BREAKING NEWS
Search

ನೌಕಾ ನೆಲೆಯ ಬಳಿ 18 ಗೋವುಗಳ ವಶ! ನೌಕಾಧಿಕಾರಿಗಳೇ ಗೋ ಸಾಗಾಟಕ್ಕೆ ಕುಮ್ಮಕ್ಕು ನೀಡಿದ್ರಾ ? ಶಾಸಕ ಸತೀಶ್ ಸೈಲ್ ಆರೋಪ.

83

ಕಾರವಾರ:- ಕದಂಬ ನೌಕಾನೆಲೆ (kadamba Naval base) ಯ ಬಳಿ 18 ಗೋವುಗಳನ್ನು ಬಜರಂಗದಳ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹಿಡಿದು ಕಾರವಾರ ಗ್ರಾಮೀಣ ಠಾಣೆ ಪೊಲಿಸರ ವಶಕ್ಕೆ ಒಪ್ಪಿಸಿದ ಘಟನೆ ಇಂದು ಸಂಜೆ ನಡೆದಿದೆ.

ಕದಂಬ ನೌಕಾ ನೆಲೆಯ ಒಳಗೆ ಗುಲ್ಬರ್ಗ ಹಾಗೂ ಕಲ್ಬುರ್ಗಿ ಮೂಲದ ಐದು ಜನರಿದ್ದ ಲಾರಿಯೊಂದು ತೆರಳಿ 18 ಗೋವುಗಳನ್ನು ತುಂಬಿಕೊಂಡು ಕಲ್ಬುರ್ಗಿಗೆ ಹೊರಟಿತ್ತು.ಈ ವೇಳೆ ಅಂಕೋಲ ,ಚಂಡಿಯಾ ಮೂಲದ ಬಜರಂಗದಳ ಹಾಗೂ ರಕ್ಷಣಾ ವೇದಿಕೆಯ ಯುವಕರು ತಡೆದು ನಿಲ್ಲಿಸಿ ದಾಖಲೆ ಕೇಳಿದಾಗ ಸಾಗಾಟ ಪರವಾನಿಗೆ ಇರಲಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ನೀಡಲಾಗಿದೆ.
ಘಟನೆ ಸಂಬಂಧ ದಾಖಲೆ ಇಲ್ಲದೇ ಸಾಗಾಟ ಮಾಡುತಿದ್ದ ಲಾರಿ ಹಾಗೂ ಗೋವುಗಳ ಸಮೇತ ಐದು ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಸರಕಾರದ ನಿಯಮ ಮೀರಿ ನೌಕಾ ನೆಲೆ ಅಧಿಕಾರಿಗಳ ಕುಮ್ಮಕ್ಕಿನಿಂದ ಗೋ ಸಾಗಾಟ-ಶಾಸಕ ಸತೀಶ ಸೈಲ್ ಆಕ್ಷೇಪ.

ರಾಜ್ಯ ಸರಕಾರ ರೂಪಿಸಿರುವ ಗೋಹತ್ಯೆ ನಿಷೇಧ ನಿಯಮವನ್ನು ಉಲ್ಲಂಘನೆ ಮಾಡಿ ಕೇಂದ್ರ ಸರಕಾರದ ಅಧೀನದಲ್ಲಿರುವ ರಕ್ಷಣಾ ಮಂತ್ರಾಲಯದ ನೇರ ಸುಪರ್ಧಿ ಯಲ್ಲಿರುವ ಕಾರವಾರ ನೌಕಾನೆಲೆ ಅಧಿಕಾರಿಗಳ ಕುಮ್ಮಕ್ಕಿನಿಂದ ಸೀ ಬರ್ಡ್ ಅರ್ಗಾ ದಿಂದ ಕಲಬುರ್ಗಿಗೆ ವಾಹನದ ಮುಖಾಂತರ ಗೋ ಸಾಗಾಟ
ಮಾಡಲು ಪ್ರಯತ್ನಿಸಿರುವ ನೌಕಾ ನೆಲೆ ಅಧಿಕಾರಿಗಳ ಕಾನೂನು ಬಾಹಿರ ಪ್ರಯತ್ನವನ್ನು ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ತೀವ್ರ ವಾಗಿ ಖಂಡಿಸಿದ್ದಾರೆ.

ಕಾರವಾರದ ಆರ್ಗಾ ನೌಕಾ ನೆಲೆ ಪ್ರದೇಶದಿಂದ ಹಲವಾರು ಗೋವು ಗಳನ್ನು ಕಲ್ಬುರ್ಗಿ ಗೆ ಸಾಗಾಟ ಮಾಡಲು ನೌಕಾ ನೆಲೆ ಅಧಿಕಾರಿಗಳ ಪ್ರಯತ್ನ ರಾಜ್ಯದ ಗೋಹತ್ಯಾ ನಿಷೇಧ ಕಾಯ್ದೆಗೆ ವಿರುದ್ದವಾಗಿದೆ.

