ಭಟ್ಕಳ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ. ರವರು ಇಂದು ಭಟ್ಕಳ ದ ಹಾಡುವಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಆಡಳಿತ ಮತ್ತು ಅಧಿಕಾರಿಗಳ ವರ್ಗವು ಸಾರ್ವಜನಿಕರಿಂದ ದೂರವಿದೆ ಎಂಬ ಭಾವನೆ ಹೋಗಲಾಡಿಸಲು ಸರ್ಕಾರವು ಈ ಕಾರ್ಯಕ್ರಮ ರೂಪಿಸಿದೆ. ಪೂರ್ತಿದಿನ ಗ್ರಾಮದಲ್ಲಿದ್ದು, ಅಹವಾಲು ಕೇಳಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಇದೊಂದು ಅವಕಾಶವಾಗಿದೆ. ಆರ್ಥಿಕ ಅನುಮೋದನೆಗೆ ಬರುವ ಕಾಮಗಾರಿಗಳ ಹೊರತುಪಡಿಸಿ ಕಂದಾಯ ಇಲಾಖೆಗೆ ಬರುವ ಎಲ್ಲ ಅರ್ಜಿಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು’ ಎಂದರು.
‘ಪ್ರಸ್ತುತ ದಿನಗಳಲ್ಲಿ ಎಲ್ಲವೂ ಲಭ್ಯವಿದ್ದರೂ ಜನನ, ಮರಣ, ಜಾತಿ, ಆದಾಯದಂಥ ಪ್ರಮಾಣ ಪತ್ರಗಳು ಸಿಗಬೇಕಾದರೆ ಜನಸಾಮಾನ್ಯರು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ.
ಆದ್ದರಿಂದ ಈ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ.
ಜೊತೆಗೆ ಮುಂಬರುವ ದಿನಗಳಲ್ಲಿ ಯಾವುದೇ ಅರ್ಜಿ ಸಲ್ಲಿಸದಿದ್ದರೂ ತಂತ್ರಜ್ಞಾನದ ಮೂಲಕವೇ ಜನರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ದೊರೆಯುವಂಥ ಕಾರ್ಯಕ್ರಮಗಳನ್ನು ಕಂದಾಯ ಇಲಾಖೆ ರೂಪಿಸುತ್ತಿದೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಪ್ರತಿ ಮೂರನೇ ಶನಿವಾರ ಎಲ್ಲ ತಹಶೀಲ್ದಾರರು, ಉಪವಿಭಾಗದ ಅಧಿಕಾರಿಗಳು ಅವರ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಸಲಿದ್ದಾರೆ.
ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ದಿನಪೂರ್ತಿ ಪಾಲ್ಗೊಳ್ಳಲಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರ ನೀಡಲಿದ್ದಾರೆ. ಹೀಗಾಗಿ ಗ್ರಾಮಸ್ಥರು ಮುಕ್ತವಾಗಿ ತಮ್ಮ ಎಲ್ಲ ರೀತಿಯ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು’ ಎಂದು ಹೇಳಿದರು.
ನಾನು ಕೂಡ ಹಳ್ಳಿ ಜೀವನದಿಂದಲೇ ಬಂದವನು. ಜಿಲ್ಲಾ ಕೇಂದ್ರದಿಂದ ಹೊರಗೆ ನನ್ನ ಮೊದಲ ಭೇಟಿಯನ್ನು ಹಾಡುವಳ್ಳಿ ಗ್ರಾಮದಿಂದ ಆರಂಭಿಸುತ್ತಿದ್ದೇನೆ. ಹಾಗಾಗಿ ನನ್ನ ಜೀವನದುದ್ದಕ್ಕೂ ಹಾಡುವಳ್ಳಿ ಗ್ರಾಮ ನನ್ನ ನೆನಪಿನಿಂದ ಮರೆಯಾಗುವುದಿಲ್ಲ’ ಎಂದರು.
‘ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಉತ್ತಮವಾಗಿದೆ. ಜಿಲ್ಲಾಡಳಿತ, ಕಂದಾಯ ಇಲಾಖೆ, ಅಧಿಕಾರಿಗಳ ವರ್ಗ ಸಾರ್ವಜನಿಕರಿಂದ ತುಂಬಾ ದೂರದಲ್ಲಿದೆ ಎಂಬ ಮನೋಭಾವ ದೂರವಾಗುತ್ತದೆ.
ಕಂದಾಯ ಇಲಾಖೆಯ ಹಲವಾರು ಯೋಜನೆಗಳ ಅನುಮೋದನೆಗೆ ಜಿಲ್ಲೆ, ತಾಲ್ಲೂಕು ಕೇಂದ್ರಕ್ಕೆ ಹೋಗಿ ಬರುವ ಅಲೆದಾಟ ತಪ್ಪಲಿದೆ’ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮೂಲಸೌಕರ್ಯ, ಪಿಂಚಣಿ ಯೋಜನೆ, ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಒಳಗೊಂಡ ಅಹವಾಲುಗಳನ್ನು ಜಿಲ್ಲಾಧಿಕಾರಿಗೆ ನೀಡಿದರು.
ತಹಶೀಲ್ದಾರ ರವಿಚಂದ್ರ, ಪ್ರಭಾರ ಸಹಾಯಕ ಆಯುಕ್ತ ಸಾಜಿದ್ ಅಹಮದ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.