BREAKING NEWS
Search

ಚೈತ್ರ ಕುಂದಾಪುರ್ ಬಿಜೆಪಿ ನಾಯಕನನ್ನು ವಂಚಿಸಿದ್ದು ಹೇಗೆ ಗೊತ್ತಾ? FIR ಪ್ರತಿಯ ವಿವರ ಇಲ್ಲಿದೆ.

219

ಬೆಂಗಳೂರು:-2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ RSS ಮತ್ತು BJP ಹೆಸರಿನಲ್ಲಿ ನಂಬಿಸಿ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡ ಕೋಟಿ ಕೋಟಿ ವಂಚಿಸಿರೋ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಹಾಗಾದ್ರೇ ಚೈತ್ರಾ ಕುಂದಾಪುರ ( Chaithra kundapura ) ಅಂಡ್ ಟೀಂ ಬಿಜೆಪಿ ನಾಯಕರಾದ ಗೋವಿಂದ ಬಿ.ಪೂಜಾರಿಗೆ ಹೇಗೆ ವಂಚಿಸಿತ್ತು ಗೊತ್ತಾ? ಇಲ್ಲಿದೆ ವಿವರ.

FIR ಪ್ರತಿಯಲ್ಲಿ ದಾಖಲಾದ ದೂರು ಹೀಗಿದೆ:-

ನಾನು ಗೋವಿಂದ ಬಾಬು ಪೂಜಾರಿ, #76, ರಿಲಯಬಲ್ ರೆಸಿಡೆನ್ಸಿ, 1ನೇ ಅಡ್ಡರಸ್ತೆ, ಡೊಮಿನೋಸ್ ಪಿಜ್ಜಾ ಸಮೀಪ, ಹರಳೂರು ರಸ್ತೆ, ಬೆಂಗಳೂರು-560035 ಈ ವಿಳಾಸದಲ್ಲಿ ವಾಸವಾಗಿದ್ದು, ಕಳೆದ 7 ವರ್ಷಗಳಿಂದ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದೇನೆ.

ಶೈಕ್ಷಣಿಕ, ಆರೋಗ್ಯ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೈಂದೂರು ಕ್ಷೇತ್ರ ಸಹಿತ ಕರಾವಳಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ಬಡ ಜನರಿಗೆ ಆರೋಗ್ಯ ಸೇವೆಯನ್ನು ಮಾನವೀಯ ನೆಲೆಯಲ್ಲಿ ಉಚಿತವಾಗಿ ನೀಡುತ್ತಾ ಬಂದಿದ್ದೇನೆ. ಹಲವಾರು ಸಂಸ್ಥೆಗಳನ್ನು ಕಟ್ಟಿ 5,000ರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುತ್ತೇನೆ. ಆರೆಸ್ಸೆಸ್ ಹಾಗೂ ಸಮಾಜಮುಖಿ ಸಂಘ-ಸಂಸ್ಥೆಗಳ ಜೊತೆಗೂ ಸಕ್ರೀಯನಾಗಿದ್ದು, ನನ್ನ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಹಿತೈಷಿಗಳು ಮತ್ತು ಸ್ನೇಹಿತರು ನಾನು ರಾಜಕೀಯವಾಗಿ ಬೆಳೆಯಬೇಕೆಂದು ಸಲಹೆ ನೀಡಿರುತ್ತಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಅವರು ಹಿಂದೂ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ರವರನ್ನು ಪರಿಚಯಿಸಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕು, ಸ್ಪರ್ಧಿಸಿದರೆ ಗೆಲ್ಲಿಸಿಕೊಡುವುದಾಗಿ ನನ್ನ ಮನವೊಲಿಸಿದ್ದಾರೆ. “ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ BJP_RSS ವರಿಷ್ಠರಿಗೂ ಹತ್ತಿರವಿದ್ದೇನೆ. ಪ್ರಧಾನಿ ಕಚೇರಿಯಲ್ಲೂ ಪ್ರಭಾವಿಯಾಗಿದ್ದು, ಸುಪ್ರೀಂ ಕೋರ್ಟ್ ಜಡ್ಜುಗಳಿಗೂ ಆಪ್ತಳಾಗಿದ್ದು ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ” ಎಂದು ಚೈತ್ರಾ ಕುಂದಾಪುರ ರವರು ಭರವಸೆ ನೀಡಿರುತ್ತಾರೆ. ಅವರ ಭರವಸೆಯ ಮಾತುಗಳು ನನ್ನಲ್ಲಿ ನಂಬಿಕೆ ಹುಟ್ಟಿಸಿತು.

ಬಳಿಕ ಚೈತ್ರಾ ಕುಂದಾಪುರ ರವರು, ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಇರುವ ಚಿಕ್ಕಮಗಳೂರಿನ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ರವರ ಮೂಲಕ ಟಿಕೆಟ್ ಕೊಡಿಸುವುದಾಗಿ ಹೇಳಿ, 04.07.2022ರಂದು ಚಿಕ್ಕಮಗಳೂರಿಗೆ ನನ್ನನ್ನು ಕರೆಸಿಕೊಂಡು, ಸರ್ಕಾರಿ ಅತಿಥಿ ಗೃಹದಲ್ಲಿ ಗಗನ್ ಕಡೂರು ರವರನ್ನು ಭೇಟಿ ಮಾಡಿಸಿದರು. ತಾವು ಪ್ರಧಾನಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿಯಾಗಿದ್ದು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗಗನ್ ಕಡೂರು ಹೇಳಿದರಲ್ಲದೆ, ಟಿಕೆಟ್ ಗಿಟ್ಟಿಸಿಕೊಳ್ಳಲು RSS ರಾಷ್ಟ್ರೀಯ ಪ್ರಮುಖರ ಶಿಫಾರಸು ಇರಬೇಕು.

ಅದಕ್ಕೆ ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿ RSS ಹಿರಿಯ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್ ಜೀ ಮೂಲಕ ಶಿಫಾರಸು ಮಾಡಿಸುವುದಾಗಿ ಭರವಸೆ ನೀಡಿದರು. ವಿಶ್ವನಾಥ್ ಜೀ ರವರು ಪ್ರಸಕ್ತ ಚಿಕ್ಕಮಗಳೂರಿ ನಲ್ಲೇ ಇದ್ದಾರೆ ಎಂದು ಹೇಳಿದ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ರವರು 04.07.2022 ರಂದು ವಿಶ್ವನಾಥ್ ಜೀ ರವರನ್ನು ಭೇಟಿ ಮಾಡಿಸಿ ಪರಿಚಯಿಸಿದರು.

ಆ ವೇಳೆ, ನನ್ನ ಬಗ್ಗೆ ಮಾಹಿತಿ ಪಡೆದ ವಿಶ್ವನಾಥ್ ಜೀ ರವರು, “ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯನಾಗಿದ್ದು, RSS ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು” ಎಂದು ಹೇಳಿರುವರು. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ ರೂ.50,00,000 (ಐವತ್ತು ಲಕ್ಷ) ಗಗನ್ ಕಡೂರ್ ರವರಲ್ಲಿ ನೀಡಬೇಕು, ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ ರೂ.3,00,00,000 (ಮೂರು ಕೋಟಿ ರೂಪಾಯಿ) ನೀಡಬೇಕೆಂದು ಸೂಚಿರುತ್ತಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಸಂಬಂಧ ಈ ಹಣವನ್ನು ಪಡೆಯಲಾಗುತ್ತಿದ್ದು, ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿರುತ್ತಾರೆ.

ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ, ಹಣದ ವಿಷಯದಲ್ಲಿ ತಾವೂ ಜವಾಬ್ಧಾರರಾಗಿರುತ್ತೇವೆ ಎಂದು ಹೇಳಿರುತ್ತಾರೆ.

ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ ನಂಬಿಕೆ ಮೇಲೆ ಹಾಗೂ ವಿಶ್ವನಾಥ್ ಜೀ ಯವರ ನಿರ್ದೇಶನದ ಮೇರೆಗೆ ನಾನು ರೂ.50,00,000/- (ಐವತ್ತು ಲಕ್ಷ ರೂಪಾಯಿ) ಹಣವನ್ನು 07.07.2022ರಂದು ಪ್ರಸಾದ್ ಬೈಂದೂರ್ ಮುಖಾಂತರ ಗಗನ್ ಕಡೂರ್ ರವರಿಗೆ ತಲುಪಿಸಿದ್ದೇನೆ.

ಶಿವಮೊಗ್ಗದ RSS ಕಚೇರಿ ಎದುರು ಗಗನ್ ಕಡೂರು ಅವರಿಗೆ ಈ ಮೊತ್ತ ಹಸ್ತಾಂತರವಾಗಿದ್ದು, ಹಣ ಕೈ ಸೇರಿದ ತಕ್ಷಣವೇ ಗಗನ್ ಕಡೂರ್ ರವರು ನನಗೆ ಕರೆ ಮಾಡಿ ರೂ.50,00,000/- (ಐವತ್ತು ಲಕ್ಷ ರೂಪಾಯಿ) ಸ್ವೀಕರಿಸಿರುವುದಾಗಿ ದೃಢಪಡಿಸಿರುತ್ತಾರೆ. ತರುವಾಯ ವಿಶ್ವನಾಥ್ ಜೀ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ನನಗೆ ಕಾನ್ಫರೆನ್ಸ್ ಕರೆ ಮಾಡಿ, ನನ್ನ ಹೆಸರು ಆಯ್ಕೆ ಪಟ್ಟಿಯಲ್ಲಿದೆ. 2023ರ ಚುನಾವಣೆಯಲ್ಲಿ ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆ ಎಂದು ಮಾಹಿತಿ ನೀಡಿರುತ್ತಾರೆ.

ಇದಾದ ಸ್ವಲ್ಪ ದಿನಗಳಲ್ಲಿ, 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ನನ್ನ ಮೊಬೈಲ್‌ಗೆ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ, ಕರ್ನಾಟಕದ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿರುತ್ತಾರೆ.

ಅದರಂತೆ ನಾನು ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾದೆ. ನನ್ನ ಬಗ್ಗೆ ಮಾಹಿತಿ ಪಡೆದ ಸ್ವಾಮೀಜಿ, ವಿಶ್ವನಾಥ್ ಜೀ ರವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿರುವುದು. ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದ್ದು ಟಿಕೆಟ್ ಕೊಡಿಸುತ್ತೇನೆ’ ಎಂದು ಹೇಳಿ, ಮುಂದಿನ ಪ್ರಕ್ರಿಯೆಗೆ ರೂ.1,50,00,000/- ನೀಡುವಂತೆ ಸೂಚಿಸಿದರು.

ಸಮಯಾವಕಾಶ ಕೇಳಿ ದಿನಾಂಕ 16.01.2023ರಂದು ನಾನು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಟಿಕೆಟ್ ಪಡೆಯುವ ಭರವಸೆಯೊಂದಿಗೆ ನಾನು ರೂ.1,50,00,000/- ಮೊತ್ತವನ್ನು ನೀಡಿರುತ್ತೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ ರೂ.1,50,00,000/- ಮೊತ್ತವನ್ನು ವಾಪಸ್ ಕೊಡುವುದಾಗಿ ಸ್ವಾಮೀಜಿ ಭರವಸೆ ನೀಡಿ, ಈ ಹಣವನ್ನು ಅವರೇ ಖುದ್ದಾಗಿ ಸ್ವೀಕರಿಸಿರುತ್ತಾರೆ.

ನಂತರ ವಿಶ್ವನಾಥ್ ಜೀ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ರವರು ನನ್ನೊಂದಿಗೆ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿ, 23.10.2022ರಂದು ಬಿಜೆಪಿಯ ಕೇಂದೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದು ಅಂದು ಅವರನ್ನು ಭೇಟಿ ಮಾಡಬೇಕೆಂದು ಮಾಹಿತಿ ನೀಡಿರುತ್ತಾರೆ.

23.10.2022ರಂದು ಗಗನ್ ಕಡೂರು ರವರೇ ನನ್ನನ್ನು ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದ ‘ನಾಯ್ಕ್’ ಎಂಬವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದರು. ಆ ವೇಳೆ ನಾಯ್ಕ್ ರವರು, ಬೈಂದೂರು ಕ್ಷೇತ್ರಕ್ಕೆ ನನ್ನ ಹೆಸರನ್ನು ಕೇಂದೀಯ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ಖಾತ್ರಿಪಡಿಸಿದರು. ಅಲ್ಲದೆ, ಬಾಕಿ ಮೊತ್ತ 3,00,00,000 (ಮೂರು ಕೋಟಿ) ರೂಪಾಯಿಗಳನ್ನು ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.

ಇವರ ಮಾತನ್ನು ನಂಬಿದ ನಾನು 2023ರ ವಿಧಾನಸಭಾ ಚುನಾವಣೆಗೆ ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆಯೊಂದಿಗೆ, ಬೆಂಗಳೂರಿನ ಮಗಮ್ಮನ ಪಾಳ್ಯದಲ್ಲಿ ನನ್ನ ಒಡೆತನದಲ್ಲಿರುವ ವಾಣಿಜ್ಯ ಆಸ್ತಿಯನ್ನು ICICI ಬ್ಯಾಂಕ್, ಜಯನಗರ ಶಾಖೆ ಇಲ್ಲಿ ಅಡಮಾನವಿಟ್ಟು 25.10,2022ರಂದು 10,00,00,000/- ರೂ. ಸಾಲ ಪಡೆದುಕೊಂಡಿರುತ್ತೇನೆ. ಬಳಿಕ, ನಾಯ್ಕ್ ಮತ್ತು ವಿಶ್ವನಾಥ್ ಜೀ ಅವರ ಸೂಚನೆಯಂತೆ ನಾನು ರೂ.3,00,00,000/- (ಮೂರು ಕೋಟಿ ರೂಪಾಯಿ) ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 29.10.2022ರಂದು ಮಂಗಳೂರಿಗೆ ತಲುಪಿಸಿರುತ್ತೇನೆ.

ಹಣ ಕೈಸೇರುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರು ನನಗೆ ಕರೆ ಮಾಡಿ ಹಣ ಸ್ವೀಕರಿಸಿರುವುದನ್ನು ದೃಢಪಡಿಸಿರುತ್ತಾರೆ.

ಇದಾದ ನಂತರ, 27.02.2023ರಂದು ವಿಶ್ವನಾಥ್ ಜೀ ಹಾಗೂ ಗಗನ್ ಕಡೂರ್ ಅವರು ನನಗೆ ಕಾನ್ಫರೆನ್ಸ್ ಕರೆ ಮಾಡಿ ಟಿಕೆಟ್ ಅಂತಿಮಗೊಂಡಿದೆ ಎಂದು ಖಚಿತಪಡಿಸಿದರು. ಆದಾಗಿಯೂ ತಾವು 10 ದಿನಗಳ ಕಾಲ RSS ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಶ್ಮೀರಕ್ಕೆ ಹೋಗುವುದಾಗಿ ವಿಶ್ವನಾಥ್ ಜೀ ಹೇಳಿದರು. ಸುಮಾರು 5 ದಿನಗಳ ನಂತರ ಗಗನ್ ಕಡೂರ್ ರವರು ನನಗೆ ಕರೆ ಮಾಡಿ ವಿಶ್ವನಾಥ್ ಜೀ ರವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಗನ್ ಅವರು ಮರುದಿನ, 08.03.2023ರಂದು 11.30ರ ಸುಮಾರಿಗೆ ಕರೆ ಮಾಡಿ ವಿಶ್ವನಾಥ್ ಜೀ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಈ ಸುದ್ದಿಯಿಂದ ಆಘಾತಕ್ಕೊಳಗಾದ ನಾನು, ವಿಶ್ವನಾಥ ಜೀ ಯವರಿಗೆ ಅಂತಿಮ ನಮನ ಸಲ್ಲಿಸಲು ಕಾಶ್ಮೀರಕ್ಕೆ ಬರುತ್ತೇನೆ ಎಂದು ಹೇಳಿದೆ. ಆದರೆ ಆ ದಿನ ಸೂರ್ಯಾಸ್ತದ ಮೊದಲು ಶ್ರೀನಗರದ RSS ಕಚೇರಿ ಬಳಿ ಅವರ ಅಂತ್ಯಸಂಸ್ಕಾರ ಮಾಡಲಾಗುವುದು, ಅಷ್ಟರೊಳಗೆ ತಲುಪಲು ಸಾಧ್ಯವಿಲ್ಲ ಎಂದು ಗಗನ್ ಕಡೂರು ರವರು ನನಗೆ ಸಮಾಧಾನ ಹೇಳಿರುತ್ತಾರೆ.

ಗಗನ್ ಕಡೂರ್‌ ಮಾತಿನಿಂದ ಅನುಮಾನಗೊಂಡು, ವಿಶ್ವನಾಥ್‌ ಜೀ ರವರ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ನನ್ನ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬವರ ಸಹಕಾರ ಕೋರಿದೆ. ಅವರು ಶ್ರೀನಗರ RSS ಕಾರ್ಯಾಲಯಕ್ಕೆ ತೆರಳಿ ವಿಚಾರಿಸಿದಾಗ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಮತ್ತು ಯಾವುದೇ ಶವಸಂಸ್ಕಾರ ನಡೆದಿಲ್ಲ ಎಂದು ಮಾಹಿತಿ ಸಿಕ್ಕಿರುತ್ತದೆ. ಇದರಿಂದ ನನ್ನ ಅನುಮಾನ ಬಲಗೊಂಡಿತಲ್ಲದೆ, ಕೂಡಲೇ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ನಿಜ ಏನೆಂದು ಹೇಳಬೇಕೆಂದು ಕೋರಿಕೊಂಡೆ. ನನ್ನ ಮಾತಿನಿಂದ ಗಲಿಬಿಲಿಗೊಂಡ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಸದ್ಯವೇ ಭೇಟಿಯಾಗಿ ಎಲ್ಲಾ ವಿಚಾರಗಳನ್ನು ಹೇಳುವುದಾಗಿ ತಿಳಿಸಿದರು.

ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ರವರನ್ನು 24.04.2023ರಂದು ಬೊಮ್ಮನಹಳ್ಳಿಯಲ್ಲಿರುವ ನನ್ನ ಕಚೇರಿಗೆ ಕರೆಸಿಕೊಂಡು ಚರ್ಚಿಸಿದಾಗ ಈ ಇಬ್ಬರೂ, ತಾವು ಪಡೆದ ಸಂಪೂರ್ಣ ಮೊತ್ತ ರೂ.3,50,00,000 ವಿಶ್ವನಾಥ ಜೀ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿಕೊಂಡರು. ಆ ವೇಳೆ, ‘ಎಲ್ಲಾ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್ ಪಡೆಯಲು ಪೊಲೀಸರ ಮೊರೆಹೋಗಬೇಕೇ’ ಎಂದು ನಾನು ಕೇಳಿದೆ. ಆಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಿದರು. ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ಮರಳಿದ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ರವರು ಅನಂತರ ನನ್ನ ಫೋನ್ ಕರೆ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ.

ದಿನಾಂಕ 25.04.2023 ರಂದು ನಾನು ಅಭಿನವ ಹಾಲಶ್ರೀ ಸ್ವಾಮೀಜಿ ರವರ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ತೆರಳಿ ತನಗಾಗಿರುವ ಮೋಸದ ಬಗ್ಗೆ ಹೇಳಿಕೊಂಡೆ. ಆ ವೇಳೆ ಸ್ವಾಮೀಜಿಯವರು, ತಮಗೆ ವಿಶ್ವನಾಥ್ ಜೀ ಯಾರೆಂದು ಸರಿಯಾಗಿ ಗೊತ್ತಿಲ್ಲ, ಅವರ ಜೊತೆ ಹೆಚ್ಚು ಸಂಪರ್ಕ ಹೊಂದಿಲ್ಲ ಎಂದು ಹೇಳಿಕೊಂಡರು. ಈ ಹಿಂದೆ ತಾವೇ ವಿಶ್ವನಾಥ್ ಜೀ ರವರು ಬಿಜೆಪಿಯ ಆಯ್ಕೆ ಸಮಿತಿಯಲ್ಲಿ ಪ್ರಮುಖರೆಂದೂ, ಅವರೇ ತಮಗೆ ರಾಜ್ಯದ ಜವಾಬ್ದಾರಿ ಕೊಡಿಸಿದ್ದಾರೆಂದೂ ಹೇಳಿದ್ದೀರಲ್ವಾ?’ ಎಂದು ನಾನು ಪ್ರಶ್ನಿಸಿದಾಗ, ಸಮರ್ಪಕ ಉತ್ತರ ನೀಡದ ಸ್ವಾಮೀಜಿ, ‘ನಾನು ಪಡೆದಿರುವ 1.5 ಕೋಟಿ ರೂಪಾಯಿ ಹಣವನ್ನು ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ, ಈ ವಿಚಾರದಲ್ಲಿ ತಮ್ಮನ್ನು ಬಿಟ್ಟು ಬಿಡಿ’ ಎಂದು ಹೇಳಿರುತ್ತಾರೆ.

ಇದೇ ವೇಳೆ, 3.5 ಕೋಟಿ ರೂ ವಿಶ್ವನಾಥ್ ಜೀ ಬಳಿ ಇದೆ ಎಂದು ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಹೇಳಿದ್ದರಿಂದ ನಾನು ವಿಶ್ವನಾಥ್ ಜೀ ಬಗ್ಗೆ ಹುಡುಕಾಡಲು ಪ್ರಾರಂಭಿಸಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರಾಗಿರುವ ಚಿಕ್ಕಮಂಗಳೂರಿನ ಮಂಜು ಎಂಬವರ ಬಳಿ ಈ ವಿಷಯವನ್ನು ಹೇಳಿಕೊಂಡಾಗ, ಮಂಜು ರವರು ತಾವು ಕೆಲ ದಿನಗಳ ಹಿಂದೆ ಸಲೂನ್’ಗೆ ಭೇಟಿ ನೀಡಿದಾಗ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡು ಆ ಸನ್ನಿವೇಶಕ್ಕೂ, ಈ ವಿಚಾರಕ್ಕೂ ಸಾಮ್ಯತೆ ಇರುವುದಾಗಿ ಹೇಳಿದರು.

ಕಡೂರಿನ ಸಲೂನ್’ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು RSS ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು. ಸದರಿ ಸಲೂನ್’ಗೆ ತೆರಳಿ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ RSS ಪ್ರಚಾರಕ ವಿಶ್ವನಾಥ್ ಜೀ ಹೆಸರಲ್ಲಿ
ನಟಿಸಿರುವ ಸಂಗತಿ ಗೊತ್ತಾಯಿತು.

RSS ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ತಮಗೆ ಗಗನ್ ಕಡೂರ್ ಮನೆಯಲ್ಲಿ ಸುಮಾರು 4 ತಾಸು ಕಾಲ ತರಬೇತಿ ನೀಡಿ, ನಟನೆಗೆ ರೂ.1,20,000/- ಪಾವತಿಸಿರುತ್ತಾರೆ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ಪ್ರಧಾನಿ ಕಚೇರಿಯ ಅಧಿಕಾರಿ, ಬಿಜೆಪಿ-ಆರೆಸ್ಸೆಸ್ ನಾಯಕರ ಪ್ರತಿನಿಧಿಯಾಗಿ ಮಾತನಾಡಲು ಹಾಗೂ ಈ ನಾಟಕವಾಡುವಾಗ ಆರೆಸ್ಸೆಸ್ ವಾಹನವಾಗಿ ಬಳಸಲು ತನಗೂ ರೂ. 2,50,000/- ನೀಡಿದ್ದಾರೆ ಎಂದು ಧನರಾಜ್ ಹೇಳಿಕೊಂಡಿರುತ್ತಾರೆ.

ಇದೇ ವೇಳೆ, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ‘ನಾಯ್ಕ್’ ಎಂಬ ವ್ಯಕ್ತಿಯ ಬಗ್ಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಯಿತು. ನಾಯ್ಕ್ ರನ್ನು ಭೇಟಿಯಾಗಿ ಕೇಳಿದಾಗ, ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93,000/-ರೂಪಾಯಿ ಪಾವತಿಸಿದ್ದು, ಈ ಹಿನ್ನೆಲೆಯಲ್ಲಿ ತಾನು ಈ ರೀತಿ ನಟಿಸಿರುವುದಾಗಿ ನಾಯ್ಕ್ ಹೇಳಿಕೊಂಡಿದ್ದಾರೆ. ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ರವರು ಬೆದರಿಸರುತ್ತಾರೆ ಎಂದು ಹೇಳಿಕೊಂಡಿರುವ ಇವರು, “ನೀವು ಒಂದು ವೇಳೆ ಹಣ ವಾಪಸ್ ಕೇಳಲು ಮುಂದಾದರೆ ಜಡ್ಜುಗಳಿಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರಿಸುತ್ತಾರಂತೆ. ಅಥವಾ ಭೂಗತ ಪಾತಕಿಗಳ ಸಂಪರ್ಕ ಇದ್ದು ನಿಮ್ಮನ್ನು ಮುಗಿಸಲು ತಯಾರಿ ನಡೆಸಿದ್ದಾರೆ” ಎಂದು ನನ್ನ ಮುಂದೆ ಹೇಳಿಕೊಂಡಿದ್ದಾರೆ.

ಈ ಎಲ್ಲಾ ಸನ್ನಿವೇಶದಲ್ಲಿ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನಾಯ್ಕ್ ಮತ್ತು RSSನ ಹಿರಿಯ ಪ್ರಚಾರಕರಾಗಿ ವಿಶ್ವನಾಥ್ ಜೀ (ರಮೇಶ್) ಮತ್ತು ಕೇಂದ್ರ ನಾಯಕರಾಗಿ ಅನುಕರಿಸಲು ಧನರಾಜ್ ಅವರ ಪಾತ್ರವನ್ನು ಸೃಷ್ಟಿಸಿ ನನ್ನನ್ನು ವಂಚಿಸಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ರವರು ತಮಗೆ ಪ್ರಧಾನಿ ಕಚೇರಿ ಪ್ರಮುಖ, ಬಿಜೆಪಿ ನಾಯಕರ, ಸುಪ್ರೀಂ ಕೋರ್ಟ್ ಜಡ್ಜುಗಳ ಅಭಯ ಇದೆ ಎಂದು ಬಿಂಬಿಸಿ ನನ್ನಿಂದ ಸುಮಾರು 3,50,00,000 ರೂಪಾಯಿಗಳನ್ನು ಹಾಗೂ ಹಾಲಶ್ರೀ ಸ್ವಾಮೀಜಿ ಅವರು ಪ್ರಧಾನಿ ಕಚೇರಿಯ ಪ್ರಭಾವ ಇದೆ ಎಂದು ಬಿಂಬಿಸಿ 1,50,00,000 ರೂಪಾಯಿಗಳನ್ನು ನನ್ನಿಂದ ಪಡೆದು ವಂಚಿಸಿರುತ್ತಾರೆ.

ಸದರಿ ವ್ಯಕ್ತಿಗಳೊಂದಿಗಿನ ಮಾತುಕತೆಗಳು ಹಾಗೂ ವ್ಯವಹಾರಗಳ ಬಗ್ಗೆ ಆಡಿಯೋ, ಸಿಸಿಟಿವಿ ಫೂಟೇಜ್, ವೀಡಿಯೊ ಹಾಗೂ ಇನ್ನಿತರ ದಾಖಲೆಗಳು ನನ್ನ ಬಳಿ ಇದ್ದು ಅವುಗಳನ್ನು ತನಿಖೆಯ ಸಂಬಂಧ ನೀಡಲು ಬದ್ಧನಿದ್ದೇನೆ. ಈ ಮೂಲಕ ತಮ್ಮಲ್ಲಿ ಕೋರುತ್ತಿರುವುದೇನೆಂದರೆ ನನ್ನನ್ನು ನಂಬಿಸಿ ವಂಚಿಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನುಕ್ರಮ ಜರುಗಿಸಿ ನನ್ನ ಹಣವನ್ನು ದೊರಕಿಸಿಕೊಡಬೇಕೆಂದು ವಿನಂತಿಸುತ್ತಿದ್ದಾರೆ. ಈ ಮೂಲಕ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಹೇಗೆ ತಮ್ಮನ್ನು ವಂಚಿಸಿದೆ ಎಂಬುದನ್ನು ಎಳೆಎಳೆಯಾಗಿ ದೂರಿನಲ್ಲಿ ಬಿಚ್ಚಿಟ್ಟಿದ್ದಾರೆ.

ಸದ್ಯ ಚೈತ್ರಾ ಕುಂದಾಪುರ, ಗಗನ್ ಕಡೂರು,
ಶ್ರೀಕಾಂತ ನಾಯಕ್, ಪ್ರಸಾದ್ ಪೊಲೀಸ್ ವಶದಲ್ಲಿದ್ದು ತನಿಖೆ ನಡೆಸಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!