ಕಾರವಾರ: ಕಳೆದ ಒಂದು ತಿಂಗಳ ಹಿಂದೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಈ ಮೇಲ್ ಸಂದೇಶ ಕಳುಹಿಸಿ ಯುವತಿಯಿಂದ ಲಕ್ಷ -ಲಕ್ಷ ಪೀಕಿದ್ದ ಸೈಬರ್ ಕಳ್ಳರನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಹೊನ್ನಾವರ ತಾಲೂಕಿನ ಗುಣವಂತೆಯ ನಿವಾಸಿ ನೇತ್ರಾವತಿ ಗೌಡ ಎನ್ನುವವರಿಗೆ ಅಮೆರಿಕಾದಲ್ಲಿ ಉದ್ಯೋಗ ನೀಡುವುದಾಗಿ ಇಮೇಲ್ ಕಳುಹಿಸಿ ,ವಿವಿಧ ಸುಂಕದ ಹೆಸರಿನಲ್ಲಿ ಕರ್ನಾಟಕ, ತ್ರಿಪುರಾ, ಆಸ್ಸಾಂ, ತಮಿಳುನಾಡು, ಮಣಿಪುರ, ಗುಜರಾತ್, ದೆಹಲಿ ರಾಜ್ಯದಲ್ಲಿರುವ ತಮ್ಮ ಒಟ್ಟು 17 ಬ್ಯಾಂಕ್ ಖಾತೆಗಳಿಗೆ ನೇತ್ರಾವತಿಯಿಂದ ₹ 57,14,749ನ್ನು ವಂಚಕರು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು.
ತಾನು ವಂಚನೆಗೊಳಗಾದ ಕುರಿತು ಅರಿವಿಗೆ ಬಂದ ನಂತರ ನೇತ್ರಾವತಿ ಜಿಲ್ಲಾ ಸೈಬರ್ ಕ್ರೈಂ ಠಾಣೆಯಲ್ಲಿ ಫೆ.10ರಂದು ದೂರು ನೀಡಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡ ಸಿಇಎನ್ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ ಪಿ. ರವರು ಬೆಂಗಳೂರಿನಲ್ಲಿ ನೆಲಸಿ ವಂಚನೆ ಮಾಡುತಿದ್ದ ಕೋಲಾರ ಮೂಲದ ಅಶೋಕ ಎಂ.ಎನ್, ಅಸ್ಸಾಂ ಮೂಲದ ಬುಲ್ಲಿಯಂಗಿರ್ ಹಲಾಮ್, ತ್ರಿಪುರ ಮೂಲದ ದರ್ತಿನ್ಬೀರ್ ಹಲಾಮ್, ಮಣಿಪುರ ಮೂಲದ ವೊರಿಂಗಮ್ ಫುಂಗ್ಶೋಕ್ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಹಿಡಿದಿದ್ದು ಹೇಗೆ? ಕಿಂಗ್ ಪಿನ್ ಯಾರು ಗೊತ್ತಾ?
ಆರೋಪಿತರು ಬಡ ಜನರಿಗೆ ಹಣದ ಆಸೆ ತೋರಿಸಿ ವಿವಿಧ ಬ್ಯಾಂಕ್ ನಲ್ಲಿ ಖಾತೆ ಮಾಡಿಸುವ ಜೊತೆಗೆ ಅವರ ಹೆಸರಿನಲ್ಲಿ ಸಿಮ್ ಕರೀದಿಸುತಿದ್ದರು.
ಪ್ರತಿ ಖಾತೆಗೆ ಹತ್ತು ಸಾವಿರದಂತೆ ನೀಡಿ ಹಲವು ಬ್ಯಾಂಕ್ ಗಳಲ್ಲಿ ಖಾತೆ ಮಾಡಿಸಿ ಈ ಖಾತೆಯನ್ನು ಹಾಗೂ ಸಿಮ್ ಗಳನ್ನು ನೈಜೀರಿಯಾದ ಕಿಂಗ್ ಪಿನ್ ಗಳಿಗೆ ದುಪ್ಪಟ್ಟು ಹಣಕ್ಕೆ ಮಾರುತಿದ್ದರು.
ಅವರು ಈ ಆರೋಪಿಗಳನ್ನು ಉಪಯೋಗಿಸಿಕೊಂಡು ಸೈಬರ್ ಕ್ರೈಮ್ ಗೆ ಬಳಸಿಕೊಂಡು ಮಗ್ದ ಜನರನ್ನು ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವಿವಿಧ ಸುಂಕದ ಹೆಸರಿನಲ್ಲಿ ಹಣ ಕೇಳಿ ತಾವು ಕರೀದಿಸಿದ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುತಿದ್ದರು.
ಹೀಗೆ ಮಾಡುವುದರಿಂದ ಯಾರು ಮೂಲ ವಂಚಕರಿದ್ದಾರೋ ಅವರು ಸುಲಭವಾಗಿ ತಪ್ಪಿಸಿಕೊಳ್ಳುತಿದ್ದರು.
ಹಣದ ಆಸೆಗೆ ಬ್ಯಾಂಕ್ ಖಾತೆ ಮಾಡಿಸಿ ,ಸಿಮ್ ಕೊಟ್ಟ ಜನರು ಸಿಲುಕಿಕೊಳ್ಳುತಿದ್ದರು.
ಆದರೇ ಈ ಪ್ರಕರಣದಲ್ಲಿ ಪೊಲೀಸರು ಮೂಲ ಬೇರಿಗೆ ಕೈ ಹಾಕಿದ್ದಾರೆ. ನೈಜೀರಿಯನ್ ಸೈಬರ್ ವಂಚಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಇವರು ಖಾತೆ ಮಾಡಿಸಿಕೊಟ್ಟು ಕಮಿಷನ್ ಪಡೆಯುವ ಜೊತೆ ,ಮೂಲ ವಂಚಕರೊಂದಿಗೆ ಇವರ ಪಾಲುದಾರರು ಕೂಡ.
ಆರೋಪಿತರು ಹಣ ವರ್ಗಾವಣೆ ಮಾಡಿಸಿಕೊಂಡ ಎಲ್ಲಾ ಬ್ಯಾಂಕ್ ಖಾತೆಗಳಿಂದ ₹ 2,61,528 ,ಹಣವನ್ನು ಲಾಕ್ ಮಾಡಿಸಿದ್ದು, ಬಂಧಿತರಿಂದ 24,000 ನಗದು, ಒಂದು ಸ್ವೈಪ್ ಮಶೀನ್, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಥಂಬ್ ಮಶೀನ್, 24 ವಿವಿಧ ಬ್ಯಾಂಕ್ ಖಾತೆ, 24 ಎಟಿಎಮ್ ಕಾರ್ಡ್, 24 ಚೆಕ್ ಬುಕ್, 2 ಲ್ಯಾಪ್‌ಟಾಪ್, 23 ಮೊಬೈಲ್, 17 ಸಿಮ್, 1 ಟ್ಯಾಬ್, 2 ಪೆನ್‌ಡ್ರೈವ್, ಒಂದು ಡೊಂಗಲ್, ಒಂದು ವೈಫೈ ರೂಟರ್ ಮಶೀನ್ ಜಪ್ತಿಪಡಿಸಿಕೊಳ್ಳಲಾಗಿದೆ.
ಇನ್ನು ಮೂಲ ಆರೋಪಿಗಳ ಪತ್ತೆ ಸಹ ಆಗಿದ್ದು ಅವರನ್ನು ಸಹ ಶೀಘ್ರ ಬಂಧಿಸಲಿದ್ದಾರೆ.
ಸೈಬರ್ ಕ್ರೈಮ್ ನಲ್ಲಿ ಅತೀ ವೇಗವಾಗಿ ಆರೋಪಿಗಳನ್ನು ಹಿಡಿಯುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ.ಎನ್ ಆಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ, ಸಿಬ್ಬಂದಿಗಳಾದ ಉಮೇಶ ನಾಯ್ಕ, ಸುದರ್ಶನ್ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ನಾರಾಯಣ ಎಮ್.ಎಸ್, ಚಂದ್ರಶೇಖ ಪಾಟೀಲ್, ಸುರೇಶ ನಾಯ್ಕ, ಸಂದೀಪ್ ನಾಯ್ಕ, ಶಿವಾನಂದ ತಾನಸಿ, ಭರತೇಶ್ ಸದಲಗಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಸುದೀರ್ ಮಡಿವಾಳ, ರಮೇಶ ನಾಯ್ಕ ಅವರು ಪಾಲ್ಗೊಂಡಿದ್ದರು.