ಕಾರವಾರ: ‘ಕೋವಿಡ್ ಸೋಂಕಿತರ ಐಸೋಲೇಷನ್‌ಗೆ ಅನುಕೂಲವಾಗುವಂತೆ ಕಾರವಾರ ತಾಲ್ಲೂಕಿನ ಶಿರವಾಡದ ಮಾರಿಯಾ ಮ್ಯಾಗ್ನೊ ಫ್ಲೋರಾ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗುವುದು ಎಂದು ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.
ಇಂದು ಕಾರವಾರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಆರೈಕಾ ಕೇಂದ್ರದಲ್ಲಿ ಪ್ರತಿ ಹಾಸಿಗೆಗೂ ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಲಾಗುವುದು. ಮನೊರಂಜನೆಗೆ ಟಿ.ವಿ ವ್ಯವಸ್ಥೆ ಉಚಿತ ಹೈಜನಿಕ್ ಊಟದ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಮೂರನೇ ಅಲೆಯ ತೀವ್ರತೆಯನ್ನು ಗುರಿಯಾಗಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದೆ. ಪಕ್ಷಾತೀತವಾಗಿ ಈ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಆರೈಕೆ ಕೇಂದ್ರ ಆರಂಭಿಸುವಂತೆ ಯುವ ಕಾಂಗ್ರೆಸ್‌ನ ಅಧ್ಯಕ್ಷ ಶ್ರೀನಿವಾಸ್ ಸೂಚನೆ ನೀಡಿದ್ದರು. ಅದರಂತೆ ಕೆಲವು ಹೋಟೆಲ್‌ಗಳ ಮಾಲೀಕರನ್ನು ಸಂಪರ್ಕಿಸಿದ್ದೆವು. ಆದರೆ, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಆಸ್ಪತ್ರೆಯ ಬಗ್ಗೆ ಬಿಷಪ್ ಡೆರಿಕ್ ಫರ್ನಾಂಡೀಸ್ ಅವರ ಬಳಿ ಮನವಿ ಮಾಡಿದಾಗ ಅವರು ಒಪ್ಪಿ ಸಹಮತ ವ್ಯಕ್ತಪಡಿಸಿದರು ಎಂದು ಹೇಳಿದರು.
‘ಕೋವಿಡ್‌ನ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆಯಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ತಾಯಂದಿರೂ ಜೊತೆಗೆ ಇರುವಂತೆ ನೋಡಿಕೊಳ್ಳಲಾಗುವುದು. ಆಸ್ಪತ್ರೆಯ ಪ್ರತಿ ಕೊಠಡಿಗೂ ಟಿ.ವಿ, ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು. ಅಲ್ಲದೇ ಚಿಕಿತ್ಸೆಗೆ ವೈದ್ಯರು ಮತ್ತು ಶುಶ್ರೂಷಕಿಯರನ್ನು ನಿಯೋಜಿಸಲಾಗುತ್ತದೆ’ ಎಂದರು.
ಸೋಂಕು ಸಂಪೂರ್ಣವಾಗಿ ಕಡಿಮೆಯಾಗಿ, ಈ ಕೇಂದ್ರದ ಬಳಕೆ ಆಗದಿರಲಿ ಎಂದೇ ಹಾರೈಸುತ್ತೇವೆ’ ಎಂದು ಹೇಳಿದ ಅವರು ‘ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಯ ದರವನ್ನೂ ಕೇಂದ್ರ ಸರ್ಕಾರವೇ ಭರಿಸಬೇಕು. ₹ 630 ನೀಡಿ ಲಸಿಕೆ ಪಡೆಯಲು ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎಂದು ಒತ್ತಾಯಿಸಿದರು.
ಇನ್ನು ಶಾಸಕರ ಅನುದಾನದಿಂದ ಜಿಲ್ಲೆಗೆ ಆಂಬುಲೆನ್ಸ್‌ಗಳು ಬಂದಿವೆ. ಆದರೆ, ಅವುಗಳಿಗೆ ಚಾಲಕರು, ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಇದರಿಂದ ಏನು ಪ್ರಯೋಜನವಿದೆ? ಎಂದು ಸ್ಥಳೀಯ ಆಡಳಿತದ ಕುರಿತು ಅಸಮದಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ವಕ್ತಾರ ಶಂಭು ಶೆಟ್ಟಿ, ಮುಖಂಡ ಸಂಜಯ ಸಾಳುಂಕೆ ಮತ್ತಿತರರು ಉಪಸ್ಥಿತರಿದ್ದರು.