BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಸುದ್ದಿ ನೋಟ-ಲೋಕಲ್ ನ್ಯೂಸ್-15-09-2021

693

ಮೂರು ವರ್ಷದಿಂದ ಅಡಿಕೆ ಬೆಳೆಹಾನಿಗೆ ಸಿಗದ ಪರಿಹಾರ-ಮಲೆನಾಡಿನ ಬೆಳಗಾರರಿಗೆ ಮಣ್ಣಾದ ಬಂಗಾರದ ಬೆಳೆ ಅಡಿಕೆ

ಕಾರವಾರ : ಅತಿಯಾದ ಮಳೆ, ಆಗಾಗ ಬಂದು ಹೋಗುವ ಬಿಸಿಲು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಪ್ರಮುಖ ಬೆಳೆ ಅಡಿಕೆಗೆ ಕೊಳೆರೋಗ ಹೆಚ್ಚು ಆವರಿಸಲು ಅನುಕೂಲವಾಗುತ್ತಿದೆ. ಅಲ್ಪ ಮೊತ್ತದ ವಿಮೆ ಸೌಲಭ್ಯ ಬಿಟ್ಟರೆ ಹಾನಿಗೀಡಾಗುವ ಬೆಳೆಗೆ ಪರಿಹಾರ ನೀಡಲು ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ ಮೂರು ವರ್ಷದಿಂದ ಅಡಿಕೆ ಬೆಳೆಗಾರರಿಗೆ ನಿಗದಿಯಾದ ಪರಿಹಾರ ದೊರೆತಿಲ್ಲ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿ (ಎನ್.ಡಿ.ಆರ್.ಎಫ್.) ಅಡಿಕೆ ತೋಟಕ್ಕೆ ಹಾನಿ ಉಂಟಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಅತಿವೃಷ್ಟಿ ಕಾರಣಕ್ಕೆ ಉಂಟಾದ ಕೊಳೆರೋಗದಿಂದ ಎದುರಾಗುವ ಹಾನಿಗೆ ಪರಿಹಾರ ನೀಡಲು ಅವಕಾಶ ಇಲ್ಲ. ಹವಾಮಾನ ಆಧಾರಿತ ಬೆಳೆವಿಮೆ ಅಡಿ ಪ್ರತಿ ಹೆಕ್ಟೇರ್ ಗೆ ₹1.28 ಲಕ್ಷ ವಿಮಾ ಮೊತ್ತ ಮಂಜೂರಾಗುತ್ತದೆ. ಆದರೆ,ಕಳೆದ ಮೂರು ವರ್ಷದಿಂದ ಸುರಿದ ಮಳೆಯಿಂದ ತೋಟವನ್ನೇ ಕಳೆದುಕೊಂಡ ರೈತರು ಇತ್ತ ಸಮರ್ಪಕ ಪರಿಹಾರ ಸಿಗದೇ ಕಂಗಾಲಾಗಿದ್ದಾರೆ.

ಪ್ರತಿ ಬಾರಿಯೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಕೊಳೆರೋಗ ಕಾಣಿಸಿಕೊಳ್ಳವುದು ಸಾಮಾನ್ಯ. ಸಾವಿರಾರು ಕ್ವಿಂಟಲ್ ಅಡಿಕೆ ಬೆಳವಣಿಗೆಗೂ ಮೊದಲೆ ಉದುರಿ ಹಾಳಾಗುತ್ತವೆ. ರೈತರು ಎದುರಿಸುವ ನಷ್ಟಕ್ಕೆ ಈವರೆಗೂ ಸರ್ಕಾರ ಸೂಕ್ತ ಪರಿಹಾರ ನಿಗದಿಪಡಿಸದಿರುವುದು ಪರಿಹಾರ ವಿಳಂಬಕ್ಕೆ ಕಾರಣವಾಗಿದೆ.

ಇನ್ನು ವಿಮೆ ಸೌಲಭ್ಯ ಜಾರಿಯಲ್ಲಿರುವ ಕಾರಣಕ್ಕೆ ಕೊಳೆರೋಗಕ್ಕೆ ಪ್ರತ್ಯೇಕ ಪರಿಹಾರ ನೀಡಲು ಅವಕಾಶ ಇಲ್ಲ. ಪ್ರತಿ ವರ್ಷ ಕೊಳೆರೋಗದಿಂದ ಉಂಟಾದ ಹಾನಿಯ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗುತ್ತಿದೆ. ಪರಿಹಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿಯೇ ನಿರ್ಣಯವಾಗಬೇಕು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ರವರು ಹೇಳುತ್ತಾರೆ.

2019–20 ರಲ್ಲಿ ₹323.46 ಕೋಟಿ, 2020–21ರಲ್ಲಿ ₹78.29 ಕೋಟಿ ಮೊತ್ತದ ಅಡಿಕೆ ರೋಗದಿಂದ ನಷ್ಟವಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಈ ಹಾನಿಗೆ ಈವರೆಗೂ ಪರಿಹಾರ ಮಾತ್ರ ಲಭಿಸಿಲ್ಲ.

ಬಂಗಾರದ ಬೆಲೆ ಬಂದರೂ ಕೊಳೆ ರೋಗದಿಂದ ಕೈಗೆ ಸಿಗದ ಬೆಳೆ

ಕಳೆದ ಎರಡು ತಿಂಗಳಿಂದ ಅಡಿಕೆ ದರ ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ. ಕೆಂಪು ಅಡಿಕೆಗೆ ಕ್ವಿಂಟಲ್ ಗೆ ₹50,000 ಇದೆ. ಚಾಲಿ ₹43 000 ದಾಟುತ್ತಿದೆ. ಆದರೇ ಕೊಳೆ ರೋಗದಿಂದ ಹಾಗೂ ಮಳೆಹಾನಿಯಿಂದ ರೈತರ ಬಳಿ ಹೆಚ್ಚು ಫಸಲು ದಾಸ್ತಾನು ಇಲ್ಲ. ಮುಂದಿನ ವರ್ಷದ ಹಂಗಾಮಿನಲ್ಲಿ ಉತ್ತಮ ದರದ ನಿರೀಕ್ಷೆಯಲ್ಲಿ ರೈತರು ಇರುವಾಗಲೆ ಕೊಳೆರೋಗದ ಬಾಧೆ ಇದೀಗ ಮಲೆನಾಡು ಭಾಗದಲ್ಲಿ ಕಾಡುತ್ತಿದೆ.

ಉತ್ತಮ ಬೆಲೆ ಇದ್ದರೂ ಬೆಳೆ ಕಾಯ್ದುಕೊಳ್ಳಲು ಬಹುಪಾಲು ರೈತರಿಗೆ ಸಾಧ್ಯವಾಗಿಲ್ಲ. ದುಪ್ಪಟ್ಟು ಕೂಲಿದರ ,ನಿರ್ವಹಣ ವೆಚ್ಚ ಹೆಚ್ಚಾಗಿದೆ. ಕೊಳೆರೋಗದಿಂದ ಹಾನಿ ಉಂಟಾದರೆ ಮುಂದಿನ ಹಂಗಾಮಿಗೆ ಮಾರುಕಟ್ಟೆಯಲ್ಲಿ ಅಡಿಕೆ ಆಮದು ಕಡಿಮೆಯಾಗಲೂಬಹುದು. ಇದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು. ಹೀಗಾಗಿ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ ಕೊಳೆರೋಗಕ್ಕೆ ವಿಶೇಷ ಪರಿಹಾರ ನೀಡಬೇಕು ಎನ್ನುವುದು ಮಲೆನಾಡು ಅಡಿಕೆ ಬೆಳೆಗಾರ ಒತ್ತಾಯವಾಗಿದೆ.

ನಿರ್ಬಂಧವಿದ್ದರೂ ಸಮುದ್ರದಲ್ಲಿ ಈಜಲು ಹೋಗಿ ಶಿರಸಿ ನ್ಯಾಯವಾದಿ ಸಾವು.

ಕುಮಟಾ:- ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ನೀರಿನಲ್ಲಿ ಮುಳಗಿ ನ್ಯಾಯವಾದಿ ಸಾವುಕಂಡ ಘಟನೆ ಕುಮಟಾ ವನ್ನಳ್ಳಿ ಕಡಲತೀರದಲ್ಲಿ ಇಂದು ನಡೆದಿದೆ. ಸನುದ್ರದಲ್ಲಿ ಈಜದಂತೆ ಪ್ರವಾಸಿಗರಿಗೆ ನಿರ್ಬಂಧವನ್ನು ವಿಧಿಸಲಾಗಿತ್ತು.ಇದರ ಜೊತೆಗೆ ಕಡಲ ತೀರ ಭಾಗದಲ್ಲಿ ನಿಷೇದಾಜ್ಞೆ ಸಹ ಜಾರಿಮಾಡಿಲಾಗಿದೆ. ಇದರ ಹೊರತಾಗಿಯೂ
ಶಿರಸಿಯ ನ್ಯಾಯವಾದಿ ಸುಬ್ನು ಗೌಡ(42) ಈಜಲು ಹೋಗಿ ಮುಳಗಿ ಸಾವು ಕಂಡಿದ್ದಾರೆ.
ಮೃತ ನ್ಯಾಯವಾದಿ.ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಿತ್ಯ ಬಿರ್ಲಾ ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ- ಕೆಲಸ ನೀಡುವಂತೆ ಆಗ್ರಹ

ಕಾರವಾರ:- ಗುತ್ತಿಗೆ ದಾರರ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿಗೆ ಸರಿಯಾದ ಕೆಲಸ ನೀಡದೇ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಕಾರವಾರ ನಗರದ ಬಿಣಗಾದ ಗ್ರಾಸಂ ಇಂಡಸ್ಟ್ರೀಸ್ ನಲ್ಲಿ ಸಿ.ಐ.ಟಿ.ಯು ನೇತ್ರತ್ವದಲ್ಲಿ 80ಕ್ಕೂ ಹೆಚ್ಚು ಜನ ಕಾರ್ಮಿಕರು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನೆಡೆಸಿದರು.

ಕಳೆದ ಹಲವು ವರ್ಷಗಳಿಂದ ಗುತ್ತಿಗೆ ದಾರರ ಅಡಿಯಲ್ಲಿ ಆದಿತ್ಯ ಬಿರ್ಲಾ ಕಂಪನಿಯ ಗ್ರಾಸಂ ಇಂಡಸ್ಟ್ರೀಯಲ್ಲಿ ಕಾರ್ಯ ನಿರ್ವಹಿಸುತಿದ್ದು ,ಕೋವಿಡ್ ನೆಪವೊಡ್ಡಿ 15 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ,ಇದರಿಂದ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ.ಈ ಕುರಿತು ಕಂಪನಿಯ ವ್ಯವಸ್ಥಾಪಕರಿಗೂ ಗಮನಕ್ಕೆ ತರಲಾಗಿದೆ.ಆದರೇ ಯಾವುದೇ ಪ್ರಯೊಜನವಾಗಿಲ್ಲ. ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಹೊನ್ನಾವರ ಖಾಸಗಿ ಬಂದರು ಯೋಜನೆ ಕೈಬಿಡಲು ಮೀನುಗಾರರ ಒತ್ತಾಯ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಖಾಸಗಿ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಮೀನುಗಾರರ ಮುಖಂಡರು ಒತ್ತಾಯಿಸಿದ್ದಾರೆ. ಇಂದು ಸಂಜೆ ಕಾರವಾರದಲ್ಲಿ ಮಾಧ್ಯಮ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಮೀನುಗಾರ ಮುಖಂಡ ಹಾಗೂ ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ್ ಕೊಚರೇಕರ್ ರವರು ಯೋಜನೆಯನ್ನು ಕೈಬಿಡುವ ವರೆಗೆ ಮಿನುಗಾರರು ಹೋರಾಟ ಮುಂದುವರೆಸುತ್ತಾರೆ. ಜಿಲ್ಲೆಯಾಧ್ಯಾಂತ ಈ ಕುರಿತು ಹೋರಾಟ ನಡೆಸಲಾಗುತ್ತದೆ. ಸರ್ಕಾರದ ಗಮನ ಸೆಳೆಯಲು ಈ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು.

ಹೊನ್ನಾವರದ ಅಂತರಾಷ್ಟ್ರೀಯ ಬ್ಲೂಪ್ಲಾಗ್ ಮನ್ನಣೆ ಪಡೆದ ಕಾಸರಕೋಡು ಇಕೋ ಬೀಚ್ ಗೆ ಹೊಂದಿಕೊಂಡಿರುವ ಸಂಪ್ರದಾಯಿಕ ಮೀನುಗಾರಿಕೆಯ ಆಶ್ರಯ ತಾಣವಾಗಿರುವ ಇಲ್ಲಿನ ಸಮುದ್ರ ತೀರದಲ್ಲಿ ಪರಿಸರ,ಜೀವ ವೈವಿದ್ಯತೆ ,ಸಂಪ್ರದಾಯಿಕ ಮೀನುಗಾರಿಕೆ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಬಲ್ಲ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಮೀನುಗಾರರು ವ್ಯಾಪಕ ವಿರೋಧ ಮಾಡಿಕೊಂಡು ಬಂದಿದ್ದಾರೆ. ಆದರೂ ಕನೂನು ಉಲ್ಲಂಘಿಸಿ ಇಲ್ಲಿನ ಮೀನುಗಾರರನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆದಿದೆ.
ಈ ಹಿಂದೆ ರಸ್ತೆ ನಿರ್ಮಾಣ ನೆಪದಲ್ಲಿ ಮೀನುಗಾರರನ್ನು ವಕ್ಕಲೆಬ್ಬಿಸುವ ಕಾರ್ಯ ನಡೆದಿದೆ. ಹೀಗಾಗಿ ಮೀನುಗಾರರಿಗೆ ತೊಂದರೆಯಾಗುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಯಲ್ಲಾಪುರ- ಅಧ್ಯಕ್ಷರ ನಾಮಫಲಕ ಹಾಗೂ ಪಕ್ಷದ ಧ್ವಜ ಅಳವಡಿಸುವ ಕಾರ್ಯಕ್ಕೆ ಚಾಲನೆ.

ಯಲ್ಲಾಪುರ :ಬಿಜೆಪಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್ ಗಾಂವ್ಕರ್ ಅವರ ನೇತೃತ್ವದಲ್ಲಿ ಇಂದು ಯುವ ನಾಯಕರಾದ ವಿವೇಕ್ ಹೆಬ್ಬಾರ್ ಅವರು ತಾಲೂಕಿನ ಹೆಮ್ಮಾಡಿಯ ಬೂತ್ ಅಧ್ಯಕ್ಷರಾದ ಗಣೇಶ ಪಟಗಾರ ಅವರ ಮನೆಗೆ ಭೇಟಿ ನೀಡಿ, ಬೂತ್ ಅಧ್ಯಕ್ಷರ ನಾಮಫಲಕ ಹಾಗೂ ಪಕ್ಷದ ಧ್ವಜವನ್ನು ಅಳವಡಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎನ್ ಗಾಂವ್ಕರ್, ಉಪಾಧ್ಯಕ್ಷರಾದ ಪ್ರಭು, ಖಜಾಂಚಿ ಮುರಳಿ ಹೆಗಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ದತ್ತು ಡಿ. ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರಾಘವೇಂದ್ರ ಹೆಗಡೆ, ತಾಲೂಕಾ ಪಂಚಾಯತ ಮಾಜಿ ಸದಸ್ಯರಾದ ನಟರಾಜ್ ಗೌಡ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!