BREAKING NEWS
Search

ಹೊನ್ನಾವರ:ಖಾಸಗಿ ವಾಣಿಜ್ಯ ಬಂದರು ಕಾಮಗಾರಿ ನಿಲ್ಲಿಸದಿದ್ರೆ ಉಗ್ರ ಹೋರಾಟ-ರಾಜು ತಾಂಡೇಲ್.

545

ಕಾರವಾರ:ಹೊನ್ನಾವರದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡುವುದನ್ನು ಸರಕಾರ ತಕ್ಷಣ ತಡೆಯಬೇಕು ಇಲ್ಲವಾದಲ್ಲಿ ರಾಜ್ಯದ ವಿವಿಧ ಮೀನುಗಾರಿಕಾ ಸಂಘಟನೆಯ ಜೊತೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಎಚ್ಚರಿಸಿದ್ದಾರೆ.

ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ವಾಣಿಜ್ಯ ಬಂದರು ನಿರ್ಮಾಣವಾದರೆ ಹೊನ್ನಾವರದ ಕಾಸರಕೋಡು ಭಾಗದ ಸ್ಥಳೀಯ ಮೀನುಗಾರರ ಬದುಕು ಸಂಪೂರ್ಣ ಅತಂತ್ರವಾಗಲಿದೆ.

ಅಲ್ಲದೆ ವಾಣಿಜ್ಯ ಬಂದರಿಗೆ ಸಂಪರ್ಕ ಕಲ್ಪಿಸಲು ನಾಲ್ಕು ಕಿ.ಮಿ.,40 ಮೀಟರ್ ಅಗಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು ,ಇದು ಮೀನುಗಾರರು ಇರುವ ಸ್ಥಳದಿಂದಲೇ ಹಾದು ಹೋಗಲಿದೆ.

ಇಲ್ಲಿ ಕಳೆದ ಅನೇಕ ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯಿಂದ ಅನೇಕರು ನಿರ್ಗತಿಕರಾಗಲಿದ್ದಾರೆ ಎಂದರು.

ಕಾಸರಕೋಡು ಗ್ರಾಮದ ಮೀನುಗಾರಕಾ ವೃತ್ತಿಯಲ್ಲಿ ತೊಡಗಿದ ವಿವಿಧ ಜಾತಿ-ಧರ್ಮ ಪಂಗಡಗಳ ಮೀನುಗಾರರಿದ್ದಾರೆ.

ಪಾರಂಪರಿಕವಾಗಿ ಸಮುದ್ರ ದಂಡೆಯಲ್ಲಿ ಪಾತಿದೋಣಿ, ನಾಡದೋಣಿ, ಗಿಲ್ನೆಟ್ ದೋಣಿ, ಪರ್ಶಿಯನ್ ಬೋಟ್, ಟ್ರಾಲರ್ ಬೋಟ್ ಮೂಲಕದ ಸಮುದ್ರದಲ್ಲಿ ಪಾರಂಪರಿಕವಾಗಿ ಮೀನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಹೊನ್ನಾವರ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಗೆ ಸರಕಾರವು ಸುಳ್ಳು ದಾಖಲೆಗಳನ್ನಾಧರಿಸಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಪ್ರದೇಶವನ್ನು ಬಿಟ್ಟುಕೊಟ್ಟಿದೆ.

ಗುತ್ತಿಗೆ ಪಡೆದ ಕಂಪನೆ ಸರಕಾರದಿಂದ ಭೂಮಿಯನ್ನು ಪಡೆದು ಏಕಾಎಕಿ ಕಾಮಗಾರಿ ಆರಂಭಿಸಿದ್ದಾರೆ. ಈ ಕಾಮಗಾರಿಗೆ ಮೀನುಗಾರರ ಸಂಪೂರ್ಣ ವಿರೋಧವಿದೆ.

ಸರಕಾರಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಬಂದರು ನಿರ್ಮಾಣ ಮಾಡುವುದರಿಂದ ಶರಾವತಿ ನದಿ ಹಾಗೂ ಸಮುದ್ರ ಸೇರುವ ಸಂಗಮ ಪ್ರದೇಶದಲ್ಲಿ ಉದ್ದೇಶಿಯ ಕಾಮಗಾರಿ ಆರಂಭವಾದರೆ ಜೈವಿಕಕೊಂಡಿಗೆ ಅಪಾಯವಾಗಲಿದೆ.

ಜೈವಿಕಕೊಂಡಿ ತಪ್ಪಿದರೆ ಮತ್ಸ್ಯಸಂತತಿ ನಾಶವಾಗಲಿದೆ. ಮತ್ಸ್ಯಕ್ಷಾಮದಿಂದ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.

ಪಾರಂಪರಿಕ ಮೀನುಗಾರಿಕೆಗೆ ಭಂಗ ಉಂಟಾಗಲಿದ್ದು ಮೀನುಗಾರಿಕೆ ಬಿಟ್ಟಿ ಪರ್ಯಾಯ ವ್ಯವಸ್ಥೆ ಇಲ್ಲದೆ ಇದ್ದರಿಂದ ಮೀನುಗಾರರ ಬದುಕು ಅತಂತ್ರವಾಗಲಿದೆ ಎಂದರು.

ಕಡಲ ಜೀವ ವಿಜ್ಞಾನಿ ಡಾ. ಪ್ರಕಾಶ ಮೇಸ್ತ ಮಾತನಾಡಿ ಹೊನ್ನಾವದಲ್ಲಿ ಖಾಸಗಿ ಬಂದರು ನಿರ್ಮಾಣವಾಗುತ್ತಿದೆ. ಇಲ್ಲಿ ಅನಧಿಕೃತವಾಗಿ ದೇಶದ ಗಡಿಯನ್ನೇ ತಿದ್ದುವ ಕೃತ್ಯ ಮಾಡಲಾಗುತ್ತಿದೆ. ಅಳಿವೆ ಪ್ರದೇಶದ ನಾಲ್ಕು ಕಿಮಿ. ಪ್ರದೇಶದಲ್ಲಿ ಅಭಿವೃದ್ಧಿ ಮಾಡುವಂತಿಲ್ಲ.

ಆದರೂ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾಮಗಾರಿ ಆರಂಭಿಸಲಾಗಿದೆ.

ಸಮುದ್ರದಲ್ಲಿ ದೇಶದ ಗಡಿಯನ್ನು ಬದಲಿಸುವ ಅಧಿಕಾರವು ಕೇವಲ ರಾಷ್ಟ್ರೀಯ ಹೈಡ್ರಾಲಿಕ್ ಅಧಿಕಾರಿಗೆ ಮಾತ್ರವಿದೆ. ಕರಾವಳಿಯು ಅಂತರರಾಷ್ಟ್ರೀಯ ಗಡಿಗೆ ಸಮೀಪದಲ್ಲಿರುವ ಕಾರಣ ಈ ರೀತಿ ಅನಧಿಕೃತವಾಗಿ ಗಡಿ ಬದಲಿಸುವ ಯತ್ನ ನಡೆದಿದೆ ಎಂದರು.

ಕಾಸರಕೋಡು ಗ್ರಾಮದ ಟಿಕ್ಕಾ 2 ಪ್ರದೇಶದಿಂದ ಪಾವಿನಕುರ್ವಾದ ಒಂದು ಭಾಗದ ನಡುವೆ ಇರುವ ಮಲ್ಲುಕುರ್ವದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿಗೆ ಈ ಬೇರೆಯದೇ ಸರ್ವೆ ನಂಬರ್ಗಳಿದ್ದವು. ಆದರೆ, ಅದನ್ನು ಬದಲಿಸಿ ಸರ್ವೆ ನಂಬರ್ ನೀಡಲಾಗಿದೆ.

ಈ ಬಗ್ಗೆ ನಕ್ಷೆಯನ್ನು ಪರಿಶೀಲಿಸಿದಾಗ ಗಡಿ ರೇಖೆ ಬದಲಾಗಿದ್ದು ಗಮನಕ್ಕೆ ಬಂದಿದೆ. ಚಾಲ್ತಿ ಪಹಣಿ ಪತ್ರದ ಮೇಲೆ ಮತ್ತೊಂದು ಸರ್ವೆ ನಂಬರ್ ನಮೂದಿಸಲಾಗಿದೆ ಎಂದು ಅವರು ವಿವರಿಸಿದರು.
ಖಾಸಗಿ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುವುದುರಿಂದ ಸ್ಥಳೀಯ ಮೀನುಗಾರರು ಅತಂತ್ರರಾಗಲಿದ್ದಾರೆ.

ಸರಕಾರ ಯೋಜನೆಯನ್ನು ಕೈಬಿಡಬೇಕು ಎಂದು ಬೋಟ್ ಮಾಲಕರ ಸಂಘದ ವಿವನ್ ಫರ್ನಾಂಡಿಸ್ ಒತ್ತಾಯಿಸಿದರು.

ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಎಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿದ್ದಾರೆ.

ಕಾಸರಕೋಡು ಪ್ರದೇಶದಲ್ಲಿ ಅತೀ ಹೆಚ್ಚು ಮೀನು ಹಿಡಿಯುವ ಪ್ರದೇಶವಾಗಿದೆ. ಇಲ್ಲಿನ ಅಳಿವೆ ಸಮಸ್ಯೆ ಇತ್ತು.

ಬ್ರೇಕ್ ವಾಟರ್ ನಿರ್ಮಾಣ ಮಾಡುವಂತೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಸಹ ಸರಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ.

ಆದರೂ ಸಾವಿರಾರು ಮೀನುಗಾರರ ಇಲ್ಲಿ ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.
ಆದರೆ ಈಗ ಅಭಿವೃದ್ಧಿ ಹೆಸರಿನಲ್ಲಿ ಬಂದರು ಯೋಜನೆ ಮಾಡುತ್ತಿದ್ದರಿಂದ ಸ್ಥಳೀಯ ಮೀನುಗಾರರ ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಂದರಿಗೆ ಪೂರಕವಾಗಿ ಶರಾವತಿ ಅಳವೆ ಪ್ರದೇಶದಲ್ಲಿ ಇದೀಗ ಏಕಾಏಕಿ ಮಣ್ಣು ಸುರಿದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರಸ್ತೆಯಂಚಿನ ಮನೆಗಳ ಜನರು ಆತಂಕಕ್ಕೊಳಗಾಗಿದ್ದಾರೆ. ಮೀನುಗಾರಿಕೆ ಮೂಲಕವೇ ಬದುಕು ಕಟ್ಟಿಕೊಂಡಿರುವ ಈ ಭಾಗದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಸಮಸ್ಯೆಗಳು ಕಾಡಲಿದೆ.

ಸರಕಾರ ಯೋಜನೆಯನ್ನು ಕೈಬಿಡದಿದ್ದರೇ ಎಲ್ಲ ಮೀನುಗಾರರ ಸಂಘಟನೆಗಳು ಸೇರಿ ಉಗ್ರಹ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಅಭಿವೃದ್ಧಿ ನೆಪದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಹಿಂದೆ ಹೊನ್ನಾವರ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಿಸುವಂತೆ ಸಾಕಷ್ಟು ಸಲ ಸರಕಾರಕ್ಕೆ ಒತ್ತಾಯ ಮಾಡಲಾಗಿತ್ತು.

ಆದರೂ ಮಾಡಿಕೊಟ್ಟಿಲ್ಲ. ಅಳಿವೆಯಿಂದ ಹೂಳೆತ್ತಿಲ್ಲ. ಆದರೆ, ಖಾಸಗಿ ಬಂದರಿನ ಕಾಮಗಾರಿ ನಡೆಯುತ್ತಿದೆ. ಮೂಲಕ ಕಳೆದ ಅನೇಕ ವರ್ಷಗಳಿಂದ ಇಲ್ಲಿ ನೆಲೆಸಿರುವ ಮೀನುಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ.

ಪತ್ರಿಕಾಗೋಷ್ಠಿಯಲ್ಲಿ ದಾಮೋದರ ಮೇಸ್ತಾ, ಗಣಪತಿ ತಾಂಡೇಲ್ ಹಾಗೂ ಇನ್ನಿತರರು ಇದ್ದರು. ಪತ್ರಿಕಾಗೋಷ್ಠಿಗೂ ಮುನ್ನಾ ಬಂದರು ನಿರ್ಮಾಣ ಕೈಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ. ಅವರಿಗೆ ಮನವಿ ಸಲ್ಲಿಸಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!