ಇದನ್ನೂ ಓದಿ:- ಟಯರ್ ಅಂಗಡಿಗೆ ಬೆಂಕಿ-ಲಕ್ಷಾಂತರ ರುಪಾಯಿ ಟಯರ್ ಬಸ್ಮ

ಕಾನೂನು ಪ್ರಕಾರ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆದು ಗೋ ಸಾಗಾಟ ಮಾಡುವ ಬದಲು ನೌಕಾ ನೆಲೆ ಅಧಿಕಾರಿಗಳು ತಮ್ಮ ಇಚ್ಚೆಯ ಮೇರೆಗೆ ಗೋ ಸಾಗಾಟ ಮಾಡುತ್ತಿರುವುದು ಕಾನೂನಿಗೆ ವಿರುದ್ಧ ವಾಗಿದೆ.

ಅಷ್ಟಕ್ಕೂ ಈ ಜಾನುವಾರುಗಳನ್ನು
ದೂರದ ಕಲಬುರ್ಗಿಗೆ ಸಾಗಾಟ ಮಾಡುವುದಾದರೂ ಏತಕ್ಕಾಗಿ ಎಂಬುದು ಇಲ್ಲಿ ಪ್ರಶ್ನಿಸಬೇಕಾದ ವಿಷಯ.ಕಲಬುರ್ಗಿಗೆ ಯಾವುದಾದರೂ ಗೋ ಶಾಲೆಗೆ
ಕಳುಸುವುದಾದರೆ ಅಲ್ಲಿಯ ಗೋ ಶಾಲೆಗಳ ಯಾವುದಾದರೂ ಪತ್ರವ್ಯವಹಾರ ನೌಕಾನೆಲೆ ಅಧಿಕಾರಿಗಳು ಪಡೆದಿರುವರೇ ಎಂಬದನ್ನು ಕೂಡಾ ತನಿಖೆಗೆ ಒಳಪಡಿಸಬೇಕು.ಹೀಗೆ ಒಂದು ವೇಳೆ ಗೋ ಶಾಲೆ ಗಳಿಗೆಯೇ ಸಾಗಾಟ ಮಾಡುವುದಾದರೆ, ಉತ್ತರ ಕನ್ನಡ ಮತ್ತು ನೆರೆ ಜಿಲ್ಲೆಯಲ್ಲಿರುವ ಅಸಂಖ್ಯಾತ ಗೋ ಶಾಲೆ ಗಳನ್ನು ಬಿಟ್ಟು ದೂರದ ಕಲಬುರ್ಗಿಗೆ ಕಳುಸುವುದಾದರೂ ಏತಕ್ಕಾಗಿ ಎಂದು ಸೈಲ್ ಪ್ರಶ್ನಿಸಿದ್ದು ಇದಕ್ಕೆ ಬಿಜೆಪಿಗರು ಉತ್ತರಿಸ ಬೇಕಾಗಿದೆ ಎಂದಿದ್ದಾರೆ.ಅಷ್ಟಾಗಿಯೂ ಈ ಜಾನುವಾರುಗಳು ನಿರ್ದಿಷ್ಟ ಸ್ಥಳಕ್ಕೆ ತಲುಪುವ ಸಾದ್ಯತೆ ಕೂಡಾ ಅತೀ ಕಡಿಮೆ,ಯಾಕೆಂದರೆ ಈ ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುವ ಪ್ರಯತ್ನ ಆಗಿರಬಾರದೇಕೆ ಎಂದು ಜನಸಾಮಾನ್ಯರು ಅಭಿಪ್ರಾಯ ಪಡುತ್ತಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ತಪ್ಪಿತಸ್ಥರು ಎಷ್ಟು ಪ್ರಭಾವಿಗಳಿದ್ದರೂ ಗಣನೆಗೆ ತೆಗೆದು ಕೊಳ್ಳದೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ. ಈ ವಿಷಯದ ಗಂಭೀರತೆಯನ್ನು ತಾನು ದೇಶದ ರಕ್ಷಣಾ ಮಂತ್ರಿ,ನಮ್ಮ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿ ಗಳ ಗಮನಕ್ಕೆ ತರುವುದಾಗಿ ಶಾಸಕ ಸತೀಶ ಕೃಷ್ಣ ಸೈಲ್ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!