ಉತ್ತರ ಕನ್ನಡ ಜಿಲ್ಲೆಯಲ್ಲಿ ಏರಿಕೆ ಕಾಣುತ್ತಿರುವ ಬ್ಲಾಕ್ ಫಂಗಸ್: ಚಿಕಿತ್ಸೆಗೆ ತೊಡಕಾಗುತ್ತಿರುವ ವೈದ್ಯಕೀಯ ವ್ಯವಸ್ಥೆ!

2698

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಏರಿಕೆ ಕಂಡ ಕರೋನಾ ಆರ್ಭಟ ಇಳಿಕೆಯತ್ತ ಸಾಗುತ್ತಿರುವಾಗಲೇ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸೊಂಕಿನ ಸಂಖ್ಯೆಯಲ್ಲಿ ಏರಿಕೆ ಕಾಣತೊಡಗಿದೆ. ಜಿಲ್ಲೆಯಲ್ಲಿ ಮಂಗಳವಾರ ಸಂಜೆ ವೇಳೆಗೆ ಬ್ಲಾಕ್ ಫಂಗಸ್ ಐದ ಕ್ಕೆ ಏರಿಕೆ ಕಂಡಿದೆ.
ಕಾರವಾರ,ಜೋಯಿಡಾ,ಹಳಿಯಾಳದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾದರೆ,ಅಂಕೋಲದಲ್ಲಿ ಇಂದು ಒಂದೇ ದಿನದಲ್ಲಿ ಇಬ್ಬರಲ್ಲಿ ಪತ್ತೆಯಾಗಿದೆ.

ಸದ್ಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ವಿಶೇಷ ವಾರ್ಡ ಸಹ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಆದರೇ ನುರಿತ ವೈದ್ಯರ ಸಮಸ್ಯೆ ಜೊತೆ ವೈದ್ಯಕೀಯ ಉಪಕರಣದ ವ್ಯವಸ್ಥೆ ಇಲ್ಲದ ಕಾರಣ ಬ್ಲಾಕ್ ಫಂಗಸ್ ಸೋಂಕಿತ ವ್ಯಕ್ತಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.

ಜಿಲ್ಲಾಡಳಿತ ಕ್ರಿಮ್ಸ್ ಕೋವಿಡ್ ವಾರ್ಡ ನಲ್ಲಿ ಇಬ್ಬರು ವೈದ್ಯರನ್ನ ಇದಕ್ಕಾಗಿ ಪ್ರತ್ತೇಕ ನೇಮಿಸಿದೆ.ಆದರೇ ಬ್ಲಾಕ್ ಫಂಗಸ್ ನ ಮೂರನೇ ಹಂತದ ಸೋಂಕಿತರಿಗೆ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಇನ್ನು ನ್ಯೂರೋ ಸರ್ಜನ್ ಸಹ ನೇಮಕ ಮಾಡಲಾಗಿಲ್ಲ. ಇನ್ನು ಸೋಂಕು ತೀವ್ರತೆಯ ಪತ್ತೆಗೆ ಜಿಲ್ಲೆಯಲ್ಲಿ ಎಮ್‌.ಆರ್.ಐ ಸ್ಕ್ಯಾನರ್ ಸಹ ಇಲ್ಲ. ಹೀಗಾಗಿ ನಿಯೋಜನೆಗೊಂಡ ವೈದ್ಯರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ತೊಡಕಾಗಿದೆ.ಔಷಧ ಸಂಗ್ರಹವಿದ್ದರೂ ,ಅದು ಅತ್ಯಲ್ಪವಾಗಿದ್ದು ಸರ್ಕಾರ ದಿಂದ ಹೆಚ್ಚಿನ ಔಷಧಗಳು ಬರಬೇಕಿದೆ.

ಜಿಲ್ಲಾಧಿಕಾರಿ ಹೇಳುವುದೇನು?

ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಹೇಳುವಂತೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಹಂತದ ಸೊಂಕಿಗೆ ಮಾತ್ರ ಚಿಕಿತ್ಸೆ ನೀಡಬಹುದಾಗಿದೆ. ಈವರೆಗೆ ದಾಖಲಾದವರಲ್ಲಿ ಸೋಂಕಿನ ಪ್ರಮಾಣ ತೀವ್ರತೆ ಇದ್ದಿದ್ದರಿಂದ ಮಂಗಳೂರಿಗೆ ಶಿಫಾರಸ್ಸು ಮಾಡಲಾಗಿದೆ. ಕಾರವಾರದಲ್ಲಿ ಓರ್ವ ರೋಗಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಎಮ್‌ಆರ್.ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ,ಸರ್ಕಾರಕ್ಕೆ ಮನವಿ ಮಾಡಲಾಗಿದೆ,ನಮ್ಮಲ್ಲಿ ನ್ಯೂರೋ ಸರ್ಜನ್ ಕೊರತೆ ಇದೆ,ಮೂರನೆ ಹಂತದ ರೋಗಿಗಳು ಬಂದಾಗ ಆಪರೇಷನ್ ಮಾಡಬೇಕಾಗುತ್ತದೆ. ಹೀಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ.ಸದ್ಯ ಔಷಧಿಗಳ ಕೊರತೆ ಇಲ್ಲ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಔಷಧಿಗಳು ಹೆಚ್ಚಿನ ದರ ಇರುವುದರಿಂದ ಇಲ್ಲಿ ದಾಖಲಾದ ನಂತರ ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬ್ಲಾಕ್ ಫಂಗಸ್ ಪತ್ತೆಯೇ ಸಾವಾಲು!

ಜಿಲ್ಲೆಯಲ್ಲಿ ಈವರೆಗೆ ದಾಖಲಾದ ರೋಗಿಗಳಲ್ಲಿ ಬಹುತೇಕರು ಕಿಡ್ನಿ ಸಮಸ್ಯೆ, ಶುಗರ್ ನಂತಹ ಹಲವು ಸಮಸ್ಯೆಯಿಂದ ಬಳಲುತಿದ್ದಾರೆ.

ಸೋಂಕಿತರಲ್ಲಿ ಮೊದಲ ಹಂತದಲ್ಲಿ ಗುರುತಿಸಲು ಹೋಮ್ ಐಸೋಲೇಷನ್ ಅಡ್ಡಿಯಾಗಿದೆ. ಬಹುತೇಕರು ತೀವ್ರತೆಗೊಂಡಾಗ ಆಸ್ಪತ್ರೆಗೆ ದಾಖಲಾಗುತ್ತಾರೆ‌. ಹೀಗೆ ದಾಖಲಾದಾಗ ವೈದ್ಯರಿಗೆ ಪತ್ತೆ ಹಚ್ವಲು ವೈದ್ಯಕೀಯ ಉಪಕರಣಗಳ ಸಮಸ್ಯೆ ಎದುರಾಗಿದೆ. ಜೊತೆಗೆ ತಜ್ಞ ಶಸ್ತ್ರ ಚಿಕಿತ್ಸಕರ ನೇಮಕವಾಗದ ಹಿನ್ನಲೆಯಲ್ಲಿ, ಶಸ್ತ್ರ ಚಿಕಿತ್ಸೆ ನೀಡುವುದು ಸಾಧ್ಯವಾಗದಂತಾಗಿದೆ. ಹೀಗಾಗಿ ಅನಿವಾರ್ಯ ಕಾರಣದಿಂದ ಮಂಗಳೂರಿಗೆ ಕಳುಹಿಸಿಕೊಡುವಂತಾಗಿದೆ.
ಸದ್ಯ ಕಳೆದ ಮೂರು ದಿನಗಳಲ್ಲಿ ಐದು ರೋಗಿಗಳು ಬ್ಲಾಕ್ ಫಂಗಸ್ ಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 345 ಜನ ಕೋವಿಡ್ ಪಾಸಿಟಿವ್ ವರದಿಯಾಗಿದ್ದು,3976 ಜನ ಹೋಮ್ ಐಸೋಲೇಷನ್ ನಲ್ಲಿ ಇದ್ದು, 564 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 4540 ಸಕ್ರಿಯ ಸೋಂಕಿತರಿದ್ದಾರೆ. ಇಂದು 9 ಜನ ಕರೋನಾಕ್ಕೆ ಬಲಿಯಾಗಿದ್ದು ,ಒಟ್ಟು 607 ಕ್ಕೆ ಸಾವಿನ ಸಂಖ್ಯೆ ಏರಿಕೆ ಕಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!