BREAKING NEWS
Search

ಮಾಧ್ಯಮಗಳ ಮಾಲೀಕರೇ ಪೆಟ್ರೋಲ್ ಕಂಪನಿಗಳ ಮಾಲೀಕತ್ವವನ್ನ ಹೊಂದಿದ್ದಾರೆ? ಬಿಕೆ ಹರಿಪ್ರಸಾದ್ ಕಿಡಿ!

1011

ಕಾರವಾರ :- ಮಾಧ್ಯಮಗಳ ಮಾಲೀಕರೇ ಪೆಟ್ರೋಲ್ ಕಂಪೆನಿಗಳನ್ನ ಮಾಲೀಕತ್ವವನ್ನ ಹೊಂದಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟಿಸಿದ್ದರೂ ಮಾಧ್ಯಮಗಳಲ್ಲಿ ವರದಿಯಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್, ದೇಶ ಉಳಿದುಕೊಂಡಿರುವುದು ವರದಿಗಾರರಿಂದ ಮಾತ್ರ. ಅವರು ವರದಿ ಮಾಡಿದರೂ ಅದು ಬರದಂತೆ ನೋಡಿಕೊಳ್ಳುವಲ್ಲಿ ಪೆಟ್ರೋಲಿಯಂ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದಾಗ ಅದನ್ನ ವಿರೋಧಿಸಿ ಸ್ಮೃತಿ ಇರಾನಿಯಂತಹ ಬಿಜೆಪಿ ಮುಖಂಡರುಗಳೇ ರಸ್ತೆಗಿಳಿದು ಪ್ರತಿಭಟಿಸಿದ್ದರು. ಆದರೆ ಈಗ ಅವರ ಬಳಿ ಕೇಳಿದ್ರೆ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದರ ಏರಿಕೆಯಾಗಿದೆ, ಕೊರೊನಾದಿಂದಾಗಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ ಎಂಬ ಕಾರಣಗಳನ್ನ ಕೊಡ್ತಾರೆ.

ಹೀಗಾಗಿ ಇಂತಹ ಬೇಜವಾಬ್ದಾರಿ, ನಾಚಿಕೆಗೆಟ್ಟ, ಜನವಿರೋಧಿ ಸರ್ಕಾರದ ಅಂತ್ಯಸಂಸ್ಕಾರ ಆದಷ್ಟು ಬೇಗ ಆಗಬೇಕು ಎಂದು ನನ್ನ ಆಶಯ ಎಂದರು.

ಇನ್ನು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ರವರ ಆಟಿಯೋ ದಲ್ಲಿ ಹಣ ಕೊಟ್ಟರೆ ಮಾತ್ರ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡುತ್ತಾರೆ ಎನ್ನುವ ದ್ವನಿ ವಿಚಾರವಾಗಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಣದಿಂದ ಎಂಎಲ್ಎಗಳನ್ನೇ ಖರೀದಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇ ಬಿಜೆಪಿಯವರು.

ಆಪರೇಷನ್ ಕಮಲ ಸಂಸ್ಕೃತಿಯ ಜನಕರಿದ್ದರೇ ಅದು ಯಡಿಯೂರಪ್ಪ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಪಕ್ಷದಲ್ಲಿ ನನ್ನ ಕೆಲಸದಿಂದ ಗುರುತಿಸಿಕೊಂಡು ಇಷ್ಟು ದೂರ ಬೆಳೆದುಬಂದಿದ್ದೇನೆ.

ನಾನು ಯಾರಿಗೂ ಹಣಕೊಟ್ಟಿಲ್ಲ, ಯಾರಿಂದಲೂ ಹಣವನ್ನೂ ಪಡೆದಿಲ್ಲ ಎಂದರು.

ಇನ್ನು ಭಾರತೀಯ ಜನತಾ ಪಾರ್ಟಿ ಆರ್‌ಎಸ್ಎಸ್‌ನ ಒಂದು ರಾಜಕೀಯ ಘಟಕವಾಗಿದೆ.

ಅಲ್ಲಿನ ಸರಸಂಘ ಚಾಲಕರ ಸೂಚನೆ ಮೇರೆಗೆ ಬಿಜೆಪಿಯಲ್ಲಿ ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆಯಾಗುತ್ತದೆ.

ಆದರೆ ಕಾಂಗ್ರೆಸ್‌ನಲ್ಲಿ 11 ಸಾವಿರ ಮಂದಿ ಪ್ರದೇಶ ಕಾಂಗ್ರೆಸ್ ಸದಸ್ಯರು ಇದ್ದು ಅವರಿಂದಲೇ ನೇರವಾಗಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಅವರ ಆಶಯ ಇರುವವರೆಗೆ ಕಾಂಗ್ರೆಸ್ ನಲ್ಲಿ ಈಗಿರುವ ಅಧ್ಯಕ್ಷರೇ ಮುಂದುವರೆಯುತ್ತಾರೆ ಎಂದರು.

ಇನ್ನು ಪಾಕಿಸ್ತಾನದ ಹೆಸರು ತೆಗೆದುಕೊಳ್ಳದೇ ಬಿಜೆಪಿ ಒಂದೇ ದಿನ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ಮುಖಂಡರ್ಯಾರೂ ಇದುವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಭಯೋತ್ಪಾದನೆ ನಿರ್ಮೂಲನೆಯಾಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಆದ್ರೆ ಪಾಕಿಸ್ತಾನದ ಶೇರವಾನಿ ಹಾಕಿ ಬಿರಿಯಾನಿ ತಿನ್ನಲು ಹೋಗಿದ್ದು 56 ಇಂಚಿನ ಎದೆಯ ನರೇಂದ್ರ ಮೋದಿಯವರೇ ಹೊರತು ಬೇರೆ ಯಾರೂ ಅಲ್ಲ. ದೇಶಕ್ಕೆ ಪಾಕಿಸ್ತಾನದ ಎದುರು ಇದಕ್ಕಿಂತ ಅವಮಾನ ಬೇರೆ ಇಲ್ಲ ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ,ಶಂಭು ಶಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!