BREAKING NEWS
Search

ಪ್ರವಾಹದ ನಂತರ ಕೃಷಿ ಜಮೀನಿನಲ್ಲಿ ಹೂಳು-ಬೆಳೆ ಬೆಳೆಯಲಾಗದೇ ಕಂಗೆಟ್ಟ ರೈತರು

513

ಕಾರವಾರ :- ಉತ್ತರ ಜಿಲ್ಲೆಯಲ್ಲಿ ಕಳೆದ ಜುಲೈ 23ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದ 1700 ಹೆಕ್ಟೇರ್ ಗೂ ಹೆಚ್ಚು ಕೃಷಿ ಭೂಮಿಗೆ ಹಾನಿಯಾಗಿದೆ. ಅದರಲ್ಲೂ ಬಹುತೇಕ ಕಡೆ ಗದ್ದೆಗಳಲ್ಲಿ ಮಣ್ಣು ತುಂಬಿಕೊಂಡಿದ್ದು ರೈತರು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ಬಳಿಕ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಹಾನಿಯ ಜಂಟಿ ಸರ್ವೆ ಕಾರ್ಯ ಕೈಗೊಂಡಿದೆ. ಈವರೆಗಿನ ಲೆಕ್ಕಾಚಾರದ ಪ್ರಕಾರ 1700 ಹೆಕ್ಟೇರ್ ಕೃಷಿ ಭೀಮಿ ಮತ್ತು ಸುಮಾರು 600 ಹೆಕ್ಟೇರ್ ತೋಟಗಾರಿಕೆ ಭೂಮಿ ಹಾನಿಗೊಳಗಾಗಿದೆ. ಹಾನಿಗೊಳಗಾದ ಕೃಷಿ ಭೂಮಿಯ ಪೈಕಿ ಕೆಲವೆಡೆ ಪ್ರವಾಹದ ನೀರು ತುಂಬಿಕೊಂಡು ಬೆಳೆ ನಾಶವಾಗಿದ್ದರೆ 600.08 ಹೆಕ್ಟೇರ್ ಭೂಮಿಯಲ್ಲಿ ಪ್ರವಾಹದಿಂದ ಕೊಚ್ಚಿಕೊಂಡು ಬಂದ ಮಣ್ಣು ಮತ್ತು ಮರಳು ಭರ್ತಿಯಾಗಿದೆ. ಅದರಲ್ಲೂ ಕೆಲವೆಡೆ ಮೊಣಕಾಲವರೆಗೆ ಮಣ್ಣು ಭರ್ತಿಯಾಗಿದೆ.

ಕೇವಲ ಬೆಳೆ ಹಾನಿಯಾಗಿದ್ದಲ್ಲಿ ಮತ್ತೊಮ್ಮೆ ಬೆಳೆಯನ್ನಾದರೂ ಬೆಳೆಯಬಹುದು. ಆದರೆ ಮಣ್ಣು, ಮರಳು, ಕಟ್ಟಿಗೆ, ಕಸ ತುಂಬಿಕೊಂಡ ಭೂಮಿಯಲ್ಲಿ ಅವುಗಳನ್ನು ಸ್ವಚ್ಛಗೊಳಿಸದ ಹೊರತು ಬೆಳೆ ಬೆಳೆಯಲು ಕಷ್ಟ ಸಾಧ್ಯ. ಶೇಖರಣೆಯಾಗಿರುವ ಮಣ್ಣನ್ನು ಖಾಲಿ ಮಾಡಿ ಭೂಮಿಯನ್ನು ಮೊದಲಿನ ಸ್ಥಿತಿಗೆ ತರಲು ಅಪಾರ ವೆಚ್ಚವಾಗುತ್ತದೆ. ಮೊದಲೇ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಇದು ಗಾಯದಮೇಲೆ ಬರೆ ಎಳೆದಂತಾಗಿದೆ. ಹತಾಶರಾಗಿ ಕೈ ಚೆಲ್ಲಿ ಕುಳಿತಿರುವ ರೈತರಿಗೆ ಭವಿಷ್ಯವೇ ಮಸುಕಾಗಿದೆ.
ಸಂತ್ರಸ್ತರಿಗೆ ಅರೆಕಾಸಿನ ಮಜ್ಜಿಗೆ

ಬೆಳೆ ಹಾನಿಗೆ ಮತ್ತು ಮಣ್ಣು ತುಂಬಿಕೊಂಡಿರುವ ಕೃಷಿ ಭೂಮಿಗೆ ಸರಕಾರ ಪರಿಹಾರವೇನೋ ವಿತರಿಸುತ್ತದೆ, ಆದರೆ ಇದು ಬಡವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಒಂದು ಹೆಕ್ಟೇರ್ ಕೃಷಿ ಬೆಳೆಯ ಹಾನಿಗೆ ಎನ್‍ಡಿಆರ್‍ಎಫ್ ನಿಯಮಾವಳಿಯ ಪ್ರಕಾರ 6800 ರೂ. ಪರಿಹಾರ ನಿಗದಿಪಡಿಸಲಾಗುತ್ತದೆ.

ಇನ್ನು ಕೃಷಿ ಭೂಮಿಯಲ್ಲಿ ಮಣ್ಣು ಮರಳು ತುಂಬಿಕೊಂಡಿದ್ದರೆ ಒಂದು ಹೆಕ್ಟೇರ್‍ಗೆ 12200 ರೂ. ಪರಿಹಾರ ಕೊಡಲಾಗುತ್ತದೆ. ಇಂದಿನ ಹೆಚ್ಚಿನ ಕೂಲಿ ದರದಲ್ಲಿ ಈ ಪರಿಹಾರ ಯಾತಕ್ಕೂ ಸಾಲುವುದಿಲ್ಲ ಎಂಬುದು ರೈತರ ಅಳಲು.

ಒಂದು ಹೆಕ್ಟೇರ್‍ನಲ್ಲಿ ತುಂಬಿಕೊಂಡಿರುವ ಮಣ್ಣನ್ನು ತೆಗೆದು ಭೂಮಿಯನ್ನು ಹದಗೊಳಿಸಿ ಮೊದಲಿನ ಸ್ಥಿತಿಗೆ ತರಲು 50 ಸಾವಿರಕ್ಕೂ ಹೆಚ್ಚು ಖರ್ಚು ತಗುಲುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.


ಸೂಕ್ತ ಪರಿಹಾರ ನೀಡಲಿ

ಸರಕಾರ ಕೇವಲ ನಾಮಕಾವಸ್ತೆ ಪರಿಹಾರ ನೀಡಿ ಕೈತೊಳೆದುಕೊಳ್ಳುವಂತಾಗಬಾರದು. ರೈತರ ಬೆಳೆ ಹಾನಿ ಮತ್ತು ಭೂಮಿ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಬೇಕು. ಸ್ಥಳೀಯ ಕೂಲಿ ದರ, ಯಂತ್ರೋಪಕರಣಗಳು, ಬೀಜದ ವೆಚ್ಚವನ್ನೆಲ್ಲ ಸರಿಯಾಗಿ ಲೆಕ್ಕ ಹಾಕಿ ಪರಿಹಾರ ವಿತರಿಸಬೇಕು ಎಂದು ಬೆಳೆ ಹಾನಿಗೊಳಗಾದ ರೈತ ನೀಲಕಂಠ ನಾಯ್ಕ ಮತ್ತಿತರರು ಆಗ್ರಹಿಸಿದ್ದಾರೆ.

ಇನ್ನು ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ಕೃಷಿ ಬೆಳೆ ಹಾನಿಗೆ ಮತ್ತು ಭುಮಿಯಲ್ಲಿ ಮಣ್ಣು ತುಂಬಿಕೊಂಡಿರುವುದಕ್ಕೆ ಪ್ರತ್ಯೇಕ ಪರಿಹಾರ ನಿಗದಿಪಡಿಸಲಾಗಿದೆ. ಇನ್ನೂ ಜಂಟಿ ಸರ್ವೆ ಚಾಲ್ತಿಯಲ್ಲಿದ್ದು ಸರ್ವೆ ಮುಗಿದಮೇಲೆ ಒಟ್ಟೂ ಹಾನಿಗೊಳಗಾದ ಕೃಷಿ ಭೂಮಿಯ ಲೆಕ್ಕ ಸರಿಯಾಗಿ ಸಿಗಲಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡರವರು ತಿಳಿಸಿದ್ದಾರೆ.

ಇದನ್ನೂ ಓದಿ:-
https://kannadavani.news/kannada-news-today-astrology-11-08-2021-horoscope-kannada/
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!