ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದೇವಿಮನೆ ಘಟ್ಟ ಭಾಗದ ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಡಿತಗೊಳ್ಳುತ್ತಿರುವ ಮರಗಳಲ್ಲಿ ಇದ್ದ ನಿಸರಿ ಹುಳುಗಳನ್ನು (ಸ್ಟಿಂಗ್‍ಲೆಸ್ ಬೀ) ರಕ್ಷಣೆ ಮಾಡಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನಲೆಯಿಂದ ಯುವಕನೊಬ್ಬ 90 ಕಿಲೋಮೀಟರ್ ಪ್ರಯಾಣ ಬೆಳಸಿ ಅವುಗಳ ರಕ್ಷಣೆ ಮಾಡುತಿದ್ದಾರೆ.
ಗುರುಪ್ರಸಾದ್ ಕಾನಲೆ ಅಳಿವಿನಂಚಿನಲ್ಲಿದ್ದ ಮಿಸರಿಗೆ ನೆಲೆ ಕಲ್ಪಿಸಿದ ಸಂರಕ್ಷಕ.

ಇವುಗಳ ರಕ್ಷಣೆಗಾಗಿ ಅವರು ಕಾನಲೆಯಿಂದ ಶಿರಸಿ ತಾಲ್ಲೂಕಿನ ಬಂಡಲ ಸಮೀಪದವರೆಗೆ ಎರಡು ತಾಸಿನಲ್ಲಿ 90 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ.
ಜೇನು ಮತ್ತು ಮಿಸರಿ ಹುಳುಗಳ ಸಂರಕ್ಷಣೆಯಲ್ಲಿ ತೊಡಗಿರುವ ಕೃಷಿಕಾಯಕದಲ್ಲಿರುವ ಇವರು ,ಫೇಸ್ ಬುಕ್ ವೀಕ್ಷಿಸುತ್ತಿರುವಾಗ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನಲ್ಲಿರುವ ನಿಸರಿ ಹುಳುಗಳ ಆವಾಸ ಸ್ಥಳಗಳು ಹೆದ್ದಾರಿ ಅಗಲೀಕರಣ ಕಾರಣದಿಂದ ನಶಿಸುತ್ತಿದೆ ಎಂದು ಗಣೇಶ ಹೊಸ್ಮನೆ ಎಂಬುವವರ ಫೇಸ್‍ಬುಕ್ ಪೋಸ್ಟ್ ನೋಡಿದ ಇವರು ಹುಳುಗಳ ರಕ್ಷಣೆಗೆ ಮುಂದಾದರು.
ಹೆದ್ದಾರಿ ವಿಸ್ತರಣೆಗಾಗಿ ಕಳೆದ ಎತಡು ದಿನದಿಂದ ಹಲವು ಮರಗಳಿಗೆ ಕೊಡಲಿ ಏಟು ಬಿದ್ದಿತ್ತು. ಈ ಪೈಕಿ ನಾಲ್ಕಾರು ಮರಗಳಲ್ಲಿ ವಾಸವಿದ್ದ ಮಿಸರಿ ಹುಳುಗಳು ನೆಲೆ ಕಳೆದುಕೊಂಡಿದ್ದರಿಂದ ಚೆಲ್ಲಾಪಿಲ್ಲಿಯಾಗಿ ಹಾರಲಾರಂಭಿಸಿದ್ದವು. ನೂರಾರು ಮರಿಗಳು ಸತ್ತಿದ್ದವು. ಮೊಟ್ಟೆಗಳು ಇರುವೆ, ಓತಿಕ್ಯಾತದ ಪಾಲಾಗುತ್ತಿದ್ದವು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಮಿಸರಿಗಳಿಗೆ ಗುರುಪ್ರಸಾದ ಆಸರೆಯಾದರು.
ಫೇಸ್‍ಬುಕ್ ಪೋಸ್ಟ್ ಗಮನಿಸಿದಾಗ ಚಡಪಡಿಕೆ ಉಂಟಾಯಿತು. ಹುಳುಗಳನ್ನು ಸಮೀಪವಿದ್ದವರು ಸಂರಕ್ಷಿಸುವಂತೆ ವಾಟ್ಸ್‌ಆ್ಯಪ್, ಫೇಸ್‍ಬುಕ್ ಮುಖಾಂತರ ಮನವಿ ಮಾಡಿಕೊಂಡೆ. ಸ್ಪಂದನೆ ಸಿಗದಿದ್ದಾಗ ನಾನೇ ಹೊರಟೆ. ಮರಗಳಿದ್ದ ಜಾಗ ಹುಡುಕುತ್ತ ಸಂಜೆ ಹೊತ್ತಿಗೆ ತಲುಪಿದೆ’ ಎಂದು ಗುರುಪ್ರಸಾದ ತಾವು ರಕ್ಷಣೆ ಮಾಡಿದ ಕುರಿತು ವಿವರಿಸಿದ್ದು ,ಸ್ವಲ್ಪ ತಡವಾಗಿದ್ದರೂ ಹುಳುಗಳು ಸಾಯುತ್ತಿದ್ದವು. ಕತ್ತಲಾದ ಬಳಿಕವೆ ಹುಳುಗಳು ಪೆಟ್ಟಿಗೆ ಸೇರುವ ಕಾರಣ ರಾತ್ರಿಯವರೆಗೂ ಅಲ್ಲಿಯೆ ಕಾದೆ ಎಂದು ವಿವರಿಸಿದರು. ಇನ್ನು ಸಂರಕ್ಷಿಸಲಾದ ಹುಳುಗಳಲ್ಲಿ ಬಹುತೇಕ ಬದುಕಬಹುದು. ಆದರೆ ಮೊಟ್ಟೆಗಳು ಮರಿಯಾಗುವ ಸಂಭವ ಕಡಿಮೆ ಇದೆ. ಬೇರೊಂದು ಪೆಟ್ಟಿಗೆಯಿಂದ ಮುಷ್ಟಿ ಎಳೆ ಮೊಟ್ಟೆ ನೀಡಿ ಗೂಡು ಕಾಪಾಡಬೇಕಿದೆ’ ಎಂದಿದ್ದಾರೆ.
ನಿಸರಿ ಹುಳುಗಳ ಎಂದರೇನು? ಇವುಗಳ ಮಹತ್ವವೇನು?

ಮಿಸರಿ ಅಥವಾ ನಿಸರಿ ಹುಳುಗಳು ಜೇನು ಜಾತಿಗೆ ಸೇರಿದ ಹುಳುಗಳಾಗಿದ್ದು ಮರಗಳ ಪೊಟರೆಗಳಲ್ಲಿ ಗೂಡು ಕಟ್ಟಿ ಜೇನು ಮಾದರಿಯಲ್ಲಿ ಸಿಹಿಯಾದ ತುಪ್ಪ ಸಿದ್ಧಪಡಿಸುತ್ತವೆ. ಜೇನುತುಪ್ಪದಂತೆ ಇರುವ ಇವು ಔಷಧಗಳಿಗೆ ಬಳಕೆಯಾಗುತ್ತವೆ. ಇವು ಜೇನಿನಂತೆ ಹೊಡೆಯುವುದಿಲ್ಲ. ಅತೀ ಚಿಕ್ಕದಾಗಿರುವ ಇವು ಪಶ್ವಿಮ ಗಟ್ಟದಲ್ಲಿ ಹೆಚ್ಚು ನೆಲೆ ಕಂಡುಕೊಂಡಿವೆ.
ಇನ್ನು ಇವುಗಳ ರಟ್ಟು ಹಿಂಡಿ ತುಪ್ಪದ ತೆಗೆದ ಬಳಿಕ ಅವುಗಳಿಂದ ಸಿದ್ಧಪಡಿಸುವ ಅಂಟು ಪೀಟೋಪಕರಣಗಳ ಪಾಲಿಷ್ ಗೆ ಬಳಕೆಯಾಗುತ್ತದೆ.
ಇವುಗಳು ಜೇನಿನಂತೆ ಬಹುಬೇಗ ತುಪ್ಪ ಸಂಗ್ರಹ ಮಾಡುವುದಿಲ್ಲ . ಹೆಚ್ಚು ಸಮಯ ತುಪ್ಪ ಸಂಗ್ರಹಕ್ಕೆ ತೆಗೆದುಕೊಳ್ಳುತ್ತವೆ. ಈ ಹಿಂದೆ ವೈದ್ಯ ಶಾಸ್ತ್ರ ದಲ್ಲೂ ಕೂಡ ನಿಸರಿ ಜೇನಿನ ಬಗ್ಗೆ ಉಲ್ಲೇಖ ಮಾಡಲಾಗಿದೆ. ಜೇನು ಕೃಷಿಗೆ ಹೋಲಿಸಿದರೆ ನಿಸರಿ ಕೃಷಿ ಲಾಭದಾಯಕವಾಗಿಲ್ಲ.ಹೀಗಾಗಿ ಇವುಗಳ ಸಾಕಾಣಿಕೆ ಕಡಿಮೆ ಇದೆ.
ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿದ್ದ ನಿಸರಿ ಹುಳುಗಳ ಸಂತತಿ ಈಚಿನ ವರ್ಷದಲ್ಲಿ ಹವಾಮಾನ ವೈಪರಿತ್ಯ, ಪರಿಸರನಾಶದಿಂದ ಇಳಿಮುಖಗೊಳ್ಳುತ್ತಿವೆ. ಜೇನಿನಂತೆ ಇವುಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದರ ಜೊತೆಗೆ ಪರಿಸರ ಸಮತೋಲನ ಕಾಪಾಡುವ ಇಂತಹವಜೀವಿಗಳ ರಕ್ಷಣೆ ,ಪೋಷಣೆಯ ಅಗತ್ಯ ಸಹ ಇದ್ದು , ಜೇನು ಪ್ರೇಮಿ ಗುರುಪ್ರಸಾದ್ ಕಾರ್ಯ ಶ್ಲಾಘನೀಯವಾಗಿದೆ.