Uttrakannada|ಸರ್ಕಾರಕ್ಕೆ ಕೋಟಿಗಟ್ಟಲೇ ವಂಚಿಸಿದ ಅನಧಿಕೃತ ಪ್ರವಾಸೋಧ್ಯಮ ಸಂಸ್ಥೆಗಳು! ಕೈಕಟ್ಟಿ ಕುಳಿತ ಜಿಲ್ಲಾಡಳಿತ!

139

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಎಂದರೇ ಪ್ರವಾಸಿಗರ ಕಾಶಿ. ಜೊತೆಗೆ ಜಿಲ್ಲೆಗೆ ಪ್ರವಾಸೋಧ್ಯಮ ಜಿಲ್ಲಾಡಳಿತಕ್ಕೆ ವರಮಾನದ ಮೂಲ ಕೂಡ.ಆದ್ರೆ ಪ್ರವಾಸೋಧ್ಯಮದ ಹೆಸರಿನಲ್ಲಿ ಕೋಟಿಗಟ್ಟಲೇ ವರಮಾನ ಬಂದ್ರೂ ಜಿಲ್ಲಾಡಳಿತಕ್ಕೆ ವರಮಾನ ಕಟ್ಟದೇ ಹಲವು ಸಂಸ್ಥೆಗಳು ವಂಚಿಸುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಕಳೆದ ಒಂದು ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ‌ .ಆದ್ರೆ ಪ್ರವಾಸೋಧ್ಯಮ ಸಮಿತಿ ಪ್ರವಾಸಿಗರ ರಕ್ಷಣೆಗೆ ನೇಮಿಸಿದ ಲೈಪ್ ಗಾರ್ಡ ಗಳು, ಪ್ರವಾಸಿ ಮಿತ್ರ ಸಿಬ್ಬಂದಿಗೆ ಈ ಹಿಂದೆ ಸಂಬಳ ನೀಡಲು ಹಣವೇ ಇರಲಿಲ್ಲ.

ಜಿಲ್ಲೆಯ ಕರಾವಳಿ ಭಾಗದ ಮುರ್ಡೇಶ್ವರ, ಗೋಕರ್ಣ ,ಹೊನ್ನಾವರದ ಕಡಲತೀರಗಳು ಹಾಗೂ ಜೋಯಿಡಾ ತಾಲೂಕಿನ ದಾಂಡೇಲಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಬರುತಿದ್ದಾರೆ. ಇಲ್ಲಿ ಜಲಸಾಹಸ ಕ್ರೀಡೆಗಳು, ಸ್ಕೂಬಾ ಡೈವ್ ಮುಂತಾದ ಚಟುವಟಿಕೆಗಳು ನಡೆಯುತ್ತವೆ.ಇನ್ನು ಹೊಮ್ ಸ್ಟೇಗಳು ರೆಸಾರ್ಟಗಳು ಸಾವಿರಾರು ಇವೆ. ಹೀಗಿರುವಾಗ ಜಲಸಾಹಸ ಕ್ರೀಡೆ ಆಯೋಜಿಸುವ ಸಂಸ್ಥೆಗಳು,ರೆಸಾರ್ಟ ನವರು ಲಾಭದಲ್ಲಿ 15 ರಿಂದ 20% ನನ್ನು ಪ್ರವಾಸೋಧ್ಯಮ ಸಮಿತಿಗೆ ನೀಡಬೇಕು. ಆದರೇ ದಾಂಡೇಲಿಯಲ್ಲಿ ನಡೆಯುವ ರಿವರ್ ರ್ಯಾಪ್ಟಿಂಗ್ ಹಾಗೂ ಜಲಸಾಹಸ ಕ್ರೀಡಾ ಚಟುವಟಿಕೆಗೆ ಪ್ರಾರಂಭವಾದಾಗಿನಿಂದ ಈವರೆಗೂ ನಿಯಮ ಭಾಹಿರವಾಗಿ ನಡೆದುಕೊಂಡು ಬಂದಿದ್ದು ಪ್ರವಾಸೋಧ್ಯಮ ಇಲಾಖೆಗೆ ಕಟ್ಟಬೇಕಾದ ಹಣನ್ನೇ ಕಟ್ಟಿಲ್ಲ. ಇನ್ನು ಕರಾವಳಿ ತೀರ ಪ್ರದೇಶದಲ್ಲಿ ಜಲಸಾಹಸ ಚಟುವಟಿಕೆಯನ್ನು ಕೆಲವೇ ಕೆಲವು ಸಂಸ್ಥೆಗಳು ಅನುಮತಿ ಪಡೆದು ನಡೆಸಿದರೇ ಹಲವು ಸಂಸ್ಥೆಗಳು ಪರವಾನಿಗೆ ಪಡೆಯದೇ ನಡೆಸುತಿದ್ದು ಪ್ರವಾಸಿಗರ ಸುರಕ್ಷತೆಯ ಕ್ರಮ ಸಹ ತೆಗೆದುಕೊಳ್ಳದೇ ಪ್ರವಾಸಿಗರ ಜೀವದ ಜೊತೆ ಚಲ್ಲಾಟ ಆಡುತಿದ್ದಾರೆ.

ಇನ್ನು ನಿಯಮ ಬಾಹಿರವಾಗಿ ಹೋಮ್ ಸ್ಟೇ ಹಾಗೂ ರೆಸಾರ್ಟ ಗಳನ್ನು ನಡೆಸುತಿದ್ದು ಕೋಟಿಗಟ್ಟಲೇ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪ್ರವಾಸೋಧ್ಯಮ ಸಮಿತಿಗೂ ಮಾಹಿತಿ ಇರದೇ ಇರುವುದು ದುರಾದೃಷ್ಟಕರವಾಗಿದ್ದು ಈ ಕುರಿತು ಜೋಯಿಡಾದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಎಂಬುವವರು ಮಾಹಿತಿ ಹಕ್ಕಿನಲ್ಲಿ ಪ್ರವಾಸೋಧ್ಯಮ ಇಲಾಖೆ ಕೇಳಿದ ಮಾಹಿತಿಯಲ್ಲಿ ಇದು ಸ್ಪಷ್ಟವಾಗಿದೆ.
ಕಳೆದ ವರ್ಷದವರೆಗೂ ಜಲಸಾಹಸ ಕ್ರೀಡೆ ನಡೆಸುವ ದಾಂಡೇಲಿ ಭಾಗದ ಯಾವ ಸಂಸ್ಥೆ,ರೆಸಾರ್ಟಗಳು ಜಿಲ್ಲಾ ಪ್ರವಾಸೋಧ್ಯಮ ಸಮಿತಿಗೆ ಸಲ್ಲಿಸಬೇಕಾದ ಶುಲ್ಕ ನೀಡಿಲ್ಲ. ಈ ಮೂಲಕ ಇಷ್ಟುವರ್ಷ ಎಷ್ಟು ಆದಾಯ ಬಂದಿದೆ, ಏನಾಯ್ತು ಎಂಬ ಮಾಹಿತಿಯೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ತಿಳಿದಿಲ್ಲ.

ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮಾಡಿದ್ದೇನು?

ಈ ಹಿಂದೆ ಪ್ರವಾಸೋಧ್ಯಮ ಸಂಸ್ಥೆಗಳು ದಾಂಡೇಲಿ ಭಾಗದಲ್ಲಿ ಸಮಿತಿಗೆ ಶುಲ್ಕ ನೀಡದೇ ವಂಚಿಸಿದ ಪ್ರಕರಣವನ್ನು ಅಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರ ಗಮನಕ್ಕೆ ಒಂದಿತ್ತು.ಹೀಗಾಗಿ ಹಿಂದೆ ಅನಧಿಕೃತವಾಗಿ ಜಲಸಾಹಸ ಕ್ರೀಡೆ ನಡೆಸುತಿದ್ದ ಸಂಸ್ಥೆಗಳಿಗೆ ನೋಟಿಸ್ ನೀಡುವ ಜೊತೆ ಆಧಾಯ ವಂಚನೆಯಾಗದಂತೆ ತಡೆಯಲು ಕ್ರಮ ಕೈಗೊಂಡಿದ್ದರು. ಆದ್ರೆ ಅಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾಗುತಿದ್ದಂತೆ ಈಗಿನ ಜಿಲ್ಲಾಧಿಕಾರಿಯವರ ಅಸಡ್ಡೆಯಿಂದ ಶುಲ್ಕ ವಂಚಿಸುವ ಉದ್ಯಮಿಗಳಿಗೆ ಮತ್ತೆ ಅವಕಾಶ ನೀಡಿದಂತಾಗಿದೆ.

ಮಾಹಿತಿ ಕಲೆಹಾಕುವುದೇ ಸಾಹಸ!

Photo courtesy Tripadvisor

ದಾಂಡೇಲಿಯಲ್ಲಿ (Dandeli) ಅನಧಿಕೃತ ರಿವರ್ ರ್ಯಾಪ್ಟಿಂಗ್ ,ಹೋಮ್ ಸ್ಟೇ ,ರೆಸಾರ್ಟಗಳು ಕರಾವಳಿ ಭಾಗದಲ್ಲಿ ಅನುಮತಿ ಪಡೆಯದೇ ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಂಸ್ಥೆಗಳು ಇರುವ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಇದೀಗ ಮಾಹಿತಿ ಕಲೆಹಾಕುತ್ತಿದೆ‌ .

ಇದಲ್ಲದೇ ಸಿಬ್ಬಂದಿ ನೇಮಕ,ಜಲಸಾಹಸ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸುವ ಜೊತೆ ಆದಾಯ ನಷ್ಟವಾಗದಂತೆ ಆಪ್ ಅನ್ನು ಸಿದ್ದಪಡಿಸುತಿದ್ದು ಪ್ರವಾಸೋಧ್ಯಮ ಇಲಾಖೆಯ ಆಪ್ ಮೂಲಕವೇ ಪ್ರವಾಸಿಗರು ಇನ್ನುಮುಂದೆ ಜಲಸಾಹಸ ಕ್ರೀಡೆಗೆ ನೊಂದಣಿ ಮಾಡಿಕೊಳ್ಳಬೇಕಿದೆ. ಈ ಮೂಲಕ ಕೋಟಿಗಟ್ಟಲೇ ಹಿಂದೆ ನಷ್ಟವಾದ ಹಣವನ್ನು ಸರಿದೂಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನು ಪ್ರವಾಸೋಧ್ಯಮ ಕ್ಕೆ ಸಂಬಂಧಿಸಿದ ಸಂಸ್ಥೆಗೆ ಫೆಬ್ರವರಿ 30 ರ ವರೆಗೆ ನೊಂದಣಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ನಿರ್ದೇಶಕ ಜಯಂತ್ ಮಾಹಿತಿ ನೀಡಿದ್ದಾರೆ.

ಉಂಡುಹೋದ ಕೊಂಡುಹೋದ ಎನ್ನುವಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಸಂಸ್ಥೆಗಳು ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ವಂಚಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾದ ಪ್ರವಾಸೋಧ್ಯ‌ಮ ಸಮಿತಿಯವರಿಗೂ ಮಾಹಿತಿ ಇಲ್ಲ. ಇನ್ನಾದರೂ ಎಚ್ಚೆತ್ತು ಸಂಬಂಧ ಪಟ್ಟ ಇಲಾಖೆ ಆಗುತ್ತಿರುವ ನಷ್ಟವನ್ನು ತಪ್ಪಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!