ ಪೂರ್ವಕವಾಗಿ ಶಾಲೆಗೆ ಬರಬೇಕೆಂದು ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಇಂದು ತುಮಕೂರಿನಿನಲ್ಲಿ ಶಾಲೆಗಳ ಸಿದ್ದತೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದರೂ ಆನ್ ಲೈನ್ ನಲ್ಲಿ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ.
ಬೇರೆ ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ.
ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಿರುವುದರಿಂದ ತರಗತಿ ಆರಂಭ ಮಾಡುವಂತೆ ಸಿಎಂ ಘೋಷಣೆ ಮಾಡಿದ್ದಾರೆ.
ಹಾಗಾಗಿ ಶಾಲೆ ಆರಂಭಿಸಲಾಗುತ್ತಿದೆ ಎಂದರು.
ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಇದಲ್ಲದೇ
ಆನ್ಲೈನ್ ಮತ್ತು ಆಫ್ಲೈನ್ ನಲ್ಲಿಯೂ ತರಗತಿಗಳು ನಡೆಯಲಿವೆ ಎಂದರು.
ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗಲಿದೆ ಅನ್ನುವುದು ಇತ್ತು. ಈಗ ಒಂದು ತಿಂಗಳಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಜೊತೆಗೆ ಸೋಂಕು ತಗುಲಿದರು ಪ್ರಾಣ ಹಾನಿಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಹಂತದಲ್ಲಿ 1 ರಿಂದ 8ನೇ ತರಗತಿವರೆಗೂ ಶಾಲೆ ತೆರೆಯುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಪಾಸಿಟಿವಿಟಿ ರೇಟ್ ಶೇ. 2ಕ್ಕಿಂತ ಹೆಚ್ಚಿದ್ದರೆ ಆ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸುವುದಿಲ್ಲ.
ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ 2% ಕ್ಕಿಂತ ಹೆಚ್ಚಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ಸಂದರ್ಭದಲ್ಲಿ ಹೇಳಿದರು.