BREAKING NEWS
Search

ಹೊನ್ನಾವರ-ಹಳ್ಳ ದಾಟಲು ಜೀವ ಪಣಕ್ಕಿಟ್ಟ ಗ್ರಾಮಸ್ಥರು!

1126

ಕಾರವಾರ:- ಅಲ್ಪ ಮಳೆ ಬಂದರೂ ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ನಗರದ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ. ಇದೀಗ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಹೊನ್ನಾವರದ ಹೊಸಕುಳಿ ಗ್ರಾಮವು ರಸ್ತೆಯ ಸಂಪರ್ಕ ಕಳೆದುಕೊಂಡಿದ್ದು ಪ್ರತಿ ದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳು,ರೋಗಿಗಳು ಹಾಗೂ ಗರ್ಭಿಣಿ ಸ್ತ್ರೀಯರು ಪರೆದಾಡುವಂತಾಗಿದೆ.

ಪ್ರತಿ ದಿನ ಹರಿಯುತ್ತಿರುವ ನೀರಿನ ನಡುವೆಯೇ ಜೀವ ಕೈಯಲ್ಲಿ ಹಿಡಿದು ಇಲ್ಲಿನ ಜನರು ಸಾಗಬೇಕು.
ಇದು ಹೊನ್ನಾವರದ ಹೊಸಕುಳಿ ಗ್ರಾಮದ ಪ್ರತಿ ದಿನದ ಗೋಳು.

ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ವಾಸವಾಗಿರುವ ಈ ಊರನ್ನು ಚಿಕ್ಕದೊಂದು ಹಳ್ಳ ಬೇರ್ಪಡಿಸುತ್ತದೆ. ಈ ವರೆಗೂ ಈ ಹಳ್ಳಕ್ಕೆ ಸೇತುವೆ ಆಗದ ಕಾರಣ ಅಲ್ಪ ಮಳೆ ಬಂದರೂ ನೀರು ಆವರಿಸಿ ಊರನ್ನು ದಿಗ್ಭಂಧನವಾಗಿಸುತ್ತದೆ.

ಪ್ರತಿ ದಿನ ಈ ಊರಿನಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಇನ್ನು ಅಕಾಲಿಕ ಮಳೆಯಿಂದಾಗಿ ಇದೀಗ ಈ ಊರು ನಗರದ ಸಂಪರ್ಕ ಕಡಿತವಾಗಿದ್ದು ವಿದ್ಯಾರ್ಥಿಗಳು,ಗರ್ಭಿಣಿ ಸ್ತ್ರೀಯರು, ರೋಗಿಗಳು ಪಡಬಾರದ ಪಾಡು ಪಟ್ಟು ಈ ಹಳ್ಳವನ್ನು ದಾಟಿ ಹೋಗಬೇಕಾದ ಸ್ಥಿತಿ ಇದೆ.

ಹೊನ್ನಾವರದ ಈ ಗ್ರಾಮದಲ್ಲಿ ಬಹುತೇಕರು ಹಿಂದುಳಿದ ಜನಾಂಗದವರಿದ್ದಾರೆ .ಜೀವನೋಪಾಯಕ್ಕಾಗಿ ಅಡಿಕೆ,ಭತ್ತದ ಕೃಷಿ ಅವಲಂಭಿಸಿದ್ದಾರೆ. ತಾವು ಬೆಳೆದ ಫಸಲನ್ನು ನಗರಕ್ಕೆ ಕೊಂಡೊಯ್ಯಬೇಕು ಎಂದರೂ ಈ ಹಳ್ಳ ದೊಡ್ಡ ಸಮಸ್ಯೆಯಾಗಿದೆ. ಇನ್ನು ರೋಗಿಗಳು,ವಿದ್ಯಾರ್ಥಿಗಳ ಪಾಡು ಕೇಳತೀರದು. ಬೇಸಿಗೆ ಬಂದರೆ ಈ ಹಳ್ಳ ಬತ್ತುತ್ತದೆ.ಆದರೇ ಇದೀಗ ಅಕಾಲಿಕ ಮಳೆ ಈ ಊರಿನ ಜನರಿಗೆ ನಗರ ಸಂಪರ್ಕವನ್ನು ತುಂಡರಿಸಿದೆ‌.

ಇಷ್ಟು ವರ್ಷದಿಂದಲೂ ಊರಿಗೆ ಮೂಲ ಸೌಕರ್ಯವಿಲ್ಲದೇ ತೊಂದರೆ ಅನುಭವಿಸಿದ್ದೇವೆ ,ಇನ್ನಾದರೂ ನಮ್ಮೂರಿಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಗ್ರಾಮದ ಚಿದಂಬರ ನಾಯ್ಕ ಸ್ಥಳೀಯ ಆಡಳಿತವನ್ನು ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಕೊರತೆ, ಈ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ನಗರ ಸಂಪರ್ಕ ವನ್ನು ಕಡಿದುಕೊಂಡಿದೆ. ಊರಿನ ಜನರು ಎದೆ ಮಟ್ಟದ ನೀರಿನಲ್ಲೇ ಸಂಚಾರ ಮಾಡುವಂತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳು ಇತ್ತ ಗಮನಿಸಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